ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆ ಹೊಂದಿದವರ ಸಾಮಾಜಿಕ ಸಮೀಕ್ಷೆ: ನಾಗಾಭರಣ

By Suvarna News  |  First Published Jan 21, 2021, 2:46 PM IST

ಇತಿಹಾಸ, ಐತಿಹ್ಯ ಹಾಗೂ ಈಗಿನ ಕಾಲಘಟ್ಟದ ಬಗ್ಗೆಯೂ ತಿಳಿಯಬೇಕಿದೆ|ರಾಜ್ಯ ವಿಂಗಡಣೆಯಾಗಿ 65 ವರ್ಷಗಳಾದರೂ ಇನ್ನೂ ಭಾಷಾವಾರು ಗೊಂದಲ ಸೃಷ್ಟಿ| ಕನ್ನಡ ಭಾಷಾ ಚಟುವಟಿಕೆಗಳ ಮೂಲಕ ಕನ್ನಡ ಕಾಯಕ ವರ್ಷ ಅನುಷ್ಠಾನದ ಅಗತ್ಯ| 


ಕಲಬುರಗಿ(ಜ.21): ಬೆಳಗಾವಿಯಲ್ಲಿ ಮರಾಠಿ ಭಾಷೆ ಮಾತನಾಡುವವರು ಈವರೆಗೆ ಕನ್ನಡಿಗರಾಗಿ ಪರಿವರ್ತನೆಯಾಗಿರುವುದರ ಬಗ್ಗೆ ಸಾಮಾಜಿಕ ಸಮೀಕ್ಷೆ ಮಾಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರು ಘೋಷಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ, ಐತಿಹ್ಯ ಹಾಗೂ ಈಗಿನ ಕಾಲಘಟ್ಟದ ಬಗ್ಗೆಯೂ ತಿಳಿಯಬೇಕಿದೆ ಎಂದು ಪ್ರತಿಪಾದಿಸಿದರು. ರಾಜ್ಯ ವಿಂಗಡಣೆಯಾಗಿ 65 ವರ್ಷಗಳಾದರೂ ಇನ್ನೂ ಭಾಷಾವಾರು ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

Latest Videos

undefined

ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದ ಸರ್ಕಾರಿ ಅಧಿಕಾರಿಗಳಿಗೆ, ಕನ್ನಡ ಭಾಷೆ ಕಲಿಕೆ ಬಗ್ಗೆ 4 ಹಂತಗಳಲ್ಲಿ ಭಾಷೆಯನ್ನು ಕಲಿಯಲು ಅವಕಾಶ ನೀಡಲಾಗುತ್ತದೆ. ಹಂತ-ಹಂತವಾಗಿ ಕನ್ನಡ ಭಾಷೆ ಕಲಿಯಲು ಕಡ್ಡಾಯವಾಗಿ ನಿಯಮಗಳಿವೆ ಎಂದು ನಾಗಾಭರಣ ಹೇಳಿದರು.

ರಾಜ್ಯದ ಗಡಿ ಭಾಗದಿಂದ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗಾವಕಾಶದಲ್ಲಿ ಸರ್ಕಾರವು ಶೇ.5ರಷ್ಟು ಮೀಸಲಾತಿ ನೀಡುತ್ತದೆ. ಇದರಿಂದ ಕನ್ನಡಿಗರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

ಕನ್ನಡಿಗರ ಕೈ ತಪ್ಪುತ್ತಿರುವ ಬ್ಯಾಂಕಿಂಗ್ ಉದ್ಯೋಗಗಳು: ಟಿ.ಎಸ್.ನಾಗಾಭರಣ ಬೇಸರ

ಕನ್ನಡ ಭಾಷೆ ಅನುಷ್ಠಾನದಲ್ಲಿ ಜಿಲ್ಲಾಡಳಿತದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನಾಗಾಭರಣ ಅವರು ಕೃತಜ್ಞತೆ ಹೇಳಿದರು. ಅಲ್ಲದೇ ಕನ್ನಡ ಭಾಷೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಮುಂದಿನ ದಿನಗಳಲ್ಲಿ ಮತ್ತಷ್ಟುಸಿದ್ಧತೆಗಳನ್ನು ಮಾಡಿಕೊಳ್ಳುವುದಾಗಿ ತಿಳಿಸಿದರು.

ಕನ್ನಡ ಭಾಷಾ ಚಟುವಟಿಕೆಗಳ ಮೂಲಕ ಕನ್ನಡ ಕಾಯಕ ವರ್ಷ ಅನುಷ್ಠಾನದ ಅಗತ್ಯವಿದೆ. ಕನ್ನಡ ಭಾಷೆ ಇನ್ನಷ್ಟುಗಟ್ಟಿಯಾಗಿ ಕಟ್ಟಲು ಸಾಕಷ್ಟು ಹಂತಗಳ ಕಾರ್ಯ ಯೋಜನೆ ರೂಪಿಸಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ, ಕಾರ್ಯದರ್ಶಿ ಡಾ.ಮುರಳೀಧರ ಹಾಗೂ ಆಪ್ತ ಕಾರ್ಯದರ್ಶಿ ಡಾ. ವೀರಶೆಟ್ಟಿ ಇದ್ದರು.
 

click me!