ಲೋಡ್‌ಶೆಡ್ಡಿಂಗ್ ವಿರೋಧಿಸಿ ಬೆಸ್ಕಾಂ ಇಲಾಖೆಯ ವಿರುದ್ಧ ತಾಲೂಕಿನ ಅನಗೊಂಡನಹಳ್ಳಿ, ಮಾರನಗೆರೆ, ಆಲದಹಳ್ಳಿ, ಕೆರೆಗೋಡಿ ಭಾಗದ ಸುತ್ತಲಿನ ಗ್ರಾಮಗಳ ನೂರಾರು ರೈತರು ನಗರದ ಬೆಸ್ಕಾಂ ಕಾರ್ಯನಿರ್ವಾಹಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಿಪಟೂರು: ಲೋಡ್‌ಶೆಡ್ಡಿಂಗ್ ವಿರೋಧಿಸಿ ಬೆಸ್ಕಾಂ ಇಲಾಖೆಯ ವಿರುದ್ಧ ತಾಲೂಕಿನ ಅನಗೊಂಡನಹಳ್ಳಿ, ಮಾರನಗೆರೆ, ಆಲದಹಳ್ಳಿ, ಕೆರೆಗೋಡಿ ಭಾಗದ ಸುತ್ತಲಿನ ಗ್ರಾಮಗಳ ನೂರಾರು ರೈತರು ನಗರದ ಬೆಸ್ಕಾಂ ಕಾರ್ಯನಿರ್ವಾಹಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದರು, ಸಾರಾಗವಾಗಿ ವಿದ್ಯುತ್ ಕಡಿತವಿಲ್ಲದೆ ವಿದ್ಯುತ್ ನೀಡಬೇಕು. ಅನೇಕ ಮಂದಿ ತೋಟದ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ನಿರಂತರ ವಿದ್ಯುತ್ ನೀಡಿಲ್ಲ. ಕಳೆದ ಹದಿನೈದು ದಿನಗಳಿಂದ ವಿದ್ಯುತ್ ಇಲ್ಲದೆ ಜನ, ಜಾನುವಾರು ನೀರಿಗಾಗಿ ಪರದಾಡುವಂತಾಗಿದೆ. ಬೆಳೆದ ಬೆಳೆಗಳು ನೀರಿಲ್ಲದ ಒಣಗಿ ಹೋಗುತ್ತಿದ್ದು ಮಳೆಯೂ ಇಲ್ಲದಂತಾಗಿದೆ. ಬೆಸ್ಕಾಂನವರು ರೈತರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ. ತೋಟದ ಮನೆಗಳಲ್ಲಿರುವ ಮನೆಗಳಿಗೂ ಸಂಜೆಯ ಬಳಿಕ ನೀಡದೆ ಕಾರ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಸಂಜೆ ಹಾಗೂ ರಾತ್ರಿ ವೇಳೆ ವಿದ್ಯುತ್ ನೀಡದಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿಗೆ ಹೆದರುವಂತಾಗಿದೆ. ವಿದ್ಯುತ್ ಅಭಾವದಿಂದ ತೆಂಗು, ಅಡಿಕೆ, ಬಾಳೆ ಗಿಡಗಳು ಒಣಗಿ ಹೋಗುತ್ತಿದ್ದು, ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ತೋಟದ ಮನೆಗಳಲ್ಲಿ ರೈತರು ಪಶುಪಾಲನೆಯನ್ನೇ ಅವಲಂಬಿಸಿದ್ದು, ಕುಡಿವ ನೀರು ಹಾಗೂ ಹಸಿ ಮೇವಿಗೆ ತೀವ್ರ ತೊಂದರೆಯಾಗಿದೆ. ವೋಲ್ಟೇಜ್ ಸಮಸ್ಯೆಯಿಂದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಾಕಾಗುತ್ತಿಲ್ಲ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಕೂಡಲೆ ಬೆಸ್ಕಾಂ ಇಲಾಖೆ ಅಗತ್ಯ ಕ್ರಮಕೈಗೊಂಡು ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯಕ್ಕೆ ವಿದ್ಯುತ್ ಕಲ್ಪಿಸಬೇಕು. ಇಲ್ಲವಾದಲ್ಲಿ ಬೆಸ್ಕಾಂ ಕಚೇರಿ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳುವುದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
undefined
ತಿಪಟೂರು ವಿಭಾಗ ಕಾರ್ಯನಿರ್ವಹಣಾಧಿಕಾರಿ ಜಿ. ಸೋಮಶೇಖರ್ ಮಾತನಾಡಿ, ರಾಜ್ಯದೆಲ್ಲೆಡೆ ವಿದ್ಯುತ್ ಸಮಸ್ಯೆ ಉಂಟಾಗಿದೆ. ಬರಗಾಲದ ಕಾರಣ ವಿದ್ಯುತ್ ಅಭಾವವಿದೆ. ನೀವು ಕೇಳಿದ ತಕ್ಷಣ ವಿದ್ಯುತ್ ನೀಡುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಬೇಕು. ಏಕಾಏಕಿ ಪ್ರತಿಭಟನೆ ನಡೆಸಿದರೆ ಎಲ್ಲರಿಗೂ ತೊಂದರೆಯಾಗಲಿದೆ. ನಿಮ್ಮ ಫೀಡರ್‌ಗೆ ೮ ಗಂಟೆಗಳ ಕಾಲ ಕರೆಂಟ್ ಕೊಟ್ಟರೆ ಬೇರೆ ಫೀಡರ್‌ಗಳಿಗೆ ವಿದ್ಯುತ್ ಅಭಾವ ಉಂಟಾಗಲಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು. ತೋಟದ ಮನೆಗಳಿಗೆ ನಿರಂತರ ವಿದ್ಯುತ್ ನೀಡುವುದಕ್ಕೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕು. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದರು.
ಆದರೂ, ಮಾತಿಗೆ ಜಗ್ಗದ ರೈತರು ನೀವು ಸಬೂಬು ಹೇಳಿ ನಮ್ಮನ್ನು ವಾಪಸ್ ಕಳುಹಿಸುವುದಕ್ಕೆ ನೋಡುತ್ತಿದ್ದೀರಿ. ರೈತರ ಸಮಸ್ಯೆಯನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ವಿದ್ಯುತ್ ಇಲ್ಲದೆ ರಾತ್ರಿ ವೇಳೆ ತೋಟದ ಮನೆಯಲ್ಲಿ ವಾಸ ಮಾಡುವುದಕ್ಕೆ ಹೇಗೆ ಸಾಧ್ಯ ನೀವು ಬಂದು ನಮ್ಮೊಂದಿಗಿದ್ದರೆ ಸಮಸ್ಯೆ ಅರ್ಥವಾಗುತ್ತದೆ. ನಿಮ್ಮ ಮಾತಿಗೆಲ್ಲ ಬಗ್ಗವುದಿಲ್ಲ ನಮಗೆ ಪಂಪ್‌ಸೆಟ್‌ಗಳಿಗೆ ತ್ರಿಪೇಸ್ ವಿದ್ಯುತ್ ಹಾಗೂ ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಕಲ್ಪಿಸಿ ಕೊಡುತ್ತೇವೆಂದು ಹೇಳುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.
ಎಇಇ ಮನೋಹರ್, ಎಇ ಚೇತನ್ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು ರೈತರ ಮನವೋಲಿಸಲು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಪ್ರತಿಭಟನೆಯಲ್ಲಿ ರೈತರಾದ ಮಾರನಗೆರೆ ಸಂಗಮೇಶ್, ನಿರಂಜನ್, ಆಲದಹಳ್ಳಿ ವಿಶ್ವನಾಥ್, ಅನಗೊಂಡನಹಳ್ಳಿಯ ಚಂದ್ರಶೇಖರ್, ಪ್ರಶಾಂತ್, ಅಶೋಕ್, ಪ್ರಭುಸ್ವಾಮಿ, ಕೀರ್ತಿ, ಸಂತೋಷ್, ಆನಂದ್, ಸುದರ್ಶನ್, ಪಂಚಾಕ್ಷರಿ, ರಘು, ಮೋಹನ್ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.