
ಬೆಂಗಳೂರು(ಜೂ.18): ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಭಾಗದಿಂದ ನಗರ ಹೊರ ಹೋಗುವ ಎಲ್ಲ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಸುರಂಗ ರಸ್ತೆಗಳ ನಿರ್ಮಾಣ, ಪ್ರಮುಖ ಸ್ಥಳದಲ್ಲಿ ದಿನದ 24 ಗಂಟೆ ವ್ಯಾಪಾರ ವಹಿವಾಟಿಗೆ ಅವಕಾಶ, ಮೆಟ್ರೋ ಮಾರ್ಗ ವಿಸ್ತರಣೆ, ಕೆರೆಗಳ ಶುದ್ಧಿಕರಣ, ಕಾಲಮಿತಿ ಒಳಗೆ ಯೋಜನೆಗಳ ಪೂರ್ಣಗೊಳಿಸುವುದು.
ವಿಧಾನಸೌಧದಲ್ಲಿ ಶನಿವಾರ ಬೆಂಗಳೂರು ಉಪಮುಖ್ಯಮಂತ್ರಿಯೂ ಆಗಿರುವ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ‘ಬ್ರ್ಯಾಂಡ್ ಬೆಂಗಳೂರು’ ಕುರಿತು ಮೊದಲ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕ್ಷೇತ್ರದ 42 ಮಂದಿ ತಜ್ಞರು, ಗಣ್ಯರು ನಗರದ ಸಮಗ್ರ ಅಭಿವೃದ್ಧಿ ಸಂಬಂಧ ನೀಡಿರುವ ಸಲಹೆಗಳಿವು.
ಟ್ರಾಫಿಕ್ ಜಾಂ ಮುಕ್ತ ಬೆಂಗಳೂರು ಸಂಕಲ್ಪ: ಡಿಕೆಶಿ
ಪ್ರಮುಖವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ನಗರದ ಕೇಂದ್ರ ಭಾಗದಿಂದ ಹೊರ ಭಾಗಕ್ಕೆ ತೆರಳುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಸುರಂಗ ರಸ್ತೆಗಳ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ನಿರ್ಮಾಣಕ್ಕೆ ಸರ್ಕಾರ ಹಣ ನೀಡಬಾರದು, 50ರಿಂದ 60 ವರ್ಷ ಗುತ್ತಿಗೆ ಆಧಾರದಲ್ಲಿ ಖಾಸಗಿ ಕಂಪನಿಗಳೇ ಸುರಂಗ ರಸ್ತೆ ನಿರ್ಮಿಸಲಿವೆ. ಗುತ್ತಿಗೆ ಅವಧಿ ಮುಕ್ತಾಯಗೊಂಡ ಬಳಿಕ ಸರ್ಕಾರ ನಿರ್ವಹಣೆ ಮಾಡಬಹುದು ಎಂಬ ಸಲಹೆ ನೀಡಿದರು.
ನಗರ ಕೆರೆಗಳನ್ನು ಶುದ್ಧಿಕರಣವನ್ನು ಖಾಸಗಿ ಸಂಸ್ಥೆಗಳು ಮಾಡಲಿದ್ದು, ಇದಕ್ಕೆ ಆಗುವ ವೆಚ್ಚವನ್ನು ಖಾಸಗಿ ಸಂಸ್ಥೆಗಳೇ ಭರಿಸಲಿವೆ. ಸೇವೆ ಮಾಡುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಉದ್ಯಮಿಗಳು ಹೇಳಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ ಎಸ್ ಪಾಟೀಲ್, ಸಿದ್ದಯ್ಯ, ರವಿಚಂದ್ರ ಮೊದಲಾದವರಿದ್ದರು.
ಸಾರ್ವಜನಿಕರ ಸಲಹೆಗೆ ವೆಬ್ ಸೈಟ್ ಆರಂಭ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಂಗಳೂರಿಗೆ ಹೊಸ ರೂಪ ನೀಡುವ ಉದ್ದೇಶದಿಂದ ನಗರದ ವಿವಿಧ ಕ್ಷೇತ್ರ ತಜ್ಞರು, ಉದ್ಯಮಿಗಳಿಂದ ಸಲಹೆ ಪಡೆಯುವ ಸಭೆ ನಡೆಸಲಾಯಿತು. ಮುಂದಿನ ವಾರ ಮತ್ತಷ್ಟುಮಂದಿಯಿಂದ ಅಭಿಪ್ರಾಯ ಪಡೆಯಲಾಗುವುದು. ಗಣ್ಯರು, ತಜ್ಞರು, ಶಾಸಕರು, ಸಚಿವರಿಂದ ಬ್ರ್ಯಾಂಡ್ ಬೆಂಗಳೂರಿಗೆ ಸಂಬಂಧಿಸಿದಂತೆ ಸಲಹೆ ಪಡೆಯಲಾಗಿದೆ. ಕೆಲವು ಪ್ರದೇಶಗಳಿಗೆ ಭೇಟಿ ಸಹ ನೀಡಿ ಪರಿಶೀಲನೆ ಮಾಡಿದ್ದೇನೆ. ಇನ್ನು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಬೇಕೆಂದು ನಿರ್ಧರಿಸಲಾಗಿದ್ದು, ಅದಕ್ಕಾಗಿ ಪ್ರತೇಕ ವೆಬ್‌ಸೈಟ್ ತೆರೆಯಲಾಗುವುದು ಎಂದರು.
ಸಾಕಷ್ಟು ಸಲಹೆ ಸೂಚನೆಗಳು ಬಂದಿವೆ. ಆದರೆ, ಸರ್ಕಾರದ ಅರ್ಥಿಕ ಸ್ಥಿತಿ ಗತಿ ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರಚಿಸಬೇಕಿದೆ. ಬೆಂಗಳೂರಿನ ಗೌರವ, ಸ್ವಾಭಿಮಾನ ಉಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ತಯಾರಿಸಲಾಗುವುದು ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಜಧಾನಿಗೆ ಹೊಸ ನಕ್ಷೆ
ಎಲ್ಲರ ಸಲಹೆ ಪಡೆದ ನಂತರ ತಜ್ಞರು, ಗಣ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗುವುದು. ನಂತರ ಬೆಂಗಳೂರಿನ ಅಭಿವೃದ್ಧಿ ಸಂಬಂಧಿಸಿದಂತೆ ಆರು ತಿಂಗಳಲ್ಲಿ ನೀಲ ನಕ್ಷೆ (ಮಾಸ್ಟರ್ ಪ್ಲಾನ್) ರಚಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಹಣ ಕೊಟ್ಟು ಸೇವೆಗೆ ಸಿದ್ಧ: ಉದ್ಯಮಿಗಳು
ಬ್ರ್ಯಾಂಡ್ ಬೆಂಗಳೂರು ಸಭೆಗೆ ಆಗಮಿಸಿದ ಹಲವು ಗಣ್ಯರು, ಉದ್ಯಮಿಗಳು ತಾವೇ ಹಣ ನೀಡಿ, ಸರ್ಕಾರದಿಂದ ನಯಾ ಪೈಸೆ ಖರ್ಚಿಲ್ಲದೇ ನಗರ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದು, ಸರ್ಕಾರದೊಂದಿಗೆ ಕೈಜೋಡಿಸುತ್ತೇವೆ. ತಮ್ಮನ್ನು ಬಳಸಿಕೊಳ್ಳುವಂತೆ ಕೋರಿದ್ದಾರೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.
Bengaluru Traffic: ನಗರದಲ್ಲಿ ಇನ್ಮುಂದೆ ಟ್ರಾಫಿಕ್ ಹೆಚ್ಚಿದ್ದರೆ ಬೇಗ ಗ್ರೀನ್ ಸಿಗ್ನಲ್!
ಹಲವು ವಿಚಾರಗಳ ಬಗ್ಗೆ ಸಲಹೆ
ಹೈಡೆನ್ಸಿಟಿ ಕಾರಿಡಾರ್, ಕಸ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ಉತ್ತಮ ಗುಣಮಟ್ಟದ ಶಿಕ್ಷಣ, ಕೊಳಗೇರಿ ಪ್ರದೇಶ ಅಭಿವೃದ್ಧಿ, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, 20 ಪ್ರಮುಖ ಜಂಕ್ಷನ್ ರಸ್ತೆಗಳ ದಟ್ಟಣೆ ನಿವಾರಣೆ, ನೈಸ್ ರಸ್ತೆಯನ್ನು ವರ್ತುಲ ರಸ್ತೆಯಾಗಿ ಮಾರ್ಪಾಡು, ಪಿಆರ್‌ಆರ್ ರಸ್ತೆ, ಪಾದಚಾರಿ ಮಾರ್ಗ ಸುಧಾರಣೆ, ದಿನದ 24 ಗಂಟೆ ವ್ಯಾಪಾರ, ವಾಹನ ನಿಲುಗಡೆ, ಭ್ರಷ್ಟಾಚಾರ ನಿಯಂತ್ರಣ, ಹೊಸ ಸ್ಯಾಟಲೈಟ್ ಟೌನ್ ನಿರ್ಮಾಣ, ರಸ್ತೆ ಅಗಲೀಕರಣ, ಟಿಡಿಆರ್ ಮಾರ್ಗಸೂಚಿ ಬದಲಾವಣೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸೇರಿದಂತೆ ನೂರಾರು ಸಲಹೆಗಳನ್ನು ತಜ್ಞರು ಮತ್ತು ಉದ್ಯಮಿಗಳು ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಯೋಜನೆ ಸಿದ್ಧಪಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಭಾಗವಹಿಸಿದ ಗಣ್ಯರು
ಉದ್ಯಮಿಗಳಾದ ಆರ್.ಕೆ.ಮಿಶ್ರಾ, ಕ್ರಿಸ್ ಗೋಪಾಲಕೃಷ್ಣ, ಎಂ.ಪಿ.ಶ್ಯಾಮ್, ಇರಫಾನ್, ಸುಧೀರ್ ಕೃಷ್ಣಮೂರ್ತಿ, ಕಿರಣ್ ಮುಜುಂದಾರ್ ಷಾ, ಪ್ರಶಾಂತ್, ಗೀತಾಂಜಲಿ ಕಿರ್ಲೊಸ್ಕರ್, ಡಾ ಮಧುಕರ್ ಕಾಮತ್, ಎಂ.ಆರ್.ಜೈಶಂಕರ್, ರಾಜಾ ಬಾಗ್ಮನೆ, ಅರುಣ್ ಚಿಟ್ಟಿಲಾಪಿಲ್ಲಿ, ಕ್ರಿಕೆಟಿಗ ಬ್ರಿಜೇಶ್ ಪಟೇಲ್, ಬಿ ಪ್ಯಾಕ್ ಸಂಸ್ಥೆನ ಸಿಇಓ ರೇವತಿ ಅಶೋಕ್, ಎಫ್‌ಕೆಸಿಸಿಐನ ಅಧ್ಯಕ್ಷ ಉಲ್ಲಾಸ್ ಕಾಮತ್, ಕೂ ಆಪ್ ಕೋ ಪೌಂಡರ್ ಅಪ್ರಮೇಯ ರಾಮಕೃಷ್ಣ ಸೇರಿದಂತೆ ಮೊದಲಾದವರಿದ್ದರು.