ಇದಕ್ಕೇನಂತೀರಿ..? ರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬ ಬಿಟ್ಟು ಡಾಂಬರೀಕರಣ ಮಾಡಿದ ಬಳ್ಳಾರಿ ಇಂಜಿನಿಯರ್ಸ್!

Published : Oct 20, 2026, 08:20 PM IST
Ballari electric pole in middle road

ಸಾರಾಂಶ

ಬಳ್ಳಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಡಾಂಬರೀಕರಣ ಮಾಡಲಾಗಿದೆ. ಕಣೆಕಲ್ ಬಸ್ ನಿಲ್ದಾಣದಿಂದ ಅಂದ್ರಾಳ್ ಬೈಪಾಸ್‌ಗೆ ಸಂಪರ್ಕಿಸುವ ಈ ರಸ್ತೆಯು ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವಂತಿದೆ. ಇದರಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ (ಅ.20): ಸರ್ಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯಕ್ಕೆ, ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಂತಿರುವ ಘಟನೆಯೊಂದು ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ನಿರ್ಮಿಸಲಾದ ರಸ್ತೆಯ ನಡುಮಧ್ಯದಲ್ಲೇ ವಿದ್ಯುತ್ ಕಂಬವೊಂದು ಠಿಕಾಣಿ ಹೂಡಿದ್ದು, ಕಂಬವನ್ನು ತೆರವುಗೊಳಿಸದೇ ಅದರ ಸುತ್ತಲೂ ಡಾಂಬರೀಕರಣ ಮಾಡಿ ಕಾಮಗಾರಿ ಮುಗಿಸಿರುವ ಭೂಪರ ಕೃತ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಎಲ್ಲಿ ನಡೆದಿದೆ ಈ ಯಡವಟ್ಟು?

ಬಳ್ಳಾರಿ ನಗರದ ಕಣೆಕಲ್ ಬಸ್ ನಿಲ್ದಾಣದಿಂದ ಅಂದ್ರಾಳ್ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಕಾಮಗಾರಿಯಲ್ಲಿ ಈ ಆಘಾತಕಾರಿ ಪ್ರಮಾದ ನಡೆದಿದೆ. ನಿತ್ಯ ಸಾವಿರಾರು ವಾಹನಗಳು, ಪಾದಚಾರಿಗಳು ಸಂಚರಿಸುವ ಈ ಮಾರ್ಗದಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು.

ಕಂಬ ಶಿಫ್ಟ್ ಮಾಡದೇ ಡಾಂಬರು ಸುರಿದ ಗುತ್ತಿಗೆದಾರ!

ನಿಯಮಗಳ ಪ್ರಕಾರ, ರಸ್ತೆ ನಿರ್ಮಾಣ ಅಥವಾ ಅಗಲೀಕರಣ ಮಾಡುವ ಮುನ್ನ ಮಾರ್ಗಮಧ್ಯೆ ಬರುವ ವಿದ್ಯುತ್ ಕಂಬಗಳು, ನೀರಿನ ಪೈಪ್‌ಲೈನ್‌ಗಳನ್ನು ಸ್ಥಳಾಂತರಿಸಲು ಜೆಸ್ಕಾಂ (GESCOM) ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಶಿಫ್ಟ್ ಮಾಡಿಸಬೇಕು. ಆದರೆ, ಇಲ್ಲಿನ ಗುತ್ತಿಗೆದಾರರು ಮತ್ತು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಗಳು ಕನಿಷ್ಠ ಜವಾಬ್ದಾರಿಯನ್ನೂ ಪ್ರದರ್ಶಿಸಿಲ್ಲ. ರಸ್ತೆಯ ಮಧ್ಯದಲ್ಲಿದ್ದ ಅಪಾಯಕಾರಿ ಹೈ-ಟೆನ್ಷನ್/ವಿದ್ಯುತ್ ಕಂಬವನ್ನು ಹಾಗೇ ಬಿಟ್ಟು, ಅದರ ಬುಡದ ಸುತ್ತಲೂ ಡಾಂಬರು ಸುರಿದು ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಕೈತೊಳೆದುಕೊಂಡಿದ್ದಾರೆ! ಇದನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನ ಸವಾರರಿಗೆ ಕಾದಿದೆ ಯಮಲೋಕ ದರ್ಶನ:

ಈ ರಸ್ತೆಯಲ್ಲಿ ರಾತ್ರಿ ವೇಳೆ ಅಥವಾ ಮಳೆಗಾಲದಲ್ಲಿ ಬೀದಿ ದೀಪಗಳು ಸರಿಯಾಗಿ ಬೆಳಗದಿದ್ದರೆ, ವೇಗವಾಗಿ ಬರುವ ಬೈಕ್ ಅಥವಾ ಕಾರು ಸವಾರರು ನೇರವಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದು ಕೇವಲ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿಲ್ಲ, ಪ್ರಾಣಾಪಾಯಕ್ಕೂ ನೇರ ಆಹ್ವಾನ ನೀಡುವಂತಿದೆ. 'ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಮಾಡಿದ್ರೆ ಏನು ಪ್ರಯೋಜನ? ನಡುರಸ್ತೆಯಲ್ಲಿ ಕಂಬ ಬಿಟ್ಟು ರಸ್ತೆ ಮಾಡುವ ಇಂತಹ ಅದ್ಭುತ ಎಂಜಿನಿಯರ್‌ಗಳಿಗೆ ಪ್ರಶಸ್ತಿ ಕೊಡಬೇಕು' ಎಂದು ಸ್ಥಳೀಯ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತು, ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಿ ಸಂಭಾವ್ಯ ರಕ್ತಪಾತವನ್ನು ತಪ್ಪಿಸಬೇಕಿದೆ.

PREV
Read more Articles on
click me!

Recommended Stories

ಮಂಡ್ಯದಲ್ಲಿ ಆಯುಧ ಪೂಜೆ ವೇಳೆ ಘೋರ ದುರಂತ: ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ದಾರುಣ ಸಾವು
ಕಾಂಗ್ರೆಸ್​, ಬಿಜೆಪಿಯವ್ರು ಆಫರ್​ ಕೊಟ್ರೂ JDSಗೆ ಹೋಗಿದ್ಯಾಕೆ Bigg Boss ಜಾಹ್ನವಿ? ಏನ್​ ಹೇಳಿದ್ರು ಕೇಳಿ