ಕೆಎಸ್‌ಆರ್‌ಟಿಸಿ ಸ್ಟ್ರೈಕ್‌: ಕೈ ಮುಗಿದು ಕೇಳಿಕೊಳ್ತೇನೆ, ಬನ್ನಿ ಕೂತು ಮಾತಾಡೋಣ,ಸವದಿ

By Kannadaprabha News  |  First Published Apr 9, 2021, 8:36 AM IST

ಯಾರದ್ದೋ ಮಾತು ಕೇಳಬೇಡಿ| ಇದು ನಮ್ಮ ಕುಟುಂಬದ ಸಮಸ್ಯೆ, ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ| | ಸಾರ್ವಜನಿಕರಿಗೆ ತೊಂದರೆ ಬೇಡ, ಕೆಲಸಕ್ಕೆ ಹಾಜರಾಗಿ| ನೌಕರರೇ ಬ್ಯಾಲೆಸ್ಸ್‌ ಶೀಟ್‌ ಮಾಡಲಿ, ಅದಕ್ಕೆ ನಾನೇ ಸಹಿಹಾಕುತ್ತೇನೆ: ಸಚಿವ ಸವದಿ| 


ಬೀದರ್‌(ಏ.09): ಕೈ ಮುಗಿದು ಕೇಳಿಕೊಳ್ಳುತ್ತೇನೆ. ಬನ್ನಿ ಕೆಲಸಕ್ಕೆ ಹಾಜರಾಗಿ, ಸಮಸ್ಯೆಗಳನ್ನು ಕೂತು ಬಗೆಹರಿಕೊಳ್ಳಿ. ಇದು ನಮ್ಮ ಕುಟುಂಬದ ಸಮಸ್ಯೆ, ಯಾರದ್ದೋ ಮಾತು ಕೇಳಿ ಪ್ರತಿಷ್ಠೆಯಾಗಿ ಮಾಡಿಕೊಳ್ಳಬೇಡಿ. ಬೇಕಾದರೆ ನೀವೇ ಬ್ಯಾಲೆಸ್ಸ್‌ ಶೀಟ್‌ ಸಿದ್ಧ ಮಾಡಿ. ಅದಕ್ಕೆ ನಾನೇ ಸಹಿಹಾಕುತ್ತೇನೆ!

ಸಾರಿಗೆ ನೌಕರರಿಗೆ ಹೀಗೆಂದು ಮನವಿ ಮಾಡಿದ್ದು ಉಪ ಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ. ಹುಮನಾಬಾದ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ಇಲಾಖೆಗೆ ಬರುವ ಆದಾಯದಲ್ಲಿ ಏನೇನು ಮಾಡುತ್ತೀರಿ? ಬ್ಯಾಲೆನ್ಸ್‌ಶೀಟ್‌ ನೀವೇ ಸಿದ್ಧ ಮಾಡಿಕೊಡಿ. ಅದಕ್ಕೆ ನಾನೇ ಸಹಿ ಮಾಡುತ್ತೇನೆ. ಈ ಲಕ್ಷ್ಮಣ ಸವದಿ ಶಾಶ್ವತ ಇಲ್ಲ, ನಾನು ಮಂತ್ರಿಯಾಗಿರಬಹುದು ಅಥವಾ ಆಗದಿರಲೂಬಹುದು. ಆದರೆ ನೀವು ಮಾತ್ರ ಶಾಶ್ವತ ಎಂದರು.

Latest Videos

undefined

ನಿಮ್ಮ ನಿಗಮವನ್ನು ನೀವೇ ಉಳಿಸಿಕೊಳ್ಳಿ, ಕೆಲಸಕ್ಕೆ ಹಾಜರಾಗಿ. ಒಂದೊಂದು ದಿನ ಆರೇಳು ಕೋಟಿ ರುಪಾಯಿ ಹಾನಿಯಾಗುತ್ತಿದೆ. ಈ ಹಾನಿಯ ಹೊರೆ ನಿಮ್ಮ ಮೇಲೆಯೇ ಬೀಳಲಿದೆ. ಸಾರಿಗೆ ಸಿಬ್ಬಂದಿಗೆ ಅತ್ಯಂತ ಪ್ರಾರ್ಥನೆಯಿಂದ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮಾಡಿದರು.

ನಿಮ್ಮ ಮಗನಾಗಿ ಕೋರುವೆ, ಕೆಲಸಕ್ಕೆ ಬನ್ನಿ: ಸವದಿ

ತರಬೇತಿಯಲ್ಲಿರುವವರೂ ಪ್ರತಿಭಟನೆಗೆ ಹೋಗಿದ್ದಾರೆ, ಅವರಿಗೆ ಪ್ರತಿಭಟನೆಗೆ ಅವಕಾಶವೇ ಇಲ್ಲ, ಆದರೂ ಹೋಗಿದ್ದಾರೆ. ಸಾರಿಗೆ ಇಲಾಖೆಯ ಸಮಸ್ಯೆಯನ್ನು ಅರ್ಥೈಸಿಕೊಳ್ಳಿ. ಇಲ್ಲವಾದಲ್ಲಿ ನಮಗೆ ಭಾರೀ ಆರ್ಥಿಕ ಸಮಸ್ಯೆಯಾದೀತು. ಈ ರೀತಿಯ ಮುಷ್ಕರದಿಂದ ನಮಗೆ ನಾವೇ ಪೆಟ್ಟು ಮಾಡಿಕೊಂಡಂತೆ ಎಂದು ಸವದಿ ಹೇಳಿದರು. ಜತೆಗೆ, ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ನನಗಿದೆ. ನೌಕರರು ಸಮಸ್ಯೆ ಅರ್ಥೈಸಿಕೊಳ್ಳುತ್ತಾರೆ, ಸಾರಿಗೆ ಸೇವೆಗಳು ಪುನರ್‌ ಆರಂಭವಾಗಲಿವೆ ಎಂದು ಸವದಿ ಭರವಸೆ ವ್ಯಕ್ತಪಡಿಸಿದರು.

ಎಚ್‌ಡಿಕೆ ಯಾಕೆ ಸಮಸ್ಯೆ ಬಗೆಹರಿಸಲಿಲ್ಲ: ಸಚಿವ

ಸಾರಿಗೆ ನೌಕರರ ಬೇಡಿಕೆ 10 ವರ್ಷದಿಂದ ಇದೆ. ನೀವು ಮುಖ್ಯಮಂತ್ರಿ ಆಗಿದ್ದಾಗ ಯಾಕೆ ಪರಿಹಾರ ಮಾಡಲಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಹುಮನಾಬಾದ್‌ನಲ್ಲಿ ಮಾತನಾಡಿ ರೈತರ ಸಾಲ ಮನ್ನಾ ಮಾಡುತ್ತೀರಿ, ಸಾರಿಗೆ ನೌಕರರಿಗೂ ವೇತನ ಹೆಚ್ಚಳ ಮಾಡಬೇಕಿತ್ತು. ಅಧಿಕಾರ ಇದ್ದಾಗ ಒಂದು, ಇಲ್ಲದಿದ್ದಾಗ ಮತ್ತೊಂದು ಹೇಳಿಕೆ ನೀಡೋದು ಸರಿಯಲ್ಲ ಎಂದರು. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕೂಡ ಸಾರಿಗೆ ನೌಕರರು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇಷ್ಟಾದರೂ ಕುಮಾರಸ್ವಾಮಿ ಯಾಕೆ ಹೀಗೆ ಎಂದು ಸವದಿ ಬೇಸರ ವ್ಯಕ್ತಪಡಿಸಿದರು.
 

click me!