ತಮಿಳುನಾಡು, ಆಂಧ್ರದಿಂದ ಬತ್ತ ತರುವ ಲಾರಿಗಳಿಂದ ರೋಗ ಹರಡುವ ಆತಂಕದಿಂದ ಈ ಕ್ರಮ| ಸಿಂಧನೂರು ರಸ್ತೆಯಲ್ಲಿನ ಹೊರವಲಯದ ಸಿದ್ಧಲಿಂಗನಗರದ ಸಿಎಂಎನ್ ಕಾಲೇಜು ಮೈದಾನದಲ್ಲಿ ತಮಿಳುನಾಡು ಮತ್ತು ತೆಲಂಗಾಣದ ಪ್ರತಿಯೊಂದು ಲಾರಿಗಳನ್ನ ನಿಲ್ಲಿಸುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸೂಚನೆ|
ಕಾರಟಗಿ(ಏ.25): ಇಲ್ಲಿನ ಅಕ್ಕಿ ಮತ್ತು ಬತ್ತದ ಮಾರುಕಟ್ಟೆಗೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಂದ ಈಗ ನಿತ್ಯ ಬರುವ ನೂರಾರು ಲಾರಿಗಳಿಂದ ಉಂಟಾದ ಕೊರೋನಾ ವೈರಸ್ ಹರಡುವ ಆತಂಕವನ್ನು ದೂರ ಮಾಡಲು ತಾತ್ಕಾಲಿಕವಾಗಿ ‘ಟ್ರಕ್ ಟರ್ಮಿನಲ್’ ಅನ್ನು ಹೊರವಲಯದಲ್ಲಿ ಸ್ಥಾಪಿಸಲಾಗಿದೆ.
ಸಿಂಧನೂರು ರಸ್ತೆಯಲ್ಲಿನ ಹೊರವಲಯದ ಸಿದ್ಧಲಿಂಗನಗರದ ಸಿಎಂಎನ್ ಕಾಲೇಜು ಮೈದಾನದಲ್ಲಿ ತಮಿಳುನಾಡು ಮತ್ತು ತೆಲಂಗಾಣದ ಪ್ರತಿಯೊಂದು ಲಾರಿಗಳು ಶನಿವಾರದಿಂದಲೇ ನಿಲ್ಲಿಸುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಮನೆಯಿಂದ ಆಚೆ ಬಂದವರಿಗೆ ಸ್ಪೆಷಲ್ ಪಿಪಿಇ ಕಿಟ್ ಹಾಕಿದ ಕೊಪ್ಪಳ ಪೊಲೀಸರು..!
ಕೊರೋನಾ ವೈರಸ್ ಹರಡದಂತೆ ಮತ್ತು ಸ್ಥಳೀಯ ರೈತರ, ವರ್ತಕರ ಮತ್ತು ಅಕ್ಕಿ ಉದ್ಯಮಿಗಳ ಹಿತ ಕಾಪಾಡುವ ದೃಷ್ಟಿಯಿಂದ ನೆರೆಯ ವೈರಸ್ ಪೀಡಿತ ಪ್ರದೇಶ ರಾಜ್ಯಗಳಿಂದ ಬರುವ ಲಾರಿಗಳನ್ನು ಹೊರವಲಯದಲ್ಲಿಯೇ ತಾತ್ಕಾಲಿಕವಾಗಿ ನಿಲ್ಲಿಸಲು ಟ್ರಕ್ ಟರ್ಮಿನಲ್ ಸ್ಥಾಪಿಸಲಾಗಿದ್ದು, ಅಲ್ಲಿಯೇ ನಿಲ್ಲಿಸುವಂತೆ ಮಾರುಕಟ್ಟೆ ಸಮಿತಿಗೆ ಅಧಿಕಾರಿಗಳು ಶುಕ್ರವಾರ ಸೂಚಿಸಿದ್ದಾರೆ.
ಕಳೆದ ತಿಂಗಳಿನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಬತ್ತ ಮಾರಾಟ ಮಾಡಲು ಮತ್ತು ಖರೀದಿಸಲು ತಮಿಳುನಾಡಿನಿಂದ ಇನ್ನೂರಕ್ಕೂ ಹೆಚ್ಚು ಲಾರಿಗಳು ನಿತ್ಯ ಆಗಮಿಸುತ್ತಿವೆ. ಲಾರಿಯೊಂದರಲ್ಲಿ ಕನಿಷ್ಠ ಮೂರು ಜನ ಇದ್ದು ಅವರಿಗೆ ಯಾವುದೇ ಆರೋಗ್ಯ ಪರೀಕ್ಷೆಗೊಳಪಡದಿರುವುದರಿಂದ ವೈರಸ್ ಹರಡುವ ಭೀತಿ ಇಲ್ಲಿನ ಮಾರುಕಟ್ಟೆಯಲ್ಲಿ ಉಂಟಾಗಿತ್ತು.
ಇದರ ನಡುವೆಯೂ ನಿತ್ಯ ವಿಶೇಷ ಎಪಿಎಂಸಿ ಆವರಣಕ್ಕೆ ಬೆಳಗಿನ ಜಾವ ನೂರಾರು ಲಾರಿಗಳು ರಾಜ್ಯ ಹೆದ್ದಾರಿ ಎರಡು ಬದಿಯಲ್ಲಿ ನಿಂತು ಬತ್ತ ಮಾರಾಟ ಮಾಡುತ್ತಿದ್ದವು. ಬತ್ತದ ತಳಿ ಗುಣಮಟ್ಟವನ್ನು ಸ್ಥಳೀಯ ದಲಾಲರು, ವರ್ತಕರು, ಪರೀಕ್ಷೆ ಮಾಡುವುದು, ವಹಿವಾಟು ನಡೆಸುವುದು ರಸ್ತೆಯ ಮೇಲೆಯೇ ಆಗಿದ್ದರಿಂದ ನೂರಾರು ಆಕ್ಷೇಪಗಳು, ಅತಂಕಗಳು ಎದುರಾಗಿದ್ದವು.
ಪರಿಸ್ಥಿತಿಯನ್ನು ಅವಲೋಕಿಸಿದ ಇಲ್ಲಿನ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ವಾಣಿಜ್ಯ ಪಟ್ಟಣಕ್ಕೆ ಶನಿವಾರದಿಂದ ಯಾವುದೇ ಲಾರಿಗಳು ಪ್ರವೇಶ ಮಾಡದೆ ಹೊರವಲಯದ ಸಿದ್ಧಲಿಂಗನಗರದಲ್ಲಿನ ಸಿಎಂಎನ್ ಕಾಲೇಜು ಮೈದಾನದಲ್ಲಿಯೇ ನಿಲ್ಲಿಸುವಂತಹ ವ್ಯವಸ್ಥೆ ಮಾಡಲು ಶುಕ್ರವಾರ ಸೂಚಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ರೌಂಡ್ಸ್ ಹಾಕುವ ವೇಳೆ ವಿಶೇಷ ಎಪಿಎಂಸಿ ಆವರಣ ಸೇರಿದಂತೆ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಒಂದುವರೆ ಕಿಮೀ ವರೆಗೂ ಬತ್ತ ತುಂಬಿದ ಲಾರಿಗಳು ನಿಂತಿದ್ದು, ಅವುಗಳಲ್ಲಿ ಬತ್ತ ಸ್ಯಾಂಪಲ್ ಪಡೆದು ವಹಿವಾಟು ನಡೆಸಲು ಬ್ರೋಕರ್‌ಗಳು, ದಲಾಲರು, ವರ್ತಕರು ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ವ್ಯಾಪಾರದಲ್ಲಿ ನಿರತರಾಗಿದ್ದರು. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ದಲಾಲಿ ವರ್ತಕರ ಸಂಘದ ಕೆಲವರೊಂದಿಗೆ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅವಶ್ಯಕತೆ ಇರುವುದರಿಂದ ತಾತ್ಕಾಲಿಕವಾಗಿ ಬತ್ತ ಹೊತ್ತು ತರುವ ಎಲ್ಲ ಲಾರಿಗಳನ್ನು ಹೊರವಲದಲ್ಲಿ ನಿಲ್ಲಿಸುವಂತೆ ಮತ್ತು ದಾಸ್ತಾನು ತುಂಬಿಕೊಳ್ಳಲು ಒಂದೊಂದೆ ಲಾರಿಗಳು ಮಾರುಕಟ್ಟೆಪ್ರವೇಶ ಮಾಡುವಂಥ ಅವಕಾಶ ಮಾಡಿಕೊಂಡು ಸಹಕರಿಸಲು ತೀರ್ಮಾನಿಸಲಾಗಿದೆ.
ಶನಿವಾರ ಬೆಳಗ್ಗೆಯಿಂದ ಬರುವ ಎಲ್ಲ ಲಾರಿಗಳನ್ನು ಟರ್ಮಿನಲ್‌ಗೆ ಕಳುಹಿಸಿ ವ್ಯಾಪಾರಕ್ಕೆ ಅಲ್ಲಿಗೆ ಹೋಗಲು ಮತ್ತು ಲಾರಿಯಲ್ಲಿ ಬಂದವರಿಗೆ ಅಲ್ಲಿಯೇ ಅಗತ್ಯ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.