
ಬೆಂಗಳೂರು (ಸೆ.15): ಕರಾವಳಿ ಕರ್ನಾಟಕದ ಕೋಟಿಗೂ ಅಧಿಕ ಜನರ ದಶಕಗಳ ಕನಸಾದ 'ತುಳು' ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳು ಭರದಿಂದ ಸಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮಹತ್ವದ ಪೋಸ್ಟ್ ಹಂಚಿಕೊಂಡಿರುವ ಸಚಿವರು, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಒದಗಿಸುವಲ್ಲಿ ಸರ್ಕಾರ ಕೈಗೊಂಡಿರುವ ಸರಣಿ ಕ್ರಮಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ, ಕರಾವಳಿಯ ಸಂಸ್ಕೃತಿ ಮತ್ತು ತುಳು ಶಾಸನಗಳ ಕುರಿತು ಈಗಾಗಲೇ ಸಮಗ್ರ ಅಧ್ಯಯನ ನಡೆಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯು 2023 ರ ಫೆಬ್ರವರಿ 14 ರಂದೇ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು.
ಡಾ. ಆಳ್ವ ಸಮಿತಿಯ ವರದಿಯ ಮುಂದುವರಿದ ಭಾಗವಾಗಿ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚುವರಿ ಅಥವಾ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಕಾನೂನು ಮಾದರಿಗಳನ್ನು ಅಧ್ಯಯನ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಉದ್ದೇಶಕ್ಕಾಗಿ 2025 ರ ಜುಲೈ 30 ರಂದು ವಿಶೇಷ ಅಧ್ಯಯನ ತಂಡವನ್ನು ರಚಿಸಲಾಗಿತ್ತು. ಈ ತಂಡವು 2026 ರ ಜನವರಿ 19 ಮತ್ತು 20 ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಅನುಷ್ಠಾನಗೊಳಿಸಿದ ಕಾನೂನು ಚೌಕಟ್ಟು ಹಾಗೂ ಆಡಳಿತಾತ್ಮಕ ಮಾದರಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ಪರಿಶೀಲನೆಯ ನಂತರ ಅಧ್ಯಯನ ತಂಡವು 2026 ರ ಮಾರ್ಚ್‌ನಲ್ಲಿ ಸರ್ಕಾರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
ತುಳು ಭಾಷೆಯ ಮಹತ್ವವನ್ನು ಒತ್ತಿ ಹೇಳಿರುವ ಸಚಿವ ಶಿವರಾಜ್ ತಂಗಡಗಿ, "ತುಳು ಕೇವಲ ನಮ್ಮ ಕರಾವಳಿ ಭಾಗದ ಭಾಷೆಯಷ್ಟೇ ಅಲ್ಲ. ಅದು ಕರ್ನಾಟಕದ ಶ್ರೀಮಂತ ಭಾಷಾ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ತುಳು ಭಾಷೆಯ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಸೂಕ್ತ ಕಾನೂನು ಚೌಕಟ್ಟಿನೊಳಗೆ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.
ತಮ್ಮ ಪೋಸ್ಟ್‌ನ ಕೊನೆಯಲ್ಲಿ ತುಳು ಭಾಷೆಯಲ್ಲೇ “ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪು” (ನಾನು ಯಾವಾಗಲೂ ಜನರ ಭಾವನೆಗಳೊಂದಿಗೆ ಇರುತ್ತೇನೆ) ಎಂದು ಬರೆಯುವ ಮೂಲಕ ಕರಾವಳಿಗರ ಭಾವನೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಸಚಿವರ ಈ ಪೋಸ್ಟ್ ತುಳು ಅಭಿಮಾನಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ.
ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ.
ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ…— Shivaraj S Tangadagi (@sstangadagi) September 15, 2026