ಜಿಲ್ಲೆಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಭೋಜನ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಮತ್ತಿತರ ಅಗತ್ಯ ಸೌಲಭ್ಯಗಳ ಕೊರತೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ತುಮಕೂರು : ಜಿಲ್ಲೆಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಭೋಜನ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಮತ್ತಿತರ ಅಗತ್ಯ ಸೌಲಭ್ಯಗಳ ಕೊರತೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯ/ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಎಲ್ಲಾ ವಸತಿ ನಿಲಯಗಳಿಗೂ ಕಡ್ಡಾಯವಾಗಿ ಆವರಣ ಗೋಡೆ ನಿರ್ಮಿಸಬೇಕು. ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಆದ್ಯತೆ ಮೇಲೆ ಆವರಣ ಗೋಡೆ ನಿರ್ಮಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಲು ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಡಳಿತ ಸುಧಾರಣೆಗಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಜನಸಂಪರ್ಕ ಸಭೆಯನ್ನು ನಡೆಸಬೇಕು. ಸಭೆಯ ದಿನಾಂಕಕ್ಕೂ ಮುನ್ನ ಜನರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಂಡು ಸಭೆಯ ದಿನದಂದು ಅಹವಾಲುದಾರರಿಗೆ ಕ್ರಮವಹಿಸಿದ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ 9 ತಾಲೂ ಕುಗಳಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿದ್ದು, ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಕೃಷಿ/ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಬೇಕು. ಖಾಸಗಿ ಲೇವಾದೇವಿದಾರರು ರೈತರಿಂದ ಸಾಲ ಮರುಪಾವತಿ ಮಾಡುವಂತೆ ಪೀಡಿಸಬಾರದು. ಸಾಲದ ಹೊರೆಯಿಂದ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳದಂತೆ ಬರಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ನಿಮ್ಮೊಂದಿಗಿದೆ ಎಂದು ಅಧಿಕಾರಿಗಳು ರೈತರಿಗೆ ಭರವಸೆ ಮೂಡಿಸಿ ಆತ್ಮಸ್ಥೈರ್ಯ ನೀಡಬೇಕೆಂದು ತಿಳಿಸಿದರು.
ಬರಪರಿಸ್ಥಿತಿಯನ್ನು ಎದುರಿಸುವ ದೃಷ್ಟಿಯಿಂದ ವೈದ್ಯರು ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಲೇಬೇಕು. ಶಾಲೆ, ವಸತಿ ನಿಲಯ, ಅಂಗನವಾಡಿಗಳ ಸ್ವಂತ ಕಟ್ಟಡ ನಿರ್ಮಿಸಲು ಒಂದು ವಾರದೊಳಗೆ ನಿವೇಶನ ಗುರುತಿಸಿ ವರದಿ ಸಲ್ಲಿಸಬೇಕು. ಅಂಗನವಾಡಿ ಕಟ್ಟಡಕ್ಕೆ ಈವರೆಗೂ ಜಾಗ ಗುರುತಿಸದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಪ್ರತೀ ಗ್ರಾಮಗಳಲ್ಲಿ ಫಾಗಿಂಗ್ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜನರಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್. ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ಕೃಷಿ ಅಧಿಕಾರಿಗಳು ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎನ್. ರಮೇಶ್ ಅವರಿಗೆ ಸೂಚನೆ ನೀಡಿದರು.
ಕಳೆದ ಸಾಲುಗಳಲ್ಲಿ ಮಳೆಯಿಂದ ಹಾನಿಯಾದ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳು ಈವರೆಗೂ ದರುಸ್ತಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಡಿಡಿಪಿಐ, ಸಿಡಿಪಿಓಗಳಿಗೆ ಸೂಚನೆ ನೀಡಿದರು.
ಉಳಿದಂತೆ ಸಭೆಯಲ್ಲಿ ಪೈಕಿ ಪಹಣಿ, ಭೂಮಿ ಪೆಂಡೆನ್ಸಿ, ೯೪ಸಿ, ೯೪ಸಿಸಿ, ಇ-ಕಚೇರಿ, ಆಶ್ರಯ ಯೋಜನೆ, ೩ ಮತ್ತು ೯ ಮಿಸ್ ಮ್ಯಾಚ್, ಹೊಸ ಕಂದಾಯ ಗ್ರಾಮ ರಚನೆ, ಆರಾಧನ ಯೋಜನೆ, ಕೆರೆಗಳ ಒತ್ತುವರಿ ತೆರವು, ಮುಜರಾಯಿ ದೇವಸ್ಥಾನಗಳ ಸರ್ವೆ, ರೈಲ್ವೆ ಯೋಜನೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಉಪವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರತಿ ಗ್ರಾ.ಪಂನಲ್ಲಿ ಉದ್ಯಾನವನ, ಆಟದ ಮೈದಾನ
ಪ್ರತಿ ಗ್ರಾಮ ಪಂಚಾಯತಿಗಳಲ್ಲಿಯೂ ಸಾರ್ವಜನಿಕ ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ ೫೩ ಹೋಬಳಿಗಳಲ್ಲಿ ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಿಸಲು ಕ್ರಮವಹಿಸಲಾಗುವುದು. ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ಕೂಡಲೇ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ, ಪಾರ್ಕಿಂಗ್ ಸೇರಿದಂತೆ ವಿವಿಧ ಸೌಕರ್ಯ ಒದಗಿಸುವ ಹಾಗೂ ಪ್ರತೀ ತಾಲೂಕಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸಭೆಗೆ ತಿಳಿಸಿದರು.