ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಿಸಲು ನವಲಿ ಬಳಿ ನಿರ್ಮಿಸಲಾಗುವ ಜಲಾಶಯ ಕುರಿತಂತೆ ಶೀಘ್ರವೇ ಸರ್ವ ಪಕ್ಷಗಳ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್‌ನಲ್ಲಿ ಭರವಸೆ ನೀಡಿದರು.
ಬೆಳಗಾವಿ (ಡಿ.23) : ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಿಸಲು ನವಲಿ ಬಳಿ ನಿರ್ಮಿಸಲಾಗುವ ಜಲಾಶಯ ಕುರಿತಂತೆ ಶೀಘ್ರವೇ ಸರ್ವ ಪಕ್ಷಗಳ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್‌ನಲ್ಲಿ ಭರವಸೆ ನೀಡಿದರು.
ಪ್ರಶ್ನೋತ್ತರ ವೇಳೆ ಬಳ್ಳಾರಿಯ ಎಂ.ವೈ. ಸತೀಶ ಅವರ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಾಜೋಳ ಉತ್ತರ ನೀಡಿದ ಬಳಿಕ ಮತ್ತಷ್ಟುವಿವರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದ್ದು, ತುಂಗಭದ್ರಾ ಜಲಾಶಯದ ಹೂಳಿನಿಂದ 33 ಟಿಎಂಸಿ ನೀರು ಕೊರತೆ ಇದ್ದು, ಅದನ್ನು ಬಳಸಿಕೊಳ್ಳಲು ಗಂಗಾವತಿ ತಾಲೂಕಿನ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಜತೆ ಅನೌಪಚಾರಿಕವಾಗಿ ಎರಡು ಬಾರಿ ಚರ್ಚೆ ಮಾಡಿದ್ದೇನೆ. ಅಲ್ಲದೇ ಆಂಧ್ರಪ್ರದೇಶದ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ಆಗಮಿಸಿ ನಮ್ಮ ರಾಜ್ಯದ ಅಧಿಕಾರಿಗೊಳೊಂದಿಗೆ ಚರ್ಚೆ ನಡೆಸಿದೆ ಎಂದರು.
ನವಲಿ ಡ್ಯಾಂ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್: ಗಂಗಾವತಿ ಭಾಗದಲ್ಲಿ ಭೂಮಿಗೆ ಬಂತು ಚಿನ್ನದ ಬೆಲೆ..!
ಆದರೆ ಆಂಧ್ರಪ್ರದೇಶ ತನ್ನ ಹಳೆಯ ಬೇಡಿಕೆ ಇಟ್ಟಿದೆ. ಈ ಕಾರಣಕ್ಕಾಗಿ ಈ ವಿಷಯದ ಬಗ್ಗೆ ರಾಜ್ಯ ಅಂತಿಮ ನಿರ್ದಾರ ತೆಗೆದುಕೊಳ್ಳುವ ಮುನ್ನ ಸರ್ವ ಪಕ್ಷಗಳ ಸಭೆ ಕರೆದು ಬಳಿಕ ನಿರ್ಧಾರ ಮಾಡಲಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಹಲವು ವರ್ಷಗಳಿಂದ ಭಾರಿ ಪ್ರಮಾಣದಲ್ಲಿ ಹೂಳು ಶೇಖರಣೆಯಾಗುತ್ತಿದೆ. ಈ ಹೂಳು ಘನೀಕರಣಗೊಂಡು ಕಲ್ಲಾಗಿ ಮಾರ್ಪಾಡಾಗಿದೆ. ಹೂಳೆತ್ತಲು ಸಾಧ್ಯವಾಗುತ್ತಿಲ್ಲ. ಸಮಾನಾಂತರ ಜಲಾಶಯ ನಿರ್ಮಿಸುವುದೇ ಇದಕ್ಕೆ ಪರಿಹಾರವಾಗಿದೆ. ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಈಗಾಗಲೇ ಆಯವ್ಯಯದಲ್ಲಿ .1 ಸಾವಿರ ಕೋಟಿ ಮೀಸಲಿಡಲಾಗಿದೆ. .1340 ಕೋಟಿ ವಿಸ್ತೃತ ಯೋಜನಾ ವರದಿಯೂ ಸಿದ್ಧವಾಗಿದೆ. ತುಂಗಭಧಾ ಮಂಡಳಿಯು ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಜಲಾಶಯ ನಿರ್ಮಾಣಕ್ಕೆ ಮಂಡಳಿಯ ಅನುಮೋದನೆಯೂ ಅಗತ್ಯವಿದೆ.
ನ್ಯಾ. ಬ್ರಿಜೇಶಕುಮಾರ ಮಿಶ್ರಾ ವರದಿಯಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣದ ಮಾನದಂಡದ ಆಧಾರದಲ್ಲಿ ನೀರಿನ ಸಂಪೂರ್ಣವಾಗಿ ಬಳಕೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಮಾನಾಂತರ ಜಲಾಶಯ ಯೋಜನೆ ವರದಿಯು ಪರಿಶೀಲನೆಯಲ್ಲಿದೆ. ನವಲಿ ಸಮಾನಾಂತರ ಜಲಾಶಯ ಯೋಜನೆಯನ್ನು ಕಾರ್ಯಗತಗೊಳಿಸುವ ಕುರಿತು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ, ಅವರ ಸಹಕಾರ, ಅನುಮೋದನೆಯೊಂದಿಗೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಚುನಾವಣೆಯೊಳಗೆ ಬೊಮ್ಮಾಯಿ ಅಧಿಕಾರದಿಂದ ಕೆಳಗೆ?; ಕುತೂಹಲ ಕೆರಳಿಸಿದ ಭವಿಷ್ಯವಾಣಿ
ಅಂತಾರಾಜ್ಯ ಯೋಜನೆಯಾಗಿರುವ ತುಂಗಭದ್ರಾ ಯೋಜನೆಯಡಿ ನ್ಯಾಯಾಧೀಕರಣದಿಂದ ಒಟ್ಟು 230 ಟಿಎಂಸಿ ನೀರಿನ ಹಂಚಿಕೆಯಾಗಿದ್ದು, ಇದರಲ್ಲಿ 18 ಟಿಎಂಸಿ ಆವಿಯಾಗುವಿಕೆ ಪ್ರಮಾಣವೂ ಸೇರಿರುತ್ತದೆ. ತುಂಗಭದ್ರಾ ಯೋಜನೆಯಡಿ ರಾಜ್ಯಕ್ಕೆ 138.99 ಟಿಎಂಸಿ ಮತ್ತು ಅವಿಭಜಿತ ಆಂಧ್ರಪ್ರದೇಶಕ್ಕೆ 73.01 ಟಿಎಂಸಿ ನೀರಿನ ಹಂಚಿಕೆ ಆಗಿದೆ. ತುಂಗಭದ್ರಾ ಜಲಾಶಯದ ವಾರ್ಷಿಕ ಸರಾಸರಿ(1976- 77ರಿಂದ 2019-20) ನೀರಿನ ಬಳಕೆ 174 ಟಿಎಂಸಿ ಇದ್ದು, ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಜಲಾಶಯದ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.