ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ, ಕೋತಿ ಉಳಿಸಲು ಹೋಗಿ ಪ್ರಾಣ ಬಿಟ್ಟ ಆಟೋ ಚಾಲಕ!

Published : Feb 26, 2026, 11:57 AM IST
Tumakuru Auto Driver Dies

ಸಾರಾಂಶ

ತುಮಕೂರು ಜಿಲ್ಲೆಯ ಕೊರಟಗೆರೆ ಬಳಿ, ಕೋತಿಯನ್ನು ಉಳಿಸಲು ಯತ್ನಿಸಿದ ಆಟೋ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದಾರೆ. ಇದೇ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದಾರುಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತುಮಕೂರು: ಸಾವು ಹೇಗೆ ಯಾವ ರೂಪದಲ್ಲಿ ಬರುತ್ತೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಹೃದಯವಿದ್ರಾವಕ ಅಪಘಾತವೊಂದು ಸಂಭವಿಸಿದೆ. ಕೋತಿ ಅಡ್ಡ ಬಂದ ಕಾರಣ ಅದರ ಜೀವ ಉಳಿಸುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪ್ಯಾಸೆಂಜರ್ ಆಟೋಗೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ಆಟೋ ಚಾಲಕ ಮಹೇಂದ್ರ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕೋತಿಯನ್ನು ಉಳಿಸಲು ಯತ್ನಿಸಿದ ಚಾಲಕನೇ ತನ್ನ ಪ್ರಾಣ ಕಳೆದುಕೊಂಡಿರುವುದು ಮನಕಲಕುವ ಘಟನೆಯಾಗಿದೆ.

ಕೊರಟಗೆರೆ ತಾಲ್ಲೂಕಿನ ಜಂಪೇನಹಳ್ಳಿ ಕೆರೆಯ ಬಳಿ ಈ ದುರ್ಘಟನೆ ನಡೆದಿದೆ. ಕೊರಟಗೆರೆಯಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೋ, ಏಕಾಏಕಿ ರಸ್ತೆ ಮಧ್ಯೆ ಅಡ್ಡ ಬಂದ ಕೋತಿಯನ್ನು ತಪ್ಪಿಸಲು ಪ್ರಯತ್ನಿಸಿದಾಗ ಸ್ಕಿಡ್ ಆಗಿ ಪಲ್ಟಿಯಾಗಿದೆ. ಪಲ್ಟಿಯಾದ ಕ್ಷಣದಲ್ಲೇ ಎದುರಿನಿಂದ ತುಮಕೂರು ಕಡೆಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಆಟೋ ಸಂಪೂರ್ಣವಾಗಿ ನುಜ್ಜುಗೊಂಡಿದ್ದು, ಚಾಲಕ ಮಹೇಂದ್ರ ಕುಮಾರ್ ಗಂಭೀರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಿಸಿಟಿವಿಯಲ್ಲಿ ಸೆರೆವಾದ ಅಪಘಾತದ ದೃಶ್ಯಗಳು

ಅಪಘಾತದ ಭೀಕರ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ವಿಡಿಯೊದಲ್ಲಿ ಕೋತಿ ಏಕಾಏಕಿ ರಸ್ತೆಗೆ ಅಡ್ಡ ಬರುತ್ತಿದ್ದು, ಅದನ್ನು ತಪ್ಪಿಸಲು ಆಟೋ ತೀವ್ರವಾಗಿ ತಿರುಗಿ ಪಲ್ಟಿಯಾಗುವ ದೃಶ್ಯ ಹಾಗೂ ನಂತರ ಇನೋವಾ ಕಾರು ಡಿಕ್ಕಿ ಹೊಡೆಯುವ ದೃಶ್ಯ ಕಾಣಿಸುತ್ತದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಲ್ಲಿ ಶೋಕ

ಕೋತಿಯನ್ನು ಉಳಿಸಲು ಹೋಗಿ ಮಾನವ ಜೀವವೇ ಬಲಿಯಾಗಿರುವುದು ಗ್ರಾಮಸ್ಥರನ್ನು ತೀವ್ರವಾಗಿ ದುಃಖಕ್ಕೀಡು ಮಾಡಿದೆ. ರಸ್ತೆಗಳಲ್ಲಿ ಅಚಾನಕ್ ಪ್ರಾಣಿಗಳು ಅಡ್ಡಬರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಾಹನ ಸವಾರರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಈ ದುರಂತ ಅಪಘಾತವು ರಸ್ತೆ ಸುರಕ್ಷತೆ ಮತ್ತು ಅರಣ್ಯ ಪ್ರದೇಶಗಳ ಸಮೀಪ ಸಂಚಾರದಲ್ಲಿ ಹೆಚ್ಚುವರಿ ಎಚ್ಚರ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ.

PREV
Read more Articles on
click me!

Recommended Stories

ಹಾಸನ: ಜೀತಕ್ಕಿದ್ದ 18ಮಂದಿ ರಕ್ಷಣೆ, ಕೂಡಿ ಹಾಕಿದ್ದ ಶೆಡ್‌ನಿಂದ ಓರ್ವ ತಪ್ಪಿಸಿಕೊಂಡಿದ್ದರಿಂದ ಬಯಲಾಯ್ತು ಕರಾಳ ಸತ್ಯ!
ಹೊಯ್ಸಳರ ಬೇಲೂರು ದೇವಸ್ಥಾನಕ್ಕೂ ಲೂಯಿ ವಿಟಾನ್ ಲಾಂಛನಕ್ಕೂ ಇದೆ ನಂಟು? ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!