Tumakur : ಜಿಲ್ಲೆಗೆ 120 ಕೋಟಿ ರು. ಹಂಚಿಕೆ: ಸಚಿವ

By Kannadaprabha News  |  First Published Sep 26, 2023, 8:09 AM IST

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರಡಿ ಜಿಲ್ಲೆಗೆ 120 ಕೋಟಿ ರು. ಹಂಚಿಕೆಯಾಗಿದ್ದು, ಈ ಯೋಜನೆಯಡಿ ಸಿವಿಲ್ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು


  ತುಮಕೂರು :  ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರಡಿ ಜಿಲ್ಲೆಗೆ 120 ಕೋಟಿ ರು. ಹಂಚಿಕೆಯಾಗಿದ್ದು, ಈ ಯೋಜನೆಯಡಿ ಸಿವಿಲ್ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ(ಮುನ್ಸಿಪಾಲಿಟಿ)ಯೋಜನೆ (ಹಂತ-4)ಯ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ನಗರಸಭೆಗಳಿಗೆ ತಲಾ 30 ಕೋಟಿ, ಪುರಸಭೆಗಳಿಗೆ ತಲಾ 10 ಕೋಟಿ, ಪಟ್ಟಣ ಪಂಚಾಯತಿಗಳಿಗೆ ತಲಾ 5 ಕೋಟಿಗಳ ಕ್ರಿಯಾಯೋಜನೆಗಳು ಅನುಮೋದನೆಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳ ಅನುಷ್ಟಾನವನ್ನು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

Tap to resize

Latest Videos

ಕುಡಿಯುವ ನೀರು, ಒಳಚರಂಡಿ, ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರೆ ಯೋಜನೆಗಳ ಅಭಿವೃದ್ಧಿಯೇ ನಗರೋತ್ಥಾನ ಯೋಜನೆಯ ಉದ್ದೇಶವಾಗಿದ್ದು, ನಗರೋತ್ಥಾನ ಯೋಜನೆ ಹಂತ-4ರಡಿ ಜಿಲ್ಲೆಯಲ್ಲಿ ವಿಕಲಚೇತನ ಹಾಗೂ ಪೌರಕಾರ್ಮಿಕರಿಗೆ ಅಗತ್ಯವಿರುವ ಕಡೆ ಶೌಚಾಲಯ, ವಿಶ್ರಾಂತಿ ಗೃಹಗಳ ನಿರ್ಮಾಣಕ್ಕೆ ಕ್ರಮವಹಿಸಬೇಕು. ಈಗಾಗಲೇ ಅನುಮೋದನೆ ನೀಡಿರುವ ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕಾಮಗಾರಿ ಆರಂಭಿಸಬೇಕು. ಈ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿ ಕಳಪೆ ಕಂಡಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಮಾತನಾಡಿ, ಶಿರಾ ತಾಲೂಕಿನಲ್ಲಿ ಬಡವರಿಗಾಗಿ ಕಲ್ಯಾಣ ಮಂಟಪವನ್ನು ಕಟ್ಟಿಸಲು ಸ್ಥಳ ಗುರುತಿಸಲಾಗಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್. ಅನಿಲ್ ಕುಮಾರ್ ಅವರಿಗೆ ಸೂಚಿಸಿದರು. ವಿಕಲಚೇತನರಿಗೆ ತ್ರಿಚಕ್ರದ ವಾಹನ ಖರೀದಿ ಯೋಜನೆಯ ಪ್ರಗತಿ ಕುರಿತಂತೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ವಿಕಲಚೇತನರ ಮಾಹಿತಿಯನ್ನು ಸಂಗ್ರಹಿಸಿ ತ್ವರಿತವಾಗಿ ವಾಹನಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಯೋಜನೆಗಳ ಅನುಷ್ಟಾನದಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಈ ಕುರಿತು ತಿಪಟೂರು ಶಾಸಕ ಕೆ.ಷಡಾಕ್ಷರಿ ಹಾಗೂ ಪಾವಗಡ ಶಾಸಕ ಎಂ.ವಿ.ವೆಂಕಟೇಶ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪವಿಭಾಗಾಧಿಕಾರಿ ರಿಷಿ ಆನಂದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಎನ್.ಆಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.

click me!