
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮೊಬೈಲ್‌ನಲ್ಲಿ ವಿದಾಯ ಸಂದೇಶ ಬರೆದು ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಯೊಬ್ಬನು ನೀರಿನ ಕಟ್ಟೆಗೆ ಬಿದ್ದು ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಧನುಷ್ (19) ಎಂದು ಗುರುತಿಸಲಾಗಿದ್ದು, ಆತ ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಸಮೀಪದ ಗೋಪ್ಪೆನಹಳ್ಳಿ ಗ್ರಾಮದ ನಿವಾಸಿಯಾಗಿದ್ದ. ಧನುಷ್ ತುರುವೇಕೆರೆ ಪಟ್ಟಣದಲ್ಲಿರುವ ಡಿಪ್ಲೊಮಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದನು.
ನಿನ್ನೆ ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಧನುಷ್, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಸಂಜೆ ಹೊತ್ತಾದರೂ ಮಗನಿಂದ ಯಾವುದೇ ಕರೆ ಅಥವಾ ಸಂದೇಶ ಬರದೇ ಇದ್ದ ಕಾರಣ ಪೋಷಕರು ಆತಂಕಗೊಂಡು ಹಲವೆಡೆ ಹುಡುಕಾಟ ನಡೆಸಿದರು. ಪೋಷಕರು ಸಂಪರ್ಕಿಸಲು ಪ್ರಯತ್ನಿಸಿದರೂ ಧನುಷ್ ಮೊಬೈಲ್ ಕರೆಗಳಿಗೆ ಸ್ಪಂದಿಸಿರಲಿಲ್ಲ.
ಹುಡುಕಾಟದ ವೇಳೆ ತುರುವೇಕೆರೆ ಪಟ್ಟಣದ ಡಿಪ್ಲೊಮಾ ಕಾಲೇಜಿನ ಹಿಂಭಾಗದಲ್ಲಿರುವ ನೀರಿನ ಕಟ್ಟೆಯ ಸಮೀಪ ಧನುಷ್ ಅವರ ಬ್ಯಾಗ್, ಚಪ್ಪಲಿ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿವೆ. ಇದನ್ನು ಕಂಡು ಆತಂಕಗೊಂಡ ಪೋಷಕರು ಕೂಡಲೇ ತುರುವೇಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ, ಧನುಷ್ ಆತ್ಮ*ಹ*ತ್ಯೆಗೆ ಮುನ್ನ ತನ್ನ ಮೊಬೈಲ್‌ನಲ್ಲಿ ವಾಟ್ಸಪ್ ಹಾಗೂ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಜೊತೆಗಿನ ಫೋಟೋ ಹಾಕಿ ವಿದಾಯ ಸಂದೇಶವನ್ನು ಸ್ಟೇಟಸ್ ಆಗಿ ಹಾಕಿದ್ದ ವಿಷಯ ಬೆಳಕಿಗೆ ಬಂದಿದೆ. "ನೀನೇ ಖುಷಿಯಾಗಿರು, ನಾನು ಹೋಗ್ತಾ ಇದಿನಿ ಬಾಯ್… ಈ ಪ್ರಪಂಚನೇ ಬಿಟ್ಟು ಹೋಗ್ತಿದಿನಿ" ಎಂಬ ಹೃದಯಕಲಕುವ ಸಂದೇಶವನ್ನು ಆತ ಬರೆದಿದ್ದಾನೆ.
ಪೊಲೀಸರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ನೀರಿನ ಕಟ್ಟೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ವೇಳೆ ವಿದ್ಯಾರ್ಥಿ ಧನುಷ್ ಅವರ ಮೃತದೇಹ ನೀರಿನ ಕಟ್ಟೆಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮ*ಹ*ತ್ಯೆಗೆ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಆತ್ಮ*ಹ*ತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.