
ಕೆರೂರ(ಮಾ.18): ಟ್ರಕ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾನ್‌ಶಾಪ್ ಹಾಗೂ ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ, ವ್ಯಾಪಾರ ಮಾಡುತ್ತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೆರೂರಿನ ಹೆಸ್ಕಾಂ ಕಚೇರಿಯ ಕಾಂಪೌಂಡ್‌ಗೆ ಹೊಂದಿಕೊಂಡ ಹುಬ್ಬಳ್ಳಿ ಸೋಲಾಪೂರ ರಾಷ್ಟ್ರೀಯ ಹೆದ್ದಾರಿ-218ರ ಪಕ್ಕದಲ್ಲಿ ಮಂಗಳವಾರ ಸಂಭವಿಸಿದೆ.
ಮಂಗಳೂರಿನ ಇಬ್ಬರು ಸೇರಿ 180 ವಿದ್ಯಾರ್ಥಿಗಳು ಮಲೇಷ್ಯಾದಲ್ಲಿ ಬಾಕಿ
ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರಿನ ಲಕ್ಷ್ಮಣ ವಿಠ್ಠಲ ಹಾದಿಮನಿ(35), ಗದಗ ಜಿಲ್ಲೆಯ ನರಗುಂದದ ಪೂಜಾ ಅರ್ಜುನ ಹಳಪೇಟಿ (22), ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಮಹಾನಂದ ಈರಣ್ಣ ಕರಿ (16) ಸ್ಥಳದಲ್ಲೇ ಮತೃಪಟ್ಟವರು. ಅವರ ಜೊತೆಗಿದ್ದ ಗದಗ ಜಿಲ್ಲೆಯ ನರಗುಂದ ಮಂಜುಳಾ ಮುತ್ತಪ್ಪ ಜವಳಿ (18) ಹಾಗೂ ಕೆರೂರಿನ ಪ್ರಜ್ವಲ ಕೋಟಿ (12) ಹಾಗೂ ಚಾಲಕ ತೀವ್ರ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಏನಿದು ಘಟನೆ?:
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಟ್ರಕ್ (14ಚಕ್ರದ) ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆ ಪಕ್ಕದಲ್ಲೆ ವ್ಯಾಪಾರ ಮಾಡುತ್ತಿದ್ದವರ ಮೇಲೆ ಹಾಗೂ ಚಹೀ ಕುಡಿದು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಹರಿದಿದೆ. ಈ ವೇಳೆ ಈ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ವ್ಯಾಪಾರಕ್ಕೆಂದು ಬಂದಿದ್ದ ಹಾಗೂ ಕೆರೂರಿನ ಓರ್ವ ಬಾಲಕಗೂ ತೀವ್ರ ಗಾಯಗಳಾಗಿವೆ. ಡಿಕ್ಕಿ ಹೊಡೆತದಿಂದಾಗಿ ಟ್ರಕ್ ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾಪಾರಕ್ಕೆಂದು ಬಂದವರು:
ಮಂಗಳವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ರಭಸದಿಂದ ಬಂದ ಗಾಡಿಯು ಪಾನ್‌ಶಾಪ್ ಮುಂದೆ ಟೀ ಕುಡಿದು ನಿಂತಿದ್ದ ಕೆರೂರಿನ ಲಕ್ಷ್ಮಣ ವಿಠ್ಠಲ ಹಾದಿಮನಿ(35) ಹಾಗೂ ಹೊಟ್ಟೆ ತುಂಬಿಸಿಕೊಳ್ಳಲು ಟೇಬಲ್ ಕುರ್ಚಿ ಮಾರಾಟಕ್ಕೆಂದು ಗದಗ ಜಿಲ್ಲೆಯ ನರಗುಂದದಿಂದ ಬಂದಿದ್ದ ಪೂಜಾ ಅರ್ಜುನ ಹಳಪೇಟಿ (22) ಹಾಗೂ ಮಂಜುಳಾ ಮುತ್ತಪ್ಪ ಜವಳಿ (18) ಇಬ್ಬರಲ್ಲಿ ಪೂಜಾ ಕೂಡ ಅಸುನೀಗಿದ್ದಾಳೆ. ಇನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಹಾನಂದ ಈರಣ್ಣ ಕರಿ ಅವರು ಪ್ಯಾಂಟ್, ಶರ್ಟ್‌ಗಳಿಗೆ ಜಿಪ್ ಹಾಕಿ ಸಂಪಾದನೆ ಮಾಡಲು ಬಂದಿದ್ದ. ಆದರೆ, ವಿಧಿ ಮಾತ್ರ ಇವರಿಗೆ ದಾರುಣ ಸಾವು ತಂದು ಬಿಟ್ಟಿದೆ.
ರಜೆಗೆ ಬಂದಿದ್ದ:
ತೀವ್ರವಾಗಿ ಗಾಯಗೊಂಡು ಬಾಗಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಜ್ವಲ್ ಕೋಟಿ ರಜೆ ಇದ್ದ ಕಾರಣ ಗೋವಾದಿಂದ ಕೆರೂರಿನ ಮಾವನ ಮನೆಗೆ ಬಂದಿದ್ದ. ಡಿಕ್ಕಿ ಹೊಡೆದ ಪಾನ್‌ಶಾಪ್ ಮಾಲೀಕ ಕೆರೂರಿನ ಪಾಂಡು ತೆಗ್ಗಿ ಅವರದ್ದು. ಮಂಗಳವಾರ ಪ್ರಜ್ವಲ್ ಹಾಗೇ ಸುಮ್ಮನೆ ಮಾವನ ಅಂಗಡಿಗೆ ಬಂದಿದ್ದ. ಇದೇ ವೇಳೆ ಮಾವ ಪಾಂಡು ಸ್ಪಲ್ಪ ಕೆಲಸದ ನಿಮಿತ್ತ ಹೊರಗಡೆ ಹೋಗುವುದಾಗಿ ಪ್ರಜ್ವಲ್‌ನನ್ನು ಅಂಗಡಿಯಲ್ಲಿ ಕುಳ್ಳಿರಿಸಿ ಹೋಗಿದ್ದಾಗ, ಏಕಾಏಕಿ ಟ್ರಕ್ ಬಂದು ಪಾನ್‌ಶಾಪ್‌ಗೆ ಅಪ್ಪಳಿಸಿದೆ. ಈ ವೇಳೆ ಪ್ರಜ್ವಲ್ ತೀವ್ರವಾಗಿ ಗಾಯಗೊಂಡಿದ್ದಾನೆ.
ಸಂಬಂಧಿಕರ ಆಕ್ರಂದನ:
ಅಪಘಾತದ ಸುದ್ದಿ ತಿಳಿದ ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿತ್ತು. ಸುದ್ದಿ ತಿಳಿದ ಪಿಎಸ್‌ಐ ಸಂಜಯ ತಿಪರೆಡ್ಡಿ ಸಿಬ್ಬಂದಿ ಸಮೇತ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ರಮೇಶ ಹಾನಾಪೂರ ಡಿಎಸ್‌ಪಿ ನಂದರೆಡ್ಡಿ ಸ್ಥಳಕ್ಕೆ ಬೇಟಿ ನೀಡಿದ್ದು ತನಿಖೆ ಮುಂದುವರೆದಿದೆ.
ಯಾವ ವಸ್ತು ಮೇಲೆ ಎಷ್ಟೊತ್ತು ಜೀವಂತವಾಗಿರುತ್ತೆ ಕೊರೋನಾ ವೈರಸ್..?
ಬೃಹತ್ ಅಪಘಾತ ತಪ್ಪಿಸಿದ ಕೊರೋನಾ:
ಪ್ರತಿ ಮಂಗಳವಾರ ಇಲ್ಲಿ ನಡೆಯುತ್ತಿದ್ದ ಜಾನುವಾರು ಸಂತೆ ಜನಜಂಗುಳಿಯಿಂದ ತುಂಬಿರುತ್ತಿತ್ತು. ಕೊರೋನಾ ವೈರಸ್ ನಿಯಂತ್ರಿಸುವ ಸರ್ಕಾರದ ನಿರ್ಧಾರದಿಂದ ಸಂತೆ ನಿಷೇಧಿಸಿದ್ದರಿಂದ ಜನಜಂಗುಳಿ ಇರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಭಾರಿ ಪ್ರಮಾಣದಲ್ಲಿ ಸಂಭವಿಸಬಹುದಾದ ಅಪಘಾತವನ್ನು ಕೊರೋನಾ ತಪ್ಪಿಸಿತು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಈ ಕುರಿತು ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.