ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರು ಬಲಿ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!

Published : Jan 07, 2026, 06:15 PM IST
Belagavi boiler blast

ಸಾರಾಂಶ

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಭೀಕರ ದುರಂತ ಸಂಭವಿಸಿದೆ. ರಿಪೇರಿ ಕಾರ್ಯದ ವೇಳೆ ನಡೆದ ಈ ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಸಮೀಪದಲ್ಲಿರುವ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಕಾರ್ಖಾನೆಯ ಬಾಯ್ಲರ್‌ನಲ್ಲಿ ಆಕಸ್ಮಿಕವಾಗಿ ಸ್ಪೋಟಗೊಂಡು ಮೂರು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಬಾಯ್ಲರ್ ರಿಪೇರಿ ವೇಳೆ ಸ್ಪೋಟ

ಕಾರ್ಖಾನೆಯ ನಂಬರ್–1 ಕಂಪಾರ್ಟಮೆಂಟ್‌ನಲ್ಲಿರುವ ಬಾಯ್ಲರ್‌ನ ವಾಲ್ ರಿಪೇರಿ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ. ರಿಪೇರಿ ವೇಳೆ ಏಕಾಏಕಿ ಬಾಯ್ಲರ್‌ನಲ್ಲಿ ಭಾರೀ ಸ್ಪೋಟ ಉಂಟಾಗಿ, ಅದರೊಳಗೆ ಇದ್ದ ಬಿಸಿ ಮಳ್ಳಿ (ಹಾಟ್ ಸ್ಲರಿ/ಮಟ್ಟೆ) ಕಾರ್ಮಿಕರ ಮೈ ಮೇಲೆ ಎರಚಿಕೊಂಡಿದೆ. ಪರಿಣಾಮವಾಗಿ ಸ್ಥಳದಲ್ಲೇ ಹಲವರು ತೀವ್ರವಾಗಿ ಸುಟ್ಟು ಗಾಯದಿಂದ ನರಳಾಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ರವಾನೆ

ಸ್ಪೋಟದ ಬಳಿಕ ಗಾಯಗೊಂಡ ಕಾರ್ಮಿಕರನ್ನು ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ತಕ್ಷಣವೇ ಬೆಳಗಾವಿಯ ಕೆಎಲ್ಇ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ಮೂವರು ಕಾರ್ಮಿಕರ ಸಾವು ದೃಢ ಪಟ್ಟಿದೆ. ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕರಾದ ಅಕ್ಷಯ ತೋಪಡೆ, ದೀಪಕ್ ಮನ್ನೊಳಿ ಮತ್ತು ಸುದರ್ಶನ ಬನೋಶಿ ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಉಳಿದ ಐದು ಮಂದಿ ಕಾರ್ಮಿಕರಿಗೆ ಕೆಎಲ್ಇ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ದುರಂತದಲ್ಲಿ ಗಾಯಗೊಂಡ ಕಾರ್ಮಿಕರ ವಿವರ

  • ಮಂಜುನಾಥ ತೇರದಾಳ
  • ರಾಘವೇಂದ್ರ ಗಿರಿಯಾಳ
  • ಗುರು ತಮ್ಮನ್ನವರ
  • ಭರತ ಸಾರವಾಡಿ
  • ಮಂಜುನಾಥ ಕಾಜಗಾರ

ಪೊಲೀಸ್ ಅಧಿಕಾರಿಗಳ ಸ್ಥಳ ಪರಿಶೀಲನೆ

ಘಟನೆಯ ಮಾಹಿತಿ ಪಡೆದ ತಕ್ಷಣವೇ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದರು. ನಂತರ ಅವರು ದುರಂತ ನಡೆದ ಸ್ಥಳಕ್ಕೂ ಭೇಟಿ ನೀಡಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.

ತನಿಖೆ ಆರಂಭ

ಈ ದುರಂತವು ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಯ್ಲರ್ ಸ್ಪೋಟಕ್ಕೆ ನಿಖರ ಕಾರಣ, ನಿರ್ಲಕ್ಷ್ಯ ಅಥವಾ ಸುರಕ್ಷತಾ ಲೋಪಗಳಿರುವ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಕಾರ್ಖಾನೆಯ ಸುರಕ್ಷತಾ ಕ್ರಮಗಳು ಹಾಗೂ ತಾಂತ್ರಿಕ ನಿರ್ವಹಣೆ ಕುರಿತಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ  ಸಾಧ್ಯತೆ

ಗಾಯಗೊಂಡ ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿದೆ. ಈ ದುರಂತವು ಇಡೀ ಪ್ರದೇಶದಲ್ಲಿ ತೀವ್ರ ಶೋಕ ಮತ್ತು ಆತಂಕವನ್ನುಂಟುಮಾಡಿದೆ.

PREV
Read more Articles on
click me!

Recommended Stories

ಮಗಳಿಗೆ ನೇಣು ಹಾಕಿ ಬಳಿಕ ತಾಯಿ ಸಾಯಲು ಯತ್ನ; ಅನೈತಿಕ ಸಂಬಂಧದ ಅನುಮಾನ ತಂದ ದುರಂತ!
ಚಿಕ್ಕೋಡಿ: ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ