5ಜಿ ಜಾರಿ ಮುನ್ನ 4ಜಿ ಗ್ರಾಹಕರ ಶೋಷಣೆ ತಪ್ಪಿಸಿ: ರಾಜೀವ್‌ ಚಂದ್ರಶೇಖರ್‌

By Kannadaprabha NewsFirst Published Apr 25, 2021, 7:56 AM IST
Highlights

ಇಂಟರ್‌ನೆಟ್‌ ನಿಯಂತ್ರಣಕ್ಕೆ ನೀತಿ ಅಗತ್ಯ| ಗ್ರಾಹಕರ ಶೋಷಣೆ ತಡೆಗೆ ನಿಯಂತ್ರಣ ನೀತಿ ಅನಿವಾರ್ಯ| 2ಜಿ, 3ಜಿ, 4ಜಿ ಆವಿಷ್ಕಾರದ ಬಳಿಕ ಈಗ 5ಜಿ ಸಂಪೂರ್ಣ ಭಿನ್ನ| ಅನಂತಕುಮಾರ್‌ ಪ್ರತಿಷ್ಠಾನ ವಿಚಾರ ಸಂಕಿರಣದಲ್ಲಿ ಸಂಸದ ಆರ್‌ಸಿ ಆಗ್ರಹ| 

ಬೆಂಗಳೂರು(ಏ.25): ದೇಶದಲ್ಲಿ ‘5ಜಿ’ ಇಂಟರ್‌ನೆಟ್‌ ಸೇವೆಯನ್ನು ಅಪ್ಪಿಕೊಳ್ಳುವ ಮೊದಲು ‘4ಜಿ’ ಅಡಿ ಗ್ರಾಹಕರ ಮಾಹಿತಿಯನ್ನು ಸಂರಕ್ಷಿಸುವ ಮತ್ತು ಗ್ರಾಹಕರನ್ನು ಶೋಷಣೆ ಮಾಡದಂತೆ ಸಾರ್ವಜನಿಕ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ಅನಂತಕುಮಾರ್‌ ಪ್ರತಿಷ್ಠಾನ ಶನಿವಾರ ವರ್ಚುವಲ್‌ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ‘ಆತ್ಮನಿರ್ಭರ ಭಾರತ: 5ಜಿ ಅವಕಾಶಗಳು ಮತ್ತು ತಯಾರಿ’ ವಿಷಯ ಕುರಿತು ಮಾತನಾಡಿದ ಅವರು, ಸದ್ಯ ದೇಶದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾನೂನುಗಳು ದಶಕಗಳ ಹಿಂದಿನವುಗಳಾಗಿವೆ. ಪ್ರಸ್ತುತ ತಂತ್ರಜ್ಞಾನ ಸಾಕಷ್ಟುಮುಂದುವರಿದಿದ್ದು, ನಿಯಂತ್ರಣ, ಬಳಕೆ ಕುರಿತು ಹೊಸ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದರು.

Latest Videos

‘ಇಂಟರ್‌ನೆಟ್‌, ಕೃತಕ ಬುದ್ಧಿಮತ್ತೆ ಹಾಗೂ ತಂತ್ರಜ್ಞಾನ ನಮ್ಮ ಮುಂದಿನ ಭವಿಷ್ಯದ ದಿನಗಳು ಹೇಗಿರಲಿವೆ ಎಂಬುದನ್ನು ತಿಳಿಸುತ್ತಿವೆ. ಆದ್ದರಿಂದ 5ಜಿಯನ್ನು ಕುರುಡುತನದಿಂದ ಒಪ್ಪಿಕೊಳ್ಳಬಾರದು. 5ಜಿ ಕೇವಲ ಮೊಬೈಲ್‌ನ ಅತಿ ವೇಗದ ತಂತ್ರಜ್ಞಾನ ಮಾತ್ರವಲ್ಲ, 5ನೇ ತಲೆಮಾರು ಮೊಬೈಲ್‌ ಟೆಕ್ನಾಲಜಿಯನ್ನು ಬಳಸುವುದನ್ನು ಪ್ರತಿಬಿಂಬಿಸಲಿದೆ. ಮೊದಲು ತಂತ್ರಜ್ಞಾನ ಎಂಬುದು ಯಂತ್ರದಿಂದ ಯಂತ್ರಕ್ಕೆ ಸೀಮಿತವಾಗಿತ್ತು. ಇದೀಗ ಎಲ್ಲಾ ಕ್ಷೇತ್ರಗಳ ಮೇಲೆಯೂ ಸಾಕಷ್ಟು ಪರಿಣಾಮ ಬೀರಲಿದೆ. 2ಜಿ, 3ಜಿ, 4ಜಿ ಆವಿಷ್ಕಾರದ ಬಳಿಕ ಈಗ 5ಜಿ ಸಂಪೂರ್ಣ ಭಿನ್ನವಾಗಿದೆ. ಬಿಸಿನೆಸ್‌ ಟೆಕ್ನಾಲಜಿ, ಫ್ಯೂಚರ್‌ ಟೆಕ್ನಾಲಜಿ, ಮೊಬೈಲ್‌ ಟೆಕ್ನಾಲಜಿ, ಇಂಟರ್‌ನೆಟ್‌ ಟೆಕ್ನಾಲಜಿಯಲ್ಲಿ ಸಾಕಷ್ಟುಬದಲಾವಣೆ ತರಲಿದೆ’ ಎಂದು ಹೇಳಿದರು.

ಸೋಶಿಯಲ್ ಮೀಡಿಯಾಗೆ ಮೂಗುದಾರ; ಆರ್‌ಸಿ ಪ್ರಶ್ನೆಗೆ ಸರ್ಕಾರದ ಉತ್ತರ!

‘2010ರಲ್ಲಿ ಚೀನಾ ದೇಶ ಇಂಟರ್‌ನೆಟ್‌ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಚೀನಾ ಪ್ರಯತ್ನಿಸಿತು. ಇದಕ್ಕೆ ಭಾರತ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿ ಚೀನಾದೊಂದಿಗೆ ಕೈಜೋಡಿಸಿರಲಿಲ್ಲ. ಆದರೂ ದೇಶದಲ್ಲಿ ಸದ್ಯ ಚೀನಾ ಸ್ಮಾರ್ಟ್‌ಗಳನ್ನು ಬಳಸುತ್ತಿರುವುದರಿಂದ ದೇಶದ ಸಾಕಷ್ಟುಮಾಹಿತಿ ಆ ದೇಶಕ್ಕೆ ರವಾನೆಯಾಗುವ ಸಾಧ್ಯತೆಗಳಿವೆ’ ಎಂದು ಹೇಳಿದರು.

ಅನಂತಕುಮಾರ್‌ ಪ್ರತಿಷ್ಠಾನದ ಟ್ರಸ್ಟಿಪ್ರದೀಪ್‌ ಓಕ್‌ ಮಾತನಾಡಿ, 5ಜಿ ಶಿಕ್ಷಣ, ಆರೋಗ್ಯ ಕ್ಷೇತ್ರ ಮಾತ್ರವಲ್ಲದೆ, ಬ್ಯಾಂಕಿಂಗ್‌, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ. ಕೇವಲ ಆರ್ಥಿಕತೆ ಮಾತ್ರವಲ್ಲ, ಕೃಷಿ, ಗ್ರಾಮೀಣ ಪ್ರದೇಶಗಳ ಪ್ರಗತಿ, ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌, ಫ್ಯಾಕ್ಟರಿ, ಆಟೋಮೊಬೈಲ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಜೊತೆಗೆ ಬದಲಾವಣೆ ತರಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪಿ.ವಿ.ಕೃಷ್ಣ ಭಟ್‌ ಹಾಗೂ ಕಾರ್ಯದರ್ಶಿಗಳಾದ ತೇಜಸ್ವಿನಿ ಅನಂತಕುಮಾರ್‌ ಪಾಲ್ಗೊಂಡಿದ್ದರು.
 

click me!