ಜಿಲ್ಲೆಯಲ್ಲಿ ಎರಡು ಚುನಾವಣೆ ಅಂದರೆ 10 ವರ್ಷಗಳ ಕಾಲ ಒಂದೇ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಯನ್ನು ಗೆಲ್ಲಿಸುವ ದ್ವಿಸದಸ್ಯ ಕ್ಷೇತ್ರಗಳಿದ್ದವು.
ಉಗಮ ಶ್ರೀನಿವಾಸ್
ತುಮಕೂರು : ಜಿಲ್ಲೆಯಲ್ಲಿ ಎರಡು ಚುನಾವಣೆ ಅಂದರೆ 10 ವರ್ಷಗಳ ಕಾಲ ಒಂದೇ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಯನ್ನು ಗೆಲ್ಲಿಸುವ ದ್ವಿಸದಸ್ಯ ಕ್ಷೇತ್ರಗಳಿದ್ದವು.
1952ರಲ್ಲಿ ಪಾವಗಡ ಮತ್ತು ಮಧುಗಿರಿ ಕ್ಷೇತ್ರಗಳು ದ್ವಿಸದಸ್ಯ ಕ್ಷೇತ್ರಗಳಾಗಿದ್ದವು. 1952ರಲ್ಲಿ ನಡೆದ ಚುನಾವಣೆಯಲ್ಲಿ ಪಾವಗಡದಿಂದ ಕಾಂಗ್ರೆಸ್ ಅಭ್ಯರ್ಥಿಗಳಾದ ಸಿ.ಟಿ. ಹನುಮಂತಯ್ಯ24332 ಮತ ಮತ್ತು ಮಾಲಿ ಮರಿಯಪ್ಪ 22883 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು. ಆ ಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷದ ಅಭ್ಯರ್ಥಿ ಬಿ. ನಾರಾಯಣನಾಯ್ಕ 8490 ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಆರ್. ಮಾಧವರಾವ್ ಅವರು 8105 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.
ಹಾಗೆಯೇ 1957ರಲ್ಲಿ ಪಾವಗಡ ಬದಲಿಗೆ ಶಿರಾ ಕ್ಷೇತ್ರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಅಲ್ಲದೇ ಮಧುಗಿರಿ ಕೂಡ ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ನಡೆದ ಚುನಾವಣೆಯಲ್ಲಿ ಶಿರಾದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿ. ತಾರೇಗೌಡ ಅವರು 33 ಸಾವಿರದ 195 ಮತಗಳನ್ನು ಪಡೆದು ಶಾಸಕರಾದರು. ಹಾಗೆಯೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪಿ. ಆಂಜಿನಪ್ಪ ಅವರು 24 ಸಾವಿರದ 926 ಮತ ಪಡೆದು ಎರಡನೇ ಸದಸ್ಯರಾಗಿ ವಿಧಾನಸಭೆ ಪ್ರವೇಶಿಸಿದರು.
ಆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ದೇವಣಂ ಸತ್ಯನಾರಾಯಣ 7 ಸಾವಿರದ 22 ಮತಗಳನ್ನು ಹಾಗೂ ಬಿಜೆಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ. ಚಂದ್ರಶೇಖರಯ್ಯ ಅವರು 6 ಸಾವಿರದ 926 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.
ಮಧುಗಿರಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಲಿ ಮರಿಯಪ್ಪ ಅವರು 26 ಸಾವಿರದ 807 ಮತ ಪಡೆದು ಜಯ ಸಾಧಿಸಿದರು. ಹಾಗೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್. ಚೆನ್ನಿಗರಾಮಯ್ಯ ಅವರು 25 ಸಾವಿರದ 95 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಇನ್ನು ಪ್ರಜಾ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಎಸ್. ಶಿವಣ್ಣ 22 ಸಾವಿರದ 501 ಹಾಗೂ ಎಸ್. ಅಂಜಯ್ಯ ಅವರು 20 ಸಾವಿರದ 682 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಈ ಎರಡು ಚುನಾವಣೆ ಬಳಿಕ ದ್ವಿಸದಸ್ಯ ಕ್ಷೇತ್ರಗಳು ಇಲ್ಲದಂತಾಯಿತು.
ಆದರೆ 1962ರಲ್ಲಿ ನಡೆದ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಜಿಲ್ಲೆ ಒಳಗೊಂಡಿತ್ತು. ಎರಡು ಮೀಸಲು ಕ್ಷೇತ್ರ ಜೊತೆಗೆ ಚಂದ್ರಶೇಖರಪುರ ಕೂಡ ವಿಧಾನಸಭಾ ಕ್ಷೇತ್ರವಾಗಿತ್ತು.
1967ರಲ್ಲಿ ನಡೆದ ಚುನಾವಣೆಯಲ್ಲಿ 13 ವಿಧಾನಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂತು. 1962ರಲ್ಲಿ ಇದ್ದ ಚಂದ್ರಶೇಖರಪುರ ಕ್ಷೇತ್ರವನ್ನು ತೆಗೆಯಲಾಯಿತು. ಅದರ ಬದಲಿಗೆ ಕಳ್ಳಂಬೆಳ್ಳ ಹಾಗೂ ಗೂಳೂರು ಕ್ಷೇತ್ರವನ್ನು ಸೇರಿಸಲಾಯಿತು. ಗೂಳೂರು ಕ್ಷೇತ್ರ ಮೀಸಲು ಕ್ಷೇತ್ರವಾಗಿತ್ತು.
1983ರಲ್ಲಿ ಹೊಸದಾಗಿ ಬೆಳ್ಳಾವಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಬೆಳ್ಳಾವಿ ಹಾಗೂ ಹುಲಿಯೂರು ದುರ್ಗ ಕ್ಷೇತ್ರ ತೆಗೆದು 11 ವಿಧಾನಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂತು. ಆಗ ತುಮಕೂರು ಗ್ರಾಮಾಂತರ ಎಂಬ ಹೊಸ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 2008ರವರೆಗೆ ಮಧುಗಿರಿ ಹಾಗೂ ಪಾವಗಡ ಮೀಸಲು ಕ್ಷೇತ್ರವಾಗಿತ್ತು. 2008ರಲ್ಲಿ ಮಧುಗಿರಿಯನ್ನು ಸಾಮಾನ್ಯ ಕ್ಷೇತ್ರವನ್ನಾಗಿಸಿ ಕೊರಟಗೆರೆಯನ್ನು ಮೀಸಲು ಕ್ಷೇತ್ರವನ್ನಾಗಿಸಲಾಯಿತು.
ಮುಖ್ಯಾಂಶಗಳು
1. 1952ರಲ್ಲಿ ಪಾವಗಡ, ಮಧುಗಿರಿ ದ್ವಿಸದಸ್ಯ ಕ್ಷೇತ್ರ
2. 1957ರಲ್ಲಿ ಶಿರಾ ಮತ್ತು ಮಧುಗಿರಿ ದ್ವಿಸದಸ್ಯ ಕ್ಷೇತ್ರ
3. ಈ ಮೊದಲು 13 ವಿಧಾನಸಭಾ ಕ್ಷೇತ್ರಗಳಿದ್ದವು
4. ಕ್ಷೇತ್ರ ಪುನರ್ ವಿಂಗಡಣೆ ಬಳಿಕ 11 ಕ್ಷೇತ್ರಗಳಿವೆ
*1952ರಲ್ಲಿ ನಡೆದ ಚುನಾವಣೆಯಲ್ಲಿ ಪಾವಗಡದಿಂದ ಕಾಂಗ್ರೆಸ್ ಅಭ್ಯರ್ಥಿಗಳಾದ ಸಿ.ಟಿ. ಹನುಮಂತಯ್ಯ 24332 ಮತ ಮತ್ತು ಮಾಲಿ ಮರಿಯಪ್ಪ 22883 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು
*1957ರಲ್ಲಿ ಶಿರಾದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿ. ತಾರೇಗೌಡ ಅವರು 33 ಸಾವಿರದ 195 ಮತಗಳನ್ನು ಪಡೆದು ವಿಜಯಿಯಾದರು
*ಮಧುಗಿರಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಲಿ ಮರಿಯಪ್ಪ ಅವರು 26 ಸಾವಿರದ 807 ಮತ ಪಡೆದು ಜಯ ಸಾಧಿಸಿದರು
*1983 ರಲ್ಲಿ ಹೊಸದಾಗಿ ಬೆಳ್ಳಾವಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು