ಶಿವಮೊಗ್ಗ ತುಂಗಾ ನದಿ ಪ್ರಕರಣಕ್ಕೆ ಟ್ವಿಸ್ಟ್: ಮಕ್ಕಳ ರಕ್ಷಣೆಗಾಗಿ ನದಿಗೆ ಹಾರಿದ ಮಹಿಳೆ!

Published : Aug 28, 2026, 12:05 PM IST
Woman jumps into river to save children

ಸಾರಾಂಶ

ಶಿವಮೊಗ್ಗದಲ್ಲಿ ತಾಯಿ ಮತ್ತು ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಬಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇಬ್ಬರು ಮಕ್ಕಳು ಕಾಲು ಜಾರಿ ನದಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ತಾನು ಜಿಗಿದಿದ್ದಾಗಿ ತಾಯಿ ಭವಾನಿ ಹೇಳಿಕೆ ನೀಡಿದ್ದಾರೆ. ನಾಪತ್ತೆಯಾದ ಇಬ್ಬರು ಮಕ್ಕಳಿಗಾಗಿ ಅಗ್ನಿಶಾಮಕ ದಳದ ಶೋಧ ಕಾರ್ಯ ಮುಂದುವರೆದಿದೆ.

ಶಿವಮೊಗ್ಗ: ತಾಯಿ ಮತ್ತು ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಜಿಗಿದ ಪ್ರಕರಣ ತಿರುವು ಪಡೆದುಕೊಂಡಿದ್ದು, ಇಬ್ಬರು ಮಕ್ಕಳು ಕಾಲು ಜಾರಿ ಸೇತುವೆಯಿಂದ ನದಿಗೆ ಬಿದ್ದಿದ್ದಾರೆ ಎಂದು ತಾಯಿಯ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಆ.24ರಂದು ರಾತ್ರಿ ರೈಲ್ವೆ ಮೇಲ್ಸೇತುವೆಯಿಂದ ತುಂಗಾ ನದಿಗೆ ಭವಾನಿ ತನ್ನ ಮೂವರು ಮಕ್ಕಳೊಂದಿಗೆ ಜಿಗಿದಿದ್ದರು. ಈ ವೇಳೆ ಭವಾನಿ ಮತ್ತು 11 ತಿಂಗಳ ಮಗುವನ್ನು ಸ್ಥಳೀಯರಾದ ದಾದಾಪೀರ್ ಮತ್ತು ನವೀನ್ ಎಂಬುವರು ರಕ್ಷಿಸಿದ್ದರು. ಘಟನೆಯಲ್ಲಿ ಸಾನ್ವಿಕಾ (5) ಮತ್ತು ತಾನ್ವಿಕಾ (3) ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಭವಾನಿಯೇ ತನ್ನ ಮಕ್ಕಳನ್ನು ನೀರಿಗೆ ತಳ್ಳಿ, ತನ್ನ ಗಂಡು ಮಗುವಿನೊಂದಿಗೆ ನದಿಗೆ ಜಿಗಿದಿದ್ದರು ಎಂದು ಆರೋಪಿಸಲಾಗಿತ್ತು.

ಏನಿದೆ ದೂರಿನಲ್ಲಿ?

ಆ.24ರಂದು ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದಿದ್ದಾಗಿ ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ಮಕ್ಕಳನ್ನು ಲಯನ್ ಸಫಾರಿಗೆ ಕರೆದೊಯ್ಯಲು ಯೋಜಿಸಿದ್ದರು. ಆದರೆ ಊಟ ಮಾಡಿಸುವಷ್ಟರಲ್ಲಿ ಸಮಯ ಮೀರಿದ್ದರಿಂದ ಪುನಃ ಊರಿಗೆ ತೆರಳಲು ಹೊಳೆ ಬಸ್‌ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು.

ತುಂಗಾ ನದಿಯಲ್ಲಿ ನೀರು ನೋಡುವ ಸಲುವಾಗಿ ಅರಕೇಶ್ವರ ದೇವಸ್ಥಾನದ ಕಡೆಯಿಂದ ರೈಲ್ವೆ ಸೇತುವೆ ಮೇಲೆ ನಡೆದು ಹೋಗಿದ್ದರು. ಸೇತುವೆ ಮೇಲಿಂದ ಸಾನ್ವಿಕಾ ಮತ್ತು ತಾನ್ವಿಕಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು 11 ತಿಂಗಳ ಮಗವಿನೊಂದಿಗೆ ತಾನು ನದಿಗೆ ಜಿಗಿದೆ ಎಂದು ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ನೀರಿನ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಸಾರ್ವಜನಿಕರು ತನ್ನನ್ನು ಮತ್ತು 11 ತಿಂಗಳ ಮಗು ನಿಶ್ಚಿತೇಜ್‌ನನ್ನು ರಕ್ಷಿಸಿದ್ದಾರೆ ಎಂದು ಭವಾನಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಮುಂದುವರೆದ ಕಾರ್ಯಾಚರಣೆ

ಸೇತುವೆ ಮೇಲಿಂದ ಬಿದ್ದಿದ್ದ ಸಾನ್ವಿಕಾ ಮತ್ತು ತನ್ವಿಕಾ ಅವರ ಸುಳಿವು ಇನ್ನೂ ಸಿಕ್ಕಿಲ್ಲ. ಘಟನೆ ನಡೆದ ದಿನದಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೋಟ್ ಬಳಸಿ ತುಂಗಾ ನದಿಯ ನೀರಿನ ಅಡಿ, ನದಿ ದಂಡೆ ಮೇಲೆ ಹುಡುಕಾಟ ನಡೆಸಲಾಗುತ್ತಿದ್ದು, ಇದುವರೆಗೆ ಮಕ್ಕಳ ಸುಳಿವು ಪತ್ತೆಯಾಗಿಲ್ಲ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

PREV
Read more Articles on
click me!

Recommended Stories

Bengaluru: GST ಕಚೇರಿಯಲ್ಲಿ ಲೋಕಾಯುಕ್ತರ ಮಹತ್ವದ ಬೇಟೆ, ಲಕ್ಷ ಲಕ್ಷ ಲಂಚ ಸ್ವೀಕರಿಸುತ್ತಿದ್ದ ಸೂಪರಿಂಟೆಂಡೆಂಟ್ ಅರೆಸ್ಟ್
ನೆಲಮಂಗಲದ ಮಂಡಿಗೆರೆಯಲ್ಲಿ ಕ್ರಿ.ಶ.1050ರ ಚೋಳ ಸಾಮ್ರಾಜ್ಯದ ರಾಜಾಧಿರಾಜನ ಶಾಸನ ಪತ್ತೆ!