ಶಿವಾನಂದ ಗೊಂಬ
ಹುಬ್ಬಳ್ಳಿ(ಏ.15): ಕುಡಿಬೇಕಂದ್ರ ನೀರಿಲ್ಲ, ಶೌಚಕ್ಕೆ ಹೋಗಬೇಕಂದ್ರ ಶೌಚಾಲಯ ಇಲ್ಲ, ಹೊಟ್ಟಿತುಂಬ ಉಣಬೇಕೆಂದ್ರ ಏನೂ ಸಿಗವಲ್ತು! ಕಳೆದ ತಿಂಗಳು ಬೇರೆ ಬೇರೆ ರಾಜ್ಯಗಳಿಂದ ಸರಕುಗಳನ್ನು ಹೇರಿಕೊಂಡು ಬಂದು ಅನ್‌ಲೋಡ್ ಮಾಡಿ ಇನ್ನೇನು ಊರಿಗೆ ಹೊರಡಬೇಕೆನ್ನುವಷ್ಟರಲ್ಲಿ ಘೋಷಣೆಯಾಗಿರುವ ಲಾಕ್‌ಡೌನ್‌ನಿಂದಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಲಾರಿ ಚಾಲಕರ ಮತ್ತು ಕ್ಲೀನರ್‌ಗಳ ವ್ಯಥೆಯಿದು.
ಲಾಕ್‌ಡೌನ್ ವೇಳೆ ರಾಜ್ಯದ ಲಾರಿ ಚಾಲಕರು ಹಾಗೋ ಹೀಗೋ ತಮ್ಮ ಊರು ಸೇರಿಕೊಂಡಿದ್ದಾರೆ. ಆದರೆ ತಮಿಳುನಾಡು, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳ ಚಾಲಕರು ಮಾತ್ರ ಅಂತಾರಾಜ್ಯ ಗಡಿಗಳು ಬಂದ್ ಆಗಿರುವುದರಿಂದ ಇಲ್ಲೇ ಬಾಕಿಯಾಗಿದ್ದಾರೆ. ಹೀಗಾಗಿ ಇಲ್ಲಿ ಇರಲೂ ಆಗದೆ ತಮ್ಮ ಊರಿಗೆ ಹೋಗಲೂ ಆಗದೆ ರಸ್ತೆ ಬದಿಗಳಲ್ಲಿ ದಿನದೂಡುತ್ತಿರುವ ಇವರ ಕಷ್ಟ ಯಾರಿಗೂ ಬೇಡ.
ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ
ಹುಬ್ಬಳ್ಳಿಯ ಗಬ್ಬೂರು ಕ್ರಾಸ್, ಅಂಚಟಗೇರಿ, ಸೇರಿ ಬೈಪಾಸ್ ಅಕ್ಕಪಕ್ಕಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಪಕ್ಕಗಳಲ್ಲಿ ಡಾಬಾ ಬಳಿ ಇರುವ ಖಾಲಿ ಜಾಗಗಳಲ್ಲಿ ಲಾರಿಗಳನ್ನು ನಿಲ್ಲಿಸಿಕೊಂಡು 30 ರಿಂದ 40 ಚಾಲಕರು, ಕ್ಲೀನರ್‌ಗಳು ಠಿಕಾಣಿ ಹೂಡಿದ್ದಾರೆ. ಲಾರಿ ಮಾಲೀಕರ ಸಂಘ ಊಟದ ವ್ಯವಸ್ಥೆ ಮಾಡಿದ್ದರೂ ಅದು ಸರಿಯಾಗಿ ಪೂರೈಕೆಯಾಗುತ್ತಿಲ್ಲವಂತೆ. ಹೀಗಾಗಿ ಚಾಲಕರು, ಕ್ಲೀನರ್‌ಗಳು ಲಾರಿಗಳಲ್ಲೇ ಅಡುಗೆ ಮಾಡಿಕೊಳ್ಳಬೇಕಾಗಿದೆ. ಇನ್ನು ಇವರು ತಂದಿಟ್ಟುಕೊಂಡಿರುವ ದಿನಸಿ ಖಾಲಿಯಾಗುತ್ತಿದ್ದು, ಸುತ್ತಮುತ್ತ ಎಲ್ಲೂ ಸಿಗುತ್ತಿಲ್ಲ. ಬೈಪಾಸ್ ಬಳಿ ಟ್ರಕ್ ಟರ್ಮಿನಲ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಶೌಚಾಲಯ ವ್ಯವಸ್ಥೆಯಾಗಲಿ ಇಲ್ಲ. ಹೀಗಾಗಿ ಬಯಲು ಬಹಿರ್ದೆಸೆ ಅನಿವಾರ್ಯವಾಗಿದ್ದು ಇನ್ಯಾವುದಾದರೂ ಕಾಯಿಲೆ ಅಂಟಿಕೊಂಡರೆ ಎಂಬ ಭಯ ಇವರನ್ನು ಕಾಡುತ್ತಿದೆ.
ನಾವು ಕೊಯಮತ್ತೂರಿನಿಂದ ಈರುಳ್ಳಿ ತೆಗೆದುಕೊಂಡು ಬಂದಿದ್ದೆವು. ಇಲ್ಲಿಗೆ ಬಂದು 10 ದಿನಗಳಿಗೂ ಹೆಚ್ಚು ಕಾಲವಾಗಿದೆ. ನಮ್ಮ ಅಡುಗೆ ನಾವೇ ಮಾಡಿಕೊಳ್ಳುತ್ತೇವೆ ಎಂದು ತಮಿಳುನಾಡು ಚಾಲಕ ಎಸ್. ಕಣ್ಣನ್ ಹೇಳಿದ್ದಾರೆ.