ಸರಕು ಸಾಗಣೆ ಮಾಡುವ ಲಾರಿಗಳ ಸೇವೆ ಬಂದ್

By Kannadaprabha News  |  First Published Nov 5, 2020, 2:36 PM IST

ಸರಕುಗಳ ಸಾಗಣೆ ಮಾಡಲು ಅವಶ್ಯವಿರುವ ಲಾರಿಗಳ ಸೇವೆಯನ್ನು ಸ್ಥಗಿತ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. 


ದಾವಣಗೆರೆ (ನ.05):  ಲಾರಿ ಮಾಲೀಕರು, ಟ್ರಾನ್ಸಪೋರ್ಟ್‌ ಏಜೆಂಟರು ಕಳ್ಳರು ಎಂಬುದಾಗಿ ಆರೋಪಿಸಿರುವ ವರ್ತಕರ ಸಂಘದ ಕಾರ್ಯದರ್ಶಿ ತಮ್ಮ ಹೇಳಿಕೆ ಹಿಂಪಡೆಯ ಬೇಕು ಹಾಗೂ ಬಹಿರಂಗ ಕ್ಷಮೆ ಕೇಳುವವರೆಗೂ ಎಪಿಎಂಸಿಗೆ ಲಾರಿಗಳನ್ನು ಕಳಿಸುವುದಿಲ್ಲ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸಪೋರ್ಟ್‌ ಏಜೆಂಟರ ಸಂಘ ಈ ಮೂಲಕ ಎಚ್ಚರಿಸಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ, ಲಾರಿ ಬಾಡಿಗೆ ನಿಗದಿ ಮತ್ತು ಹಮಾಲಿ ಕೊಡುವ ವಿಚಾರಕ್ಕೆ ಏರ್ಪಟ್ಟಗೊಂದಲದ ಹಿನ್ನೆಲೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಲಾರಿ ಮಾಲೀಕರು, ಏಜೆಂಟರ ಹಾಗೂ ಎಪಿಎಂಸಿ ವರ್ತಕರ ಸಭೆಯಲ್ಲಿ ಆದ ಅಹಿತಕರ ಘಟನೆ ನಿಜಕ್ಕೂ ನಮಗೆಲ್ಲಾ ತೀವ್ರ ಬೇಸರ ಉಂಟು ಮಾಡಿದೆ ಎಂದರು.

Tap to resize

Latest Videos

ಹಿರಿಯ ವರ್ತಕರೂ ಆದ ವರ್ತಕರ ಸಂಘದ ಕಾರ್ಯದರ್ಶಿ ಜಾವೀದ್‌ ಸಭೆಯಲ್ಲಿ ಲಾರಿ ಮಾಲೀಕರು, ಟ್ರಾನ್ಸಪೋರ್ಟ್‌ ಏಜೆಂಟರನ್ನು ಕಳ್ಳರು ಎಂಬುದಾಗಿ ಜರೆದಿರುವುದು ಖಂಡನೀಯ. ನಾವು ನಮ್ಮ ಲಾರಿಗಳಲ್ಲಿ ಸರಕು ಸಾಗಿಸುವಾಗ 1 ಕೆಜಿ ತೂಕ ವ್ಯತ್ಯಾಸವಾದರೂ ವರ್ತಕರು ನಮಗೆ ನೀಡಬೇಕಾದ ಬಾಡಿಗೆ ಹಣದಲ್ಲಿ ಮುರಿದು ಕೊಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ನಾವು ಕಳ್ಳರಾಗಲು ಹೇಗೆ ಸಾಧ್ಯ ಜಾವೀದ್‌ ಸಾಹೇಬರೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಭೂ ಸಾರಿಗೆ ಹಾಗೂ ಹೆದ್ದಾರಿಗಳ ಮಂತ್ರಾಲಯದ ಜೊತೆಗೆ ಸಾರಿಗೆ ವಲಯದಲ್ಲಿ ತನ್ನದೇ ಆದ ಸೇವೆ ನೀಡುತ್ತಿರುವ, 1936ರಲ್ಲಿ ಸ್ಥಾಪನೆಯಾದ ಆಲ್‌ ಇಂಡಿಯಾ ಮೋಟಾರ್‌ ಟ್ರಾನ್ಸಪೋರ್ಟ್‌ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು, ದಾವಣಗೆರೆ ಜಿಲ್ಲಾ ಟ್ರಾನ್ಸಪೋರ್ಟ್‌ ಏಜೆಂಟರ ಸಂಘದ ಅಧ್ಯಕ್ಷರೂ ಆದ ತಮ್ಮ ಸಮ್ಮುಖದಲ್ಲಿ ಲಾರಿ ಮಾಲೀಕರು, ಟ್ರಾನ್ಸಪೋರ್ಟ್‌ ಏಜೆಂಟರನ್ನು ಕಳ್ಳರು ಎಂಬುದಾಗಿ ಹಿರಿಯ ವರ್ತಕ ಜಾವೀದ್‌ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ವಾಹನ ಸವಾರರೇ ಎಚ್ಚರ : ಟ್ರಾಫಿಕ್‌ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ .

ವರ್ತಕರ ಸಂಘದ ಕಾರ್ಯದರ್ಶಿ ಜಾವೀದ್‌ ತಕ್ಷಣವೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಅಲ್ಲದೇ, ಲಾರಿ ಮಾಲೀಕರು, ಟ್ರಾನ್ಸಪೋರ್ಟ್‌ ಏಜೆಂಟರಲ್ಲಿ ಕ್ಷಮೆಯಾಚಿಸುವವರೆಗೂ ಎಪಿಎಂಸಿಗೆ ಲೋಡಿಂಗ್‌ ಮತ್ತು ಅನ್‌ ಲೋಡಿಂಗ್‌ಗೆ ನಾವುಗಳು ಲಾರಿಗಳನ್ನು ಯಾವುದೇ ಕಾರಣಕ್ಕೂ ಕಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಲಾರಿ ಮಾಲೀಕರು ಮತ್ತು ಟ್ರಾನ್ಸಪೋರ್ಟ್‌ ಏಜೆಂಟರು ಸಹ ನಮ್ಮ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿ, ಸಂಘದ ಮುಂದಿನ ನಿರ್ಧಾರದವರೆಗೂ ಯಾವುದೇ ಕಾರಣಕ್ಕೂ ಲೋಡಿಂಗ್‌ ಮತ್ತು ಅನ್‌ ಲೋಡಿಂಗ್‌ಗೆ ಲಾರಿಗಳನ್ನು ಕಳಿಸುವುದಿಲ್ಲವೆಂದು ಸ್ಪಷ್ಟಪಡಿಸಿವೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಎಸ್‌.ಕೆ.ಮಲ್ಲಿಕಾರ್ಜುನ, ಮಹಾಂತೇಶ ಒಣರೊಟ್ಟಿ, ಸೋಗಿ ಮುರುಗೇಶ, ಜೆಟಿಎಸ್‌ ಜಿ.ನೇತಾಜಿ ರಾವ್‌, ಎಂ.ದಾದಾಪೀರ್‌, ಭೀಮಣ್ಣ, ಶಿವಕುಮಾರ ಬೆಳ್ಳೂಡಿ ಇತರರು ಇದ್ದರು.

click me!