ಯಾದಗಿರಿ: ಸರ್ವೆಗೆ 2.5 ಲಕ್ಷ ರು.ಗಳ ಲಂಚ, ಎಸಿಬಿ ದಾಳಿ, ಇಬ್ಬರು ವಶಕ್ಕೆ

By Kannadaprabha NewsFirst Published Jul 23, 2021, 2:22 PM IST
Highlights

* ಹಣದ ಸಮೇತ ಇಬ್ಬರನ್ನ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು
*  ಸರ್ವೇ ಹಾಗೂ ಹದ್ದುಬಸ್ತು ಮಾಡಲು ಲಂಚದ ಬೇಡಡಿಕೆ 
* ಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು
 

ಹುಣಸಗಿ(ಜು.23):  ಜಮೀನೊಂದರ ಸರ್ವೆಗೆ ಸಂಬಂಧಿಸಿದಂತೆ, ರೈತರೊಬ್ಬರಿಂದ ಲಕ್ಷಾಂತರ ರು.ಗಳ ಹಣದ ಲಂಚ ಬೇಡಿಕೆ ಇಟ್ಟಿದ್ದ ಆರೋಪದಡಿ, ಎಸ್ಪಿ ಮೇಘಣ್ಣವರ ಹಾಗೂ ಡಿವೈಎಸ್ಪಿ ಉಮಾಶಂಕರ್‌ ನೇತೃತ್ವದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಸರ್ವೇಯರ್‌ ಸೇರಿದಂತೆ ಇಬ್ಬರನ್ನು ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲೂಕಿನ ಬನಹಟ್ಟಿಯ ಜಮೀನುವೊಂದಕ್ಕೆ ಸಂಬಂಧಿಸಿದಂತೆ ಸರ್ವೇ ಹಾಗೂ ಹದ್ದುಬಸ್ತು ಮಾಡಲು ಸರ್ಕಾರಿ ಭೂಮಾಪಕ ರವಿಕುಮಾರ ಹಾಗೂ ನಾಗೇಶ್ವರರಾವ್‌ ಲಂಚ ಕೇಳಿದ್ದಾರೆ ಎಂದು ರೈತ ಮಹಾದೇವಪ್ಪ ದೂರು ನೀಡಿದ್ದರು. ಬನಹಟ್ಟಿ ಸೀಮಾಂತರದಲ್ಲಿರುವ ಸರ್ವೇ ನಂ.53ಕ್ಕೆ ಸಂಬಂಧಿಸಿದಂತೆ ಸರ್ವೇ ಹಾಗೂ ಹದ್ದುಬಸ್ತು ಮಾಡಿ, ನಕಾಶೆ ಮ್ಯೂಟೆಷನ್‌ ಮಾಡಿಕೊಡಲು ಸರ್ವೇ ಇಲಾಖೆಗೆ ಮಹಾದೇವಪ್ಪ ಅರ್ಜಿ ಸಲ್ಲಿಸಿದ್ದರು.

ಈ ಕಾರ್ಯಕ್ಕೆ ಲಕ್ಷಾಂತರ ರುಪಾಯಿಗಳ ಹಣದ ಬೇಡಿಕೆ ಇಟ್ಟಿದ್ದಾರೆಂದು ಮಹಾದೇವಪ್ಪ ದೂರು ನೀಡಿದ್ದರು. 2 ವರ್ಷಗಳ ಹಿಂದೆಯೇ ಸರ್ವೇ ಹಾಗೂ ಹದ್ದುಬಸ್ತಿಗೆ ಅರ್ಜಿ ನೀಡಿದ್ದರೂ, ನೀಡದ್ದರಿಂದ ಸರ್ವೆ ಮಾಡಿರಲಿಲ್ಲ ಎಂದು ದೂರಿದ ಮಹಾದೇವಪ್ಪ, ಮೂರು ಲಕ್ಷ ರು.ಗಳ ಹಣ ಕೇಳಿ, ಕೊನೆಗೆ 2.5 ಲಕ್ಷ ರು.ಗಳ ನೀಡುವಂತೆ ತಿಳಿಸಿದ್ದರು ಎನ್ನಲಾಗಿದೆ.

ಬೆಳಗಾವಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸೈ, ಇಬ್ಬರು ಪೇದೆ ಎಸಿಬಿ ಬಲೆಗೆ

ಈ ಬಗ್ಗೆ ಎಸಿಬಿಗೆ ಮಹಾದೇವಪ್ಪ ದೂರು ನೀಡಿದಾಗ, ದಾಳಿಯ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ ಅಧಿಕಾರಿಗಳು ಬುಧವಾರ ಹಣವನ್ನು ಸರ್ವೇಯರ್‌ ತಿಳಿಸಿದ ವ್ಯಕ್ತಿಯಾದ ನಾಗೇಶರಾವ್‌ ತಿರುಪತಿ ಎಂಬುವರಿಗೆ ಕೊಡುತ್ತಿರುವ ಸಂದರ್ಭದಲ್ಲಿ ಎಸಿಬಿ ಪೊಲೀಸರು ತಕ್ಷಣ ದಾಳಿ ಮಾಡಿ ಸರ್ವೇಯರ್‌ ರವಿಕುಮಾರ್‌ ಸೇರಿ ಇಬ್ಬರನ್ನೂ ಹಣದ ಸಮೇತ ಬಂಧಿ​ಸಿದ್ದಾರೆ.

ಈ ಕುರಿತು ಯಾದಗಿರಿ ಎಸಿಬಿ ಪೊಲೀಸ್‌ ಠಾಣೆಗುನ್ನೆ ನಂ. 04/2021 ಕಲಂ7(ಎ) ಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್‌ಪೆಕ್ಟರ್‌ ಗುರುಪಾದಪ್ಪ ಬಿರಾದಾರ್‌, ಬಾಬಾ ಸಾಹೇಬ ಪಾಟೀಲ್‌, ಕಲಬುರಗಿ, ರಾಘವೆಂದ್ರ, ನಿರಂಜನ ಪಾಟೀಲ್‌, ಹೆಚ್‌.ಜಿ. ವಿಜಯಕುಮಾರ, ಅಮರ, ಮರೆಪ್ಪ ಸೇರಿದಂತೆ ಇನ್ನಿತರರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
 

click me!