ಮಂಡ್ಯದಲ್ಲಿ ಆಯುಧ ಪೂಜೆ ವೇಳೆ ಘೋರ ದುರಂತ: ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ದಾರುಣ ಸಾವು

Published : Oct 20, 2026, 07:57 PM IST
mandya maddur ayudha pooja

ಸಾರಾಂಶ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ಆಯುಧ ಪೂಜೆ ದಿನವೇ ಭಾರಿ ದುರಂತವೊಂದು ಸಂಭವಿಸಿದೆ. ಪೂಜೆ ಮುಗಿದ ಬಳಿಕ ಕಾರು ಪಾರ್ಕ್ ಮಾಡುವಾಗ ಚಕ್ರಕ್ಕೆ ಸಿಲುಕಿ ೩ ವರ್ಷದ ಬಾಲಕ ಕಂದನ್ ಮೃತಪಟ್ಟಿದ್ದಾನೆ. ಈ ಘಟನೆಯಿಂದ ಇಡೀ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಮಂಡ್ಯ (ಅ.20): ಆಯುಧ ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಹಬ್ಬದ ದಿನವೇ ಭಾರಿ ದುರಂತ ಸಂಭವಿಸಿದ್ದು, ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಮುದ್ದು ಬಾಲಕ ದಾರುಣವಾಗಿ ಮೃತಪಟ್ಟ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಜರುಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಂದನ್ ಎಸ್. ಗೌಡ (3) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ನಿವಾಸಿ ಸಂಪತ್ ಎಂಬುವವರ ಕುಟುಂಬಸ್ಥರು ಆಯುಧ ಪೂಜೆಯ ಪ್ರಯುಕ್ತ ತಮ್ಮ ಮನೆಯ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ಪೂಜಾ ಕಾರ್ಯಕ್ರಮಗಳೆಲ್ಲವೂ ಅತ್ಯಂತ ಸಂಭ್ರಮದಿಂದ ಪೂರ್ಣಗೊಂಡಿದ್ದವು.

ಪೂಜೆ ಮುಗಿದ ನಂತರ, ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಬೇರೆ ಕಡೆ ಸರಿಯಾಗಿ ಪಾರ್ಕ್ ಮಾಡಲು ಸಂಪತ್ ಅವರ ಭಾವಮೈದ ಸಂಜಯ್ ಎಂಬುವವರು ಕಾರು ಹತ್ತಿ ಚಾಲನೆ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ಕಾರು ಚಲಿಸುವುದನ್ನು ಕಂಡ ಸಂಪತ್ ಅವರ 3 ವರ್ಷದ ಪುತ್ರ ಕಂದನ್, ಕಾರು ಹತ್ತಲು ಓಡೋಡಿ ಬಂದಿದ್ದಾನೆ.

ಗಮನಿಸದೆ ಕಾರು ಚಲಾಯಿಸಿದ್ದೇ ದುರಂತಕ್ಕೆ ಕಾರಣ

ಮಗು ಕಾರು ಹತ್ತಲು ಬರುತ್ತಿರುವುದನ್ನು ಗಮನಿಸದ ಚಾಲಕ ಸಂಜಯ್, ದಿಢೀರನೆ ಕಾರನ್ನು ಮುಂದೆ ಚಲಾಯಿಸಿದ್ದಾರೆ. ಈ ವೇಳೆ ಕಾರಿನ ಭಾರಿ ಚಕ್ರಕ್ಕೆ ಸಿಲುಕಿದ ಬಾಲಕ ಕಂದನ್ ತೀವ್ರ ರಕ್ತಸ್ರಾವಕ್ಕೊಳಗಾಗಿ ರಸ್ತೆಯಲ್ಲೇ ಬಿದ್ದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಕಂಡು ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಬಾಲಕನನ್ನು ಚಿಕಿತ್ಸೆಗಾಗಿ ಮದ್ದೂರು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ತೀವ್ರ ಗಾಯಗೊಂಡಿದ್ದ ಬಾಲಕ ಕಂದನ್ ಆಸ್ಪತ್ರೆಗೆ ತಲುಪಿಸುವ ಮುನ್ನವೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಆಯುಧ ಪೂಜೆಯ ಸಡಗರದಲ್ಲಿದ್ದ ಇಡೀ ಕುಟುಂಬದಲ್ಲಿ ಈ ಘಟನೆಯಿಂದಾಗಿ ಶೋಕಸಾಗರ ಆವರಿಸಿದ್ದು, ಮಗುವಿನ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಕಾಂಗ್ರೆಸ್​, ಬಿಜೆಪಿಯವ್ರು ಆಫರ್​ ಕೊಟ್ರೂ JDSಗೆ ಹೋಗಿದ್ಯಾಕೆ Bigg Boss ಜಾಹ್ನವಿ? ಏನ್​ ಹೇಳಿದ್ರು ಕೇಳಿ
ಮಂಗಳೂರು ಏರ್‌ಪೋರ್ಟ್‌ ಯೂಸರ್‌ ಡೆವಲಪ್‌ಮೆಂಟ್‌ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಸಲು ಅದಾನಿ ತಯಾರಿ