ಭುಗಿಲೆದ್ದಿದೆ ಆಂಜನೇಯ ಜನ್ಮ ಸ್ಥಳ ವಿವಾದ : ಯಾಕೆ ಕಿತ್ತಾಟ..?

By Kannadaprabha News  |  First Published Apr 25, 2021, 8:10 AM IST

ಆಂಜನೇಯ ಜನ್ಮಸ್ಥಳವೆಂದೇ ನಂಬಲಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬೆಳವಣಿಗೆಯನ್ನು ಸಹಿಸದ ಟಿಟಿಡಿ ಇದೀಗ ತಿರುಮಲವೇ ಆಂಜನೇಯನ ಜನ್ಮಸ್ಥಳವೆಂದು ಕ್ಯಾತೆ ತೆಗೆದಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.


ವರದಿ : ಸೋಮರೆಡ್ಡಿ ಅಳವಂಡಿ

  ಕೊಪ್ಪಳ (ಏ.25):  ದಿನದಿಂದ ದಿನಕ್ಕೆ ವಿಶ್ವ ಪ್ರಸಿದ್ಧವಾಗುತ್ತಿರುವ ಅಂಜನಾದ್ರಿ ಬೆಟ್ಟ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ, ಖ್ಯಾತನಾಮರ ನಿರಂತರ ಭೇಟಿ, ಕೋಟ್ಯಂತರ ರುಪಾಯಿ ಆದಾಯ!

Latest Videos

undefined

-ಇವೇ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಟ್ರಸ್ಟ್‌ನ ಹೊಟ್ಟೆನೋವಿಗೆ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹಿಂದಿನಿಂದಲೂ ಆಂಜನೇಯ ಜನ್ಮಸ್ಥಳವೆಂದೇ ನಂಬಲಾಗಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಬೆಳವಣಿಗೆಯನ್ನು ಸಹಿಸದ ಟಿಟಿಡಿ ಇದೀಗ ತಿರುಮಲವೇ ಆಂಜನೇಯನ ಜನ್ಮಸ್ಥಳವೆಂದು ಕ್ಯಾತೆ ತೆಗೆದಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಡುವೆ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯ ಲೆಕ್ಕಾಚಾರ ಶುರುವಾಗಿದ್ದು ಭಕ್ತ ಸಾಗರವೇ ಹರಿದುಬರುವ ದೇಶದ ಕೆಲವೇ ಕೆಲವು ದೇವಸ್ಥಾನಗಳ ಪೈಕಿ ಅಂಜನಾದ್ರಿಯೂ ಒಂದಾಗಲಿದೆ ಎನ್ನುವ ಬಲವಾದ ನಂಬಿಕೆ ಮೂಡುತ್ತಿದೆ. ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ ಸುಮಾರು 25 ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

'ಆಂಜನೇಯನ ಜನ್ಮಕ್ಕೆ ಇಲ್ಲಿವೆ ಹಲವು ಸಾಕ್ಷ್ಯಗಳು' ...

ಈ ಮೊದಲು ಖಾಸಗಿಯಾಗಿ ಇದ್ದ ಟ್ರಸ್ಟ್‌ವೊಂದರ ಅಡಿಯಲ್ಲಿ ಇದ್ದ ಇಲ್ಲಿನ ದೇವಸ್ಥಾನವನ್ನು 3 ವರ್ಷಗಳ ಹಿಂದೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿತ್ತು. ಅಂದಿನಿಂದ ನಿತ್ಯ ನಾಲ್ಕಾರು ಸಾವಿರ ಮಂದಿ ಆಗಮಿಸುತ್ತಿದ್ದಾರೆ. ವಿಶೇಷ ದಿನ, ಮಂಗಳವಾರ, ಶನಿವಾರಗಳಂದು ಇದರ ದುಪ್ಪಟ್ಟು ಜನ, ಭಾನುವಾರವಂತೂ 25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಒಟ್ಟಾರೆ ವಾರ್ಷಿಕ ಅಂದಾಜು 25 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆಯುತ್ತಾರೆ. ಜಾಕಿಚಾನ್‌, ಜಶೋಧಾ ಬೆನ್‌, ಮಲ್ಲಿಕಾ ಶೆರಾವತ್‌, ಉಮಾ ಭಾರತಿ, ಪುನೀತ್‌ ರಾಜಕುಮಾರ್‌, ಧ್ರುವ ಸರ್ಜಾ ಸೇರಿದಂತೆ ಅನೇಕರ ಖ್ಯಾತನಾಮರೂ ಭೇಟಿ ನೀಡಿದ್ದಾರೆ.

ಲಕ್ಷಾಂತರ ಮಾಲಾಧಾರಿಗಳು: ಶ್ರೀ ಅಯ್ಯಪ್ಪ ದೇವರಿಗೆ ಮಾಲೆ ಹಾಕಿದಂತೆ ಇಲ್ಲಿನ ಹನುಮಭಕ್ತರೂ ದೇಶದಾದ್ಯಂತ ಮಾಲೆ ಧರಿಸುತ್ತಿದ್ದಾರೆ. 2007ರಲ್ಲಿ ಪ್ರಾರಂಭವಾದ ಮಾಲಾಧಾರಣೆ ತೀವ್ರವಾಗಿ ಬೆಳೆಯುತ್ತಿದ್ದು, ಪ್ರತಿ ವರ್ಷವೂ ಲಕ್ಷ ಲಕ್ಷ ಭಕ್ತರು ಹನುಮ ಮಾಲೆ ಧಾರಣೆ ಮಾಡುತ್ತಾರೆ. ಇದರ ವಿಸರ್ಜನೆ ವೇಳೆ ಲಕ್ಷಕ್ಕೂ ಅಧಿಕ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಾರೆ. ಈ ಎಲ್ಲ ಬೆಳವಣಿಗೆಗಳಿಂದ ವರ್ಷಕ್ಕೆ ಕೋಟ್ಯಂತರ ರುಪಾಯಿ ಆದಾಯವೂ ಬರಲಾರಂಭಿಸಿದೆ.

50 ಕೋಟಿ ಮಾಸ್ಟರ್‌ ಪ್ಲಾನ್‌: ಇದೆಲ್ಲವನ್ನು ಅರಿತಿರುವ ರಾಜ್ಯ ಸರ್ಕಾರ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಮಾಸ್ಟರ್‌ಪ್ಲಾನ್‌ ಮಾಡಿದ್ದು, ಸುಮಾರು .50 ಕೋಟಿ ಪ್ರಸ್ತಾವನೆ ಸಿದ್ಧ ಮಾಡಿದೆ. ಈ ಎಲ್ಲ ಬೆಳವಣಿಗೆಗಳು ಟಿಟಿಡಿ ಕಣ್ಣು ಕುಕ್ಕಲು ಕಾರಣ ಎನ್ನಲಾಗಿದೆ.

ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳ. ಇದರಲ್ಲಿ ಯಾವ ಅನುಮಾನವೂ ಬೇಡ. ಆದರೆ, ಈಗೀಗ ಇದರ ಜನಪ್ರಿಯತೆ ಸಹಿಸದೆ ತಗಾತೆ ತೆಗೆಯಲಾಗುತ್ತಿದೆ.

-ವಿದ್ಯಾದಾಸ್‌ ಬಾಬಾ, ಅರ್ಚಕ, ಆಂಜನೇಯ ದೇವಸ್ಥಾನ

ಇಂಥ ತಗಾದೆಗಳು ಇದ್ದಿದ್ದೆ. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅಭಿವೃದ್ಧಿಯ ಕಡೆ ಹೆಚ್ಚು ಒತ್ತು ನೀಡಬೇಕಾಗಿದೆ. ಲಕ್ಷ ಲಕ್ಷ ಭಕ್ತರ ನಂಬಿಕೆ ಮುಖ್ಯ.

-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ

click me!