
ಬೆಂಗಳೂರು ನಗರದ ಕಳಪೆ ಪಾದಚಾರಿ ಮಾರ್ಗಗಳ ಸ್ಥಿತಿಯನ್ನು ಎತ್ತಿ ತೋರಿಸುವ ಕೆನಡಾದ ವ್ಲಾಗರ್ ಒಬ್ಬರ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವೀಡಿಯೊ ಆಧರಿಸಿ ಪ್ರಖ್ಯಾತ ಉದ್ಯಮಿ, ಬಯೋಕಾನ್ ಸಂಸ್ಥೆಯ ಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ನಗರದ ನಾಗರಿಕ ಮೂಲಸೌಕರ್ಯ, ಸರ್ಕಾರದ ಜವಾಬ್ದಾರಿ ಮತ್ತು ಉದ್ಯಮಿಗಳ ನಿರಾಸಕ್ತಿಯ ಕುರಿತು ಪ್ರಶ್ನಿಸಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ.
ಕೆನಡಾದ ಪ್ರಸಿದ್ಧ ವ್ಲಾಗರ್ ಕ್ಯಾಲೆಬ್ ಫ್ರೈಸೆನ್ (Caleb Friesen) ಇತ್ತೀಚೆಗೆ ಬೆಂಗಳೂರಿನ ಪ್ರಮುಖ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಇಂದಿರಾನಗರದ 12ನೇ ಮೇನ್‌ನಿಂದ ವೀಡಿಯೊ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಮುರಿದುಬಿದ್ದ ಪಾದಚಾರಿ ಮಾರ್ಗಗಳು, ಕಸದ ರಾಶಿ, ತೆರೆದುಕೊಂಡ ಚರಂಡಿಯ ಸ್ಲಾಬ್‌ಗಳು ಮತ್ತು ಸಾರ್ವಜನಿಕರಿಗೆ ಅಪಾಯಕಾರಿ ಎನಿಸುವ ದೊಡ್ಡ ಗುಂಡಿಗಳನ್ನು ತೋರಿಸಲಾಗಿತ್ತು.
ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಹಬ್ ಎಂದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲೇ ಇಂತಹ ಕಳಪೆ ಮೂಲಸೌಕರ್ಯ ಇರುವುದು ಎಷ್ಟು ಸರಿ ಎಂದು ಫ್ರೈಸೆನ್ ಪ್ರಶ್ನಿಸಿದ್ದರು. ಪಾದಚಾರಿ ಮಾರ್ಗಗಳು ಸಾರ್ವಜನಿಕರ ನಡೆದಾಟಕ್ಕೆ ಸುರಕ್ಷಿತವಾಗಿ ಹಾಗೂ ಸುಲಭವಾಗಿರಬೇಕು. ನಗರದ ಐಟಿ ಖ್ಯಾತಿಗೂ ಇಲ್ಲಿನ ಫುಟ್‌ಪಾತ್‌ಗಳ ಸ್ಥಿತಿಗೂ ಎಲ್ಲೂ ಸಾಮ್ಯತೆಯೇ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೀಡಿಯೊ ಹರಿದಾಡುತ್ತಿದ್ದಂತೆ, ನೂರಾರು ಬೆಂಗಳೂರಿಗರು ಆಡಳಿತವನ್ನು ಪ್ರಶ್ನಿಸಿದರು.
ಈ ವೀಡಿಯೊವನ್ನು ತಮ್ಮ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ, ವೀಡಿಯೊದಲ್ಲಿದ್ದ ಕೆಲವು ದೂರುಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗಾಗಲೇ ಸರಿಪಡಿಸಿದೆ ಎಂದು ಉಲ್ಲೇಖಿಸಿದರು. ಮೊದಲನೆಯದಾಗಿ, ದೂರುಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸರಿಪಡಿಸಿದಂತೆ ಕಾಣುತ್ತಿದೆ. ಕ್ಯಾಲೆಬ್ ಈ ವಿಷಯದ ಕುರಿತು ಜಾಗೃತಿ ಮೂಡಿಸಿದ್ದಕ್ಕಾಗಿ ಧನ್ಯವಾದಗಳು. ದಯವಿಟ್ಟು ಬೆಂಗಳೂರಿನಾದ್ಯಂತ ಸಂಚರಿಸಿ ಇಂತಹ ವೀಡಿಯೊಗಳನ್ನು ಶೂಟ್ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ.
ಆದರೆ, ಇದರ ಬೆನ್ನಲ್ಲೇ ಅವರು ಇಂದಿರಾನಗರದಲ್ಲಿ ವಹಿವಾಟು ನಡೆಸುತ್ತಿರುವ ವಾಣಿಜ್ಯ ಸಂಸ್ಥೆಗಳ ಪಾತ್ರವನ್ನೂ ಪ್ರಶ್ನಿಸಿದರು,
ಎರಡನೆಯದಾಗಿ, ಇಂದಿರಾನಗರದ 12ನೇ ಮುಖ್ಯ ರಸ್ತೆಯಲ್ಲಿರುವ ಕಂಪನಿಗಳು ಮತ್ತು ರೆಸ್ಟೋರೆಂಟ್‌ಗಳು ತಮ್ಮ ಮುಂಭಾಗದ ಉತ್ತಮ ಪಾದಚಾರಿ ಮಾರ್ಗಗಳನ್ನು ಸುಸ್ಥಿತಿಯಲ್ಲಿಡಲು ಏಕೆ ಒತ್ತು ನೀಡಬಾರದು? ನಾಗರಿಕರ ಮತ್ತು ಉದ್ಯಮಿಗಳ ನಿರಾಸಕ್ತಿಯೇ ನಮ್ಮ ನಗರಕ್ಕೆ ಶಾಪವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅವರ ಈ ಹೇಳಿಕೆಯು ನಗರದ ಸಾರ್ವಜನಿಕ ಸ್ಥಳಗಳ ನಿರ್ವಹಣೆಯಲ್ಲಿ ನಾಗರಿಕ ಸಂಸ್ಥೆಗಳು (Civic Authorities) ಮತ್ತು ಖಾಸಗಿ ಉದ್ಯಮಗಳ ಜವಾಬ್ದಾರಿ ಎಷ್ಟಿರಬೇಕು ಎಂಬ ಕುರಿತು ಪುನಃ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತು.
ಕಿರಣ್ ಮಜುಂದಾರ್-ಶಾ ಅವರ ಟ್ವೀಟ್‌ಗೆ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಬಳಕೆದಾರರು ಖಾಸಗಿ ಸಂಸ್ಥೆಗಳು ತಮ್ಮ ಆಸ್ತಿಯ ಹೊರಗಿನ ಪ್ರದೇಶವನ್ನು ಶುಚಿಯಾಗಿಡಲು ಸಹಕರಿಸಬಹುದು ಎಂದು ಒಪ್ಪಿಕೊಂಡರೆ, ಇನ್ನು ಕೆಲವರು ಇದನ್ನು ತೀವ್ರವಾಗಿ ವಿರೋಧಿಸಿದರು.
ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, ಪ್ರತಿಯೊಂದು ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ತಮ್ಮ ಆಸ್ತಿಯ ಮುಂಭಾಗದ ಪಾದಚಾರಿ ಮಾರ್ಗವನ್ನು ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು, ಖಾಸಗಿ ಸಂಸ್ಥೆಗಳು ಫುಟ್‌ಪಾತ್‌ಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ನೀವು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯನ್ನು ಪ್ರಶ್ನಿಸುತ್ತೀರಿ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ನೀವು ಖಾಸಗಿಯವರ ಮೇಲೆ ಬೆರಳು ತೋರಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ನಾಗರಿಕರು ಎಚ್‌ಎಸ್‌ಆರ್ ಲೇಔಟ್‌ನ ಉದಾಹರಣೆ ನೀಡುತ್ತಾ, ಪ್ರತಿಯೊಂದು ಅಂಗಡಿ ಅಥವಾ ರೆಸ್ಟೋರೆಂಟ್‌ನವರು ತಮಗೆ ಇಷ್ಟಬಂದಂತೆ ತಮ್ಮ ಮುಂಭಾಗದ ಫುಟ್‌ಪಾತ್ ಸರಿಪಡಿಸಿಕೊಂಡರೆ, ನಮಗೆ ಸಮಾನತೆ ಇಲ್ಲದ, ಹೆಚ್ಚು-ಕಡಿಮೆ ಎತ್ತರವಿರುವ ಮತ್ತು ನಡೆಯಲು ಮತ್ತಷ್ಟು ಕಷ್ಟಕರವಾದ ಫುಟ್‌ಪಾತ್‌ಗಳು ಸಿಗುತ್ತವೆ ಎಂದು ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು, ಚರಂಡಿ ಹಾಗೂ ಫುಟ್‌ಪಾತ್ ದುರಸ್ತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸ ತಂತ್ರಜ್ಞಾನ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ. ಜತೆಗೆ, ನಾವು ಪಾವತಿಸುವ ತೆರಿಗೆ ಹಣಕ್ಕೆ ಕನಿಷ್ಠ ಗುಣಮಟ್ಟದ ಕೆಲಸ ಸಿಗಬೇಕು. ತೇಪೆ ಹಚ್ಚುವ ಕಾಮಗಾರಿಗಳು ನಾಗರಿಕರಿಗೆ ಮಾಡುವ ಅಪಮಾನ ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಕೆನಡಾ ವ್ಲಾಗರ್ ಮಾಡಿದ ಒಂದು ವೀಡಿಯೊ ಬೆಂಗಳೂರಿನ ಮೂಲಸೌಕರ್ಯದ ಕೊರತೆಯನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಿದ್ದು ಮಾತ್ರವಲ್ಲದೆ, ಸರ್ಕಾರಿ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಸಾರ್ವಜನಿಕರ ಜಾಗೃತಿಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.