ಕಾವೇರಿ ನದಿಗೆ ವಿಷ ಪೂರಿತ ನೀರು ಸೇರಿದ್ದು ಭಾರೀ ಆತಂಕವನ್ನೇ ತಂದಿಟ್ಟಿದೆ.
ವರದಿ : ಬಿ.ಆರ್. ರಾಜೇಶ್
ಬೈಲುಕುಪ್ಪೆ (ಅ.14): ಅನಧಿಕೃತ ಹಸಿ ಶುಂಠಿ ಶುದ್ಧ ಘಟಕಗಳಿಂದ ವಿಷಪೂರಿತ ನೀರು ಕೆರೆಕಟ್ಟೆಕಾವೇರಿ ನದಿಗೆ ಸೇರುತ್ತಿದ್ದರೂ ಕೇಳುವವರೇ ಇಲ್ಲವಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಮಾಗಳಿ ಮತ್ತು ಚೌಡನಹಳ್ಳಿಗೆ ತೆರಳುವ ಮುಖ್ಯರಸ್ತೆ ಹಾಗೂ ಕೊಪ್ಪ ಬಳಿಯ ಟಿಬೆಟಿಯನ್ ಕ್ಯಾಂಪ್ ರಸ್ತೆಗೆ ಹೊಂದಿಕೊಂಡಂತೆ ಇರುವ ಅನಧಿಕೃತ ಹಸಿಶುಂಠಿ ಶುದ್ಧ ಮಾಡುವ ಘಟಕಗಳನ್ನು ಹಲವಾರು ಕಡೆ ತೆರೆಯಲಾಗಿದೆ.
ಈ ಶುದ್ಧ ಘಟಕಗಳು ಪುರಸಭೆ ಮತ್ತು ಗ್ರಾಪಂ ಕಾರ್ಯಾಲಯದಿಂದ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಹಾಗೂ ಪರಿಸರ ಇಲಾಖೆ, ಸೆಸ್ಕ್‌ನಿಂದ ಯಾವುದೇ ಅಧಿಕೃತವಾಗಿ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸಲಾಗುತ್ತಿದೆ.
ನದಿಯಲ್ಲಿ ತೇಲಿ ಬಂದ ಶವದ ಬಳಿ ಇತ್ತು 1.5 ಕೆಜಿ ಬಂಗಾರ !
ಅಲ್ಲದೇ, ಶುಂಠಿ ಬೆಳಗಾರರಿಗೆ ಶುಂಠಿಯನ್ನು ಶುದ್ಧಗೊಳಿಸಿ ಕೊಟ್ಟಿರುವ ಬಗ್ಗೆ ಯಾವುದೇ ನಿಗದಿತ ಶುಲ್ಕದ ಬಗ್ಗೆ ಪ್ರಕಟವಾಗಲಿ ಅಥವಾ ರಸೀದಿ ಆಗಲಿ ನೀಡದೆ ತಮ್ಮ ಇಚ್ಛೆ ಪ್ರಕಾರ ಹಣವನ್ನು ರೈತರಿಂದ ವಸೂಲಿ ಮಾಡುತ್ತಿದ್ದಾರೆ. ಬೋರ್ವೆಲ… ಮೂಲಕ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ, ಸೆಸ್ಕ್‌ನಿಂದ ಕಮರ್ಷಿಯಲ್ ಸೇರಿದ ಬಗ್ಗೆ ಅನುಮತಿ ಪಡೆಯದೇ ರೈತರ ಜಮೀನು ಎಂದು ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚನೆ ಮಾಡಲಾಗುತ್ತಿದೆ.
ರೈತರಿಂದ ಜಮೀನನ್ನು ಭೋಗ್ಯಕ್ಕೆ ಪಡೆದುಕೊಂಡು ಕೃಷಿ ಚಟುವಟಿಕೆಗೆ ಎಂಬ ನೆಪದಲ್ಲಿ ಯಾವುದೇ ನಿಯಮ ಪಾಲಿಸದೆ ಹಾಗೂ ಯಾವುದೇ ತೆರಿಗೆಯನ್ನು ಪಾವತಿಸದೆ ನಡೆಸುತ್ತಿರುವ ಈ ಘಟಕಗಳು ಬೋರ್‌ವೆಲ…ನಿಂದ ನೀರು ಬಳಸಿಕೊಂಡು ಕಲುಷಿತವಾದ ನೀರು ಮತ್ತು ಶುಂಠಿಯಿಂದ ಬಂದ ಕಸವನ್ನು ಕೆರೆ-ಕಟ್ಟೆಕಾವೇರಿ ನದಿಗೆ ಕಾಲುವೆಯ ಮೂಲಕ ಸೇರುವಂತೆ ಮಾಡಲಾಗುತ್ತಿದೆ. ಇದರಿಂದ ಜನರಿಗೆ ಚರ್ಮರೋಗ ಆವರಿಸುತ್ತಿದೆ ಹಾಗೂ ಜಾನುವಾರುಗಳಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮೀನುಗಳು ಸಹ ಮೃತಪಡುತ್ತಿರುವುದನ್ನು ಕಾಣಬಹುದು.
ಸಂಬಂಧಿಸಿದ ಪಿಡಿಒಗಳನ್ನು ಕೇಳಿದರೆ ಕೃಷಿ ಜಮೀನಿನಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿದ್ದೇವೆ ನಿಮಗೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂದು ಕೆಲವು ಸುಂಟಿ ಶುದ್ಧ ಘಟಕದ ಮಾಲೀಕರು ತಮ್ಮ ರಾಜಕೀಯ ಪ್ರಭಾವ ಬೀರಿದರೆ ಇನ್ನು ಕೆಲವರು ನಮ್ಮ ಪಂಚಾಯ್ತಿ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಸಂಬಂಧಿಸಿದ ಪುರಸಭೆ ಮುಖ್ಯ ಅಧಿಕಾರಿ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ವ್ಯವಹಾರ ನಡೆಸಲಾಗಿದ್ದು, ಇನ್ನೂ ಸಹ ಕ್ರಮ ಕೈಗೊಂಡಿಲ್ಲ. ಕೆರೆಕಟ್ಟೆಗಳು ಮಾತ್ರ ನಮ್ಮ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ. ಇನ್ನುಳಿದ ಕಾವೇರಿ ನದಿ ಮತ್ತು ಕಟ್ಟೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಹಂತದಲ್ಲಿ ಕ್ರಮಕೈಗೊಳ್ಳಲಾಗುವುದು.
- ರಾಮಕೃಷ್ಣೇಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ
ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಕಲುಷಿತ ವಾಗುತ್ತಿದೆ ಎಂದು ಪತ್ರ ವ್ಯವಹಾರ ಮಾಡಿದರೆ ವಿನಃ ಶುಂಠಿ ಶುದ್ಧ ಘಟಕಗಳ ಬಗ್ಗೆ ಏನನ್ನೂ ಹೇಳಿಲ್ಲ. ನಮ್ಮ ವ್ಯಾಪ್ತಿಗೆ ಬರುವ ಘಟಗಳ ಸ್ಥಳಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳುತ್ತೇವೆ.
- ಎ. ಚಂದ್ರಕುಮಾರ್, ಪುರಸಭೆ ಮುಖ್ಯಾಧಿಕಾರಿ