ಗಿಳಿ ಕಾಣೆಯಾದಾಗ ಬರೋಬರಿ ಬಹುಮಾನ ಘೋಷಣೆ ಮಾಡಿ ಆ ಗಿಳಿ ಸಿಕ್ಕಿದಾಗ ಘೋಷಿಸಿದ ಬಹುಮಾನ ನೀಡುವ ಮೂಲಕ ಸುದ್ದಿಯಾಗಿದ್ದ ತುಮಕೂರಿನ ಪಕ್ಷಿ ಪ್ರೇಮಿ ದಂಪತಿ ಈಗ ಮತ್ತೆ ಸುದ್ದಿಯಾಗಿದ್ದಾರೆ.
ವರದಿ : ಮಹಂತೇಶ್ ಕುಮಾರ್ , ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು
ತುಮಕೂರು : ಕೆಲವರು ಸಾಕು ಪ್ರಾಣಿ, ಪಕ್ಷಿಗಳನ್ನ ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋದನ್ನ ನೋಡಿರ್ತೀವಿ. ಅವುಗಳನ್ನ ತಮ್ಮ ಮಕ್ಕಳಂತೆಯೇ ಸಾಕಿ ಸಲುಹುತ್ತಿರೋದನ್ನ ಕೂಡ ಕೇಳಿರ್ತಿವಿ. ಆದ್ರೆ ತುಮಕೂರಿನ ಈ ದಂಪತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪಕ್ಷಿಪ್ರೇಮಕ್ಕೆ ಸಾಟಿಯೇ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಹಾಗಾದ್ರೆ ಏನದು ಆ ಪಕ್ಷಿಪ್ರೇಮಿಗಳ ಕಥೆ ಅಂತೀರಾ ಈ ಸ್ಟೋರಿ ನೋಡಿ.
ಒಮ್ಮೆ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನ ಹಚ್ಚಿಕೊಂಡರೆ ಅವು ಜೀವಕ್ಕಿಂತಲೂ ಮಿಗಿಲಾಗಿಬಿಡುತ್ತವೆ ಅನ್ನೋದಕ್ಕೆ ತುಮಕೂರಿನ ಈ ದಂಪತಿಯೇ ನಿದರ್ಶನ. ನಗರದ ಜಯನಗರ ನಿವಾಸಿಗಳಾದ ಅರ್ಜುನ್ ಮತ್ತು ರಂಜನಾ ದಂಪತಿ ಆಫ್ರಿಕಾದಿಂದ ತಲಾ 20 ಸಾವಿರ ರೂಪಾಯಿ ನೀಡಿ ಆಫ್ರಿಕನ್ ಗ್ರೇ ಜಾತಿಗೆ ಸೇರಿದ ಒಂದು ಗಂಡು ಮತ್ತು ಒಂದು ಹೆಣ್ಣು ಗಿಣಿಗಳನ್ನ ತಂದಿದ್ರು. ಇವುಗಳಲ್ಲಿ ಹೆಣ್ಣು ಗಿಣಿಗೆ ರುಸ್ತುಮಾ ಎಂದು, ಗಂಡು ಗಿಣಿಗೆ ರಿಯಾ ಎಂದು ಹೆಸರಿಟ್ಟಿದ್ರು. ಈ ಮುದ್ದಾದ ಗಿಣಿಗಳ ಜೊತೆಗೆ ಕುಟುಂಬಸ್ಥರು ಸಂತಸವಾಗಿದ್ರು. ಮುದ್ದು ಗಿಣಿಗಳ ಜೊತೆಗೆ ರೀಲ್ಸ್ ಮಾಡುತ್ತಾ, ಮೋಜು ಮಸ್ತಿ ಮಾಡುತ್ತಿದ್ರು.
ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ; ಗಿಣಿ ಹುಡುಕಲು ಹೊರಟ ಕುಟುಂಬ!
ಆದ್ರೆ 15 ದಿನಗಳ ಹಿಂದೆ ರುಸ್ತುಮಾ ಹೆಸರಿನ ಗಿಣಿ ಕಳೆದು ಹೋಗಿತ್ತು. ಪ್ರೀತಿಯ ಗಿಣಿ ಕಾಣೆಯಾಗುತ್ತಿದ್ದಂತೆ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದ್ರು. ಆದ್ರೆ ಎಲ್ಲಿಯೂ ಸಿಗದೇ ಹೋದಾಗ, ಗಿಣಿಯನ್ನು ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಜಾಹೀರಾತು ನೀಡಿದ್ದರು. ಗಿಣಿಯ ಚಿತ್ರವಿದ್ದ ಪೋಸ್ಟರ್‌ಗಳನ್ನು ಮಾಡಿ ನಗರದೆಲ್ಲೆಡೆ ಹಂಚಿದ್ದರು. ಕಡೆಗೂ ಒಂದು ವಾರದ ಬಳಿಕ ಗಿಣಿ ಪತ್ತೆಯಾಗಿತ್ತು. ಗಿಣಿ ಹುಡುಕಿಕೊಟ್ಟವರಿಗೆ 80 ಸಾವಿರ ಬಹುಮಾನ ನೀಡಿ, ಗಿಣಿ ಮಾಲೀಕ ಅರ್ಜುನ್ ತಮ್ಮ ಮಾತನ್ನ ಉಳಿಸಿಕೊಂಡಿದ್ರು. ಆದ್ರೀಗ ಈ ಗಿಣಿಗಳನ್ನೇ ಪಕ್ಷಿಧಾಮಕ್ಕೆ ದಾನ ನೀಡಿ ಬಿಟ್ಟಿದ್ದಾರೆ.
ಮರಳಿ ಗೂಡಿಗೆ ಬಂದ ಗಿಳಿ: ಪತ್ತೆ ಹಚ್ಚಿದವರಿಗೆ ಸಿಕ್ತು 85 ಸಾವಿರ ಬಹುಮಾನ!
ಯಾವಾಗ ಗಿಣಿ ಕಾಣೆಯಾಗಿ ಮತ್ತೆ ಮನೆ ಸೇರಿತೋ ಈ ಪಕ್ಷಿ ಪ್ರೇಮಿ ದಂಪತಿಗಳಿಗೆ ಒಂದು ಸಣ್ಣ ಭಯ ಶುರುವಾಗಿತ್ತು. ಈ ಬಾರಿಯೇನೋ ಗಿಣಿ ಕ್ಷೇಮವಾಗಿ ಮನೆ ಸೇರಿದೆ. ಆದ್ರೆ ಮತ್ತೆ ಹೀಗೆ ಆಗಲ್ಲ ಅನ್ನೋದು ಏನು ಗ್ಯಾರೆಂಟಿ. ಹೀಗಾಗಿ ತಮ್ಮ ಸ್ವಾರ್ಥಕ್ಕಿಂತ ತಾವು ಸಾಕಿರುವ ಮುದ್ದು ಗಿಣಿಗಳು ಕ್ಷೇಮವಾಗಿರೋದೇ ಮುಖ್ಯ ಎಂದು ದೃಢ ನಿರ್ಧಾರ ಮಾಡಿದ ಅರ್ಜುನ್ ಮತ್ತು ರಂಜನಾ ದಂಪತಿ ದೊಡ್ಡ ತ್ಯಾಗ ಮಾಡಲು ಮುಂದಾದ್ರು. ಈಗ ಬಲು ಬೇಸರದಿಂದಲೇ ಈ ಗಿಣಿಗಳನ್ನ ದೂರದ ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಮೃಗಾಲಯಕ್ಕೆ ಹಸ್ತಾಂತರ ಮಾಡಿ ಬಂದಿದ್ದಾರೆ.
ಗಿಣಿಗಳ ನೆನಪಿಗಾಗಿ ಅವುಗಳ ಪುಕ್ಕ ಬಳಸಿ ಓಲೆ ಮಾಡಿಸಿಕೊಂಡ ರಂಜನಾ
ಇನ್ನು ಸ್ವಂತ ಮಕ್ಕಳಂತೆ ಸಾಕಿ ಸಲುಹಿದ್ದ ಗಿಣಿಗಳನ್ನ ದೂರದ ಗುಜರಾತ್‌ನಲ್ಲಿ ಬಿಟ್ಟುಬಂದಿರೋ ಕುಟುಂಬ ಸದ್ಯ ಬಾರೀ ಬೇಸರದಲ್ಲಿದೆ. ಇನ್ನೊಂದೆಡೆ ಅರ್ಜುನ್ ಪತ್ನಿ ರಂಜನಾ ಈ ಗಿಣಿಗಳ ನೆನಪಿಗಾಗಿ ಅವುಗಳ ಪುಕ್ಕಗಳನ್ನ ಬಳಸಿ ಕಿವಿಗೆ ಓಲೆ ಮಾಡಿಸಿಕೊಡಿದ್ದಾರೆ. ಈ ಮೂಲಕವಾದ್ರೂ ತಮ್ಮ ಮುದ್ದು ಗಿಣಿಗಳ ಸ್ಪರ್ಶದ ಅನುಭವವಾಗುತ್ತೆ ಅನ್ನೋದು ಅವರಿಗಿರೋ ಸಮಾಧಾನ.