ಮೂರು ಮಂದಿ ಡಿಸಿಎಂ ಸೃಷ್ಟಿ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್‌ಗೆ ಅಸಮಾಧಾನವಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರು : ಮೂರು ಮಂದಿ ಡಿಸಿಎಂ ಸೃಷ್ಟಿ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್‌ಗೆ ಅಸಮಾಧಾನವಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನು ಡಿಕೆ ಬ್ರದರ್ಸ್ ವಿರುದ್ಧ ಹೇಳಿಕೆ ನೀಡಿಲ್ಲ. ಡಿಕೆ ಶಿವಕುಮಾರ್ ಕೂಡ ಡಿಸಿಎಂ ಇದ್ದಾರೆ. ಪಕ್ಷದ ಅಧ್ಯಕ್ಷರಿದ್ದಾರೆ. ಪಕ್ಷ ಸಂಘಟನೆಯ ಚಾಣಾಕ್ಷ್ಯರಿರುವ ಡಿಕೆ ಶಿವಕುಮಾರ್ ಅಸಮಾಧಾನಗೊಳ್ಳುವ ಪರಿಸ್ಥಿತಿ ಮತ್ತು ಸಂದರ್ಭ ಸೃಷ್ಟಿಯಾಗಿಲ್ಲ ಎಂದರು.
ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿಲ್ಲ. ಹಾಸನದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಹಾಕಿದರೆ ಒಳ್ಳೆಯದು ಎಂಬ ಬಗ್ಗೆ ಚರ್ಚೆ ಮಾಡಿದ್ದು, ಈ ಸಂಬಂಧ ಎಲ್ಲರ ಅಭಿಪ್ರಾಯ, ಸಲಹೆ ಪಡೆದು ಪಕ್ಷಕ್ಕೆ ನೀಡುತ್ತೇವೆ. ಅದರ ಮೇಲೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಬಿಜೆಪಿಯ ಪ್ರೀತಂ ಗೌಡ, ಜೆಡಿಎಸ್- ಬಿಜೆಪಿ ಮೈತ್ರಿಗೆ ವಿರೋಧ ಮಾಡಿದ್ದಾರಂತ ಭಾವಿಸಿದ್ದೇನೆ. ಅದು ಅಂತಿಮ ಆದ ಮೇಲೆ ತಾನೇ ನಿರ್ಧಾರ ಆಗುವುದು. ಮೈತ್ರಿ ಅಂತಿಮವಾಗಿಲ್ಲ ಅಂತ ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೇ ಒಂದು ಸೀಟಿನ ಬಗ್ಗೆ ಚರ್ಚೆ ನಡೆಯುತ್ತಿದೆ ಅಂತ ಹೇಳಿದ್ದಾರೆ ಎಂದರು.
ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಬರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ ಎಸ್.ಟಿ ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್ ಗೆ ಬರುವ ಬಗ್ಗೆ ಮಾಹಿತಿಯಿದೆ. ತುಮಕೂರು ಲೋಕಸಭೆಗೆ ಕಾಂಗ್ರೆಸ್ ನಿಂದ ಸೋಮಣ್ಣ ಬರುತ್ತಾರೆ ಅನ್ನೋದು ಗಾಳಿ ಸುದ್ದಿ. ಮುದ್ದಹನುಮೇಗೌಡರ ಗೆಲುವಿಗೆ ಯಾರೆಲ್ಲಾ ಶ್ರಮವಹಿಸಿದರೋ ಅವರಿಗೆ ಒಂದು ಮಾತು ಹೇಳದೆ ಪಕ್ಷ ಬಿಟ್ಟು ಹೋದರು. ಕಾಂಗ್ರೆಸ್‌ನಲ್ಲಿ ಮುದ್ದಹನುಮೇಗೌಡರು ಜಿಲ್ಲಾಧ್ಯಕ್ಷ, ಶಾಸಕ, ಎಂ.ಪಿ. ಎಲ್ಲಾ ಆಗಿದ್ದಾರೆ ಎಂದರು.
ಬಿಜೆಪಿ ಹಾಲಿ ಸಂಸದರು ಕಾಂಗ್ರೆಸ್ ಬರುವ ಬಗ್ಗೆ ಮಾಹಿತಿ ಇಲ್ಲ. ಬಹುತೇಕರು ಬಿಜೆಪಿ ಸಂಸದರು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಅಂತ ಬಿಜೆಪಿ ಪಕ್ಷದ ಹೈಕಮಾಂಡ್ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ ಎಂದರು.
ನಮ್ಮ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಿದೆ. ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಪೂರೈಸಿದ್ದೇವೆ. ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ ಗ್ಯಾರಂಟಿ ಮಾತ್ರ ಬಾಕಿಯಿದ್ದು ಅದು ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಎಂದರು.
ಲೋಕಸಭೆ ಚುನಾವಣೆ ನಮ್ಮ ಮನೆ ಹೊತ್ತಿನಲ್ಲಿ ಬಂದು ನಿಂತಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಹಾಗೆಯೇ ಕಾಂಗ್ರೆಸ್ ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕು. ನಾವು ಗೆಲ್ಲುತ್ತೇವೆ ಅನ್ನೋ ವಿಶ್ವಾಸವಿದೆ ಎಂದರು.
ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿದರೆ ಎಲ್ಲಾ ಸಮುದಾಯಗಳು ನಮಗೆ ಬೆಂಬಲ ನೀಡಲು ಅನುಕೂಲ ಆಗುತ್ತದೆ. ಈ ಸಂಬಂಧ ಇಂದೇ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆಯುತ್ತೇನೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡುತ್ತೇನೆ. ನನ್ನ ಹೇಳಿಕೆಗೆ ಸಹಮತ ನೀಡುತ್ತಾರೋ ಅವರೆಲ್ಲರನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದರು.