ಬೆಂಗಳೂರಿನಲ್ಲಿ ಮಧ್ಯರಾತ್ರಿಯೂ ಸವಾರರಿಗೆ ಟ್ರಾಫಿಕ್‌ ಸಿಗ್ನಲ್‌ ಕಿರಿಕಿರಿ!

By Govindaraj SFirst Published Jul 26, 2022, 4:44 AM IST
Highlights

ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ಕೆಲ ದಿನಗಳಿಂದ ತಡರಾತ್ರಿ ವೇಳೆ ರಸ್ತೆಗಳು ಖಾಲಿ ಇದ್ದರೂ ಟ್ರಾಫಿಕ್‌ ಸಿಗ್ನಲ್‌ಗಳು ಮಾತ್ರ ಬಹಳ ಶಿಸ್ತಿನಿಂದ ಕೆಲಸ ಮಾಡುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಬೆಂಗಳೂರು (ಜು.26): ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ಕೆಲ ದಿನಗಳಿಂದ ತಡರಾತ್ರಿ ವೇಳೆ ರಸ್ತೆಗಳು ಖಾಲಿ ಇದ್ದರೂ ಟ್ರಾಫಿಕ್‌ ಸಿಗ್ನಲ್‌ಗಳು ಮಾತ್ರ ಬಹಳ ಶಿಸ್ತಿನಿಂದ ಕೆಲಸ ಮಾಡುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. 

ಈ ಮೊದಲು ಸಾಮಾನ್ಯವಾಗಿ ರಾತ್ರಿ 11ರ ಬಳಿಕ ಪ್ರಮುಖ ಜಂಕ್ಷನ್‌ಗಳಲ್ಲಿನ ಸಿಗ್ನಲ್‌ಗಳು ಬಿಟ್ಟರೆ ಇತರೆ ಬಹುತೇಕ ಕಡೆಗಳಲ್ಲಿ ಬಂದ್‌ ಆಗಿರುತ್ತಿದ್ದವು. ಆದರೆ, ಕೆಲದಿನಗಳಿಂದ ಏಕಾಏಕಿ ಎಲ್ಲ ಸಿಗ್ನಲ್‌ಗಳು ಹನ್ನೊಂದು ಗಂಟೆ ಬಳಿಕವೂ ಸತತವಾಗಿ ಕೆಲಸ ಮಾಡುತ್ತಿವೆ. ವಾಹನ ಸಂಚಾರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಟ್ರಾಫಿಕ್‌ ಸಿಗ್ನಲ್‌ ಕೆಲಸ ಮಾಡುವುದು ಸಾಮಾನ್ಯ. ಆದರೆ, ತಡರಾತ್ರಿ ಇಡೀ ರಸ್ತೆ ಖಾಲಿ ಇದ್ದರೂ ಟ್ರಾಫಿಕ್‌ ಸಿಗ್ನಲ್‌ಗಳು ಕೆಲಸ ಮಾಡುತ್ತಿರುವುದರಿಂದ ವಾಹನ ಸವಾರರಲ್ಲಿ ಗೊಂದಲ ಉಂಟಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ಬೆಳಗ್ಗೆಯಿಂದ ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆವರೆಗೆ ವಾಹನ ಸಂಚಾರ ದಟ್ಟಣೆ ಇರುತ್ತದೆ. ಈ ಅವಧಿಯಲ್ಲಿ ವಾಹನ ಸಂಚಾರ ನಿರ್ವಹಣೆಗೆ ಟ್ರಾಫಿಕ್‌ ಸಿಗ್ನಲ್‌ ಆನ್‌ ಮಾಡುವುದರಲ್ಲಿ ಅರ್ಥವಿದೆ. ಆದರೆ, ನಗರದ ಬಹುತೇಕ ಕಡೆ ಮಧ್ಯರಾತ್ರಿ ಹನ್ನೆರಡು, ಒಂದು ಗಂಟೆಯಾದರೂ ಟ್ರಾಫಿಕ್‌ ಸಿಗ್ನಲ್‌ಗಳು ಆನ್‌ ಆಗಿರುತ್ತವೆ. ಮಳೆ, ಚಳಿ, ಕತ್ತಲು ಲೆಕ್ಕಿಸದೇ ವಾಹನ ಸವಾರರು ಮಧ್ಯರಾತ್ರಿ ನಡುರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಸಿಗ್ನಲ್‌ ಮುಗಿದ ಬಳಿಕ ಮುಂದೆ ಹೋಗುವ ಪರಿಸ್ಥಿತಿಯಿದೆ. ಸಿಗ್ನಲ್‌ ಜಂಪ್‌ ಮಾಡಿ ಹೋದರೂ ಕಷ್ಟ, ಅಲ್ಲೇ ನಿಂತರೂ ಕಷ್ಟಎಂಬಂತಾಗಿದೆ ಎಂದು ವಾಹನ ಸವಾರರು ಅಲವತ್ತುಕೊಳ್ಳುತ್ತಿದ್ದಾರೆ.

ಬೆಂಗಳೂರು: ಡಾಂಬರ್ ಕೆಲಸದ ವೇಳೆ ಟಿಪ್ಪರ್ ಲಾರಿಗೆ ಆಕಸ್ಮಿಕ ಬೆಂಕಿ

ಅಪಘಾತ ಭಯ!: ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಸಂಚಾರ ಪೊಲೀಸರು ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡದ ನೋಟಿಸ್‌ ಮನೆಗೆ ಕಳುಹಿಸುತ್ತಾರೆ. ಮಧ್ಯರಾತ್ರಿ ರಸ್ತೆಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಆನ್‌ ಆಗುವುದರಿಂದ ವಾಹನ ಸವಾರರು ಸಂಚಾರ ಪೊಲೀಸರ ದಂಡಕ್ಕೆ ಹೆದರಿ ಸಿಗ್ನಲ್‌ ಮುಗಿಯುವವರೆಗೂ ನಿಂತು ಬಳಿಕ ಮುಂದೆ ಹೋಗುವಂತಾಗಿದೆ.

ಇನ್ನು ತಡರಾತ್ರಿ ಸಿಗ್ನಲ್‌ಗಳಲ್ಲಿ ಎಲ್ಲ ವಾಹನ ಸವಾರರೂ ನಿಲ್ಲುವುದಿಲ್ಲ. ಸಂಚಾರಿ ಪೊಲೀಸರು ಇಲ್ಲ ಎಂಬ ಕಾರಣಕ್ಕಾಗಿ ಕೆಲವರು ಕೆಂಪು ಲೈಟ್‌ ಇದ್ದರೂ ಲೆಕ್ಕಿಸದೆ ಮುನ್ನುಗ್ಗುತ್ತಾರೆ. ಅತ್ತ ಕಡೆಯಿಂದ ಹಸಿರು ಲೈಟ್‌ ಇರುವುದರಿಂದ ವಾಹನಗಳು ಬರುತ್ತಿವೆ ಎಂಬುದನ್ನೂ ಗಮನಿಸುವುದಿಲ್ಲ. ಜತೆಗೆ ಸಂಚಾರಿ ನಿಯಮಗಳನ್ನು ಪಾಲಿಸೋಣ ಎಂದು ನಿಂತುಕೊಂಡರೆ ಹಿಂದಿನ ವಾಹನ ಸವಾರರು ನಿಯಮ ಮುರಿದು ಮುಂದೆ ನಡೆಯಿರಿ ಎಂಬಂತೆ ಹಾರ್ನ್‌ ಹಾಕುತ್ತಾರೆ.

ಮಳೆಯಲ್ಲಿಯೂ ಸಿಗ್ನಲ್‌ ಕಿರಿಕಿರಿ: ರಾತ್ರಿ 11 ಗಂಟೆ ಬಳಿಕ ಟ್ರಾಫಿಕ್‌ ಸಿಗ್ನಲ್‌ಗಳು ಆನ್‌ ಆಗುವುದರಿಂದ ಮಳೆಗಾಲದಲ್ಲಿ ವಾಹನ ಸವಾರರು ಬಹಳ ತೊಂದರೆ ಅನುಭವಿಸುವಂತಾಗಿದೆ. ಏಕೆಂದರೆ, ಟ್ರಾಫಿಕ್‌ ಸಿಗ್ನಲ್‌ ಹಾಕಿದಾಗ ವಾಹನ ಸವಾರರು ಸುರಿಯುವ ಮಳೆಯಲ್ಲೇ ವಾಹನ ನಿಲ್ಲಿಸಿಕೊಂಡು ರಸ್ತೆಯಲ್ಲಿ ನಿಲ್ಲಬೇಕು. ಭಾರೀ ಮಳೆ ಸಂದರ್ಭದಲ್ಲಿ ರಸ್ತೆಗಳ ಮೇಲೆಯೇ ಮಳೆ ನೀರು ಹರಿಯುವುದರಿಂದ ವಾಹನ ಸವಾರರು ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿಕೊಂಡು ನಿಲ್ಲುವುದು ಕಷ್ಟವಾಗಿದೆ.

ಮಧ್ಯರಾತ್ರಿಯೂ ಸಿಗ್ನಲ್‌ ಜಂಪ್‌ಗೆ ಪೊಲೀಸರ ದಂಡ: ಮಾಗಡಿ ರಸ್ತೆ ಸೇರಿದಂತೆ ಕೆಲ ರಸ್ತೆಗಳಲ್ಲಿ ಪೊಲೀಸರು ಮಧ್ಯರಾತ್ರಿ ವಾಹನಗಳ ತಪಾಸಣೆ ಮಾಡುತ್ತಾರೆ. ಈ ವೇಳೆ ಟ್ರಾಫಿಕ್‌ ಸಿಗ್ನಲ್‌ ಆನ್‌ ಆಗಿರುತ್ತವೆ. ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರ ಇಲ್ಲವೆಂದು ವಾಹನ ಸವಾರರು ಸಿಗ್ನಲ್‌ ದಾಟಿಕೊಂಡು ಮುಂದೆ ಹೋದರೆ, ಕೂಡಲೇ ಸಮೀಪದಲ್ಲೇ ನಿಂತಿರುವ ಪೊಲೀಸರು ಸವಾರರನ್ನು ಹಿಡಿದು ಟ್ರಾಫಿಕ್‌ ಸಿಗ್ನಲ್‌ ಉಲ್ಲಂಘನೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನಲ್ಲಿ ನಿತ್ಯ ಸರಾಸರಿ 70 ಜನರಿಗೆ ಬೀದಿ ನಾಯಿ ಕಡಿತ!

ಸ್ವಯಂ ಚಾಲಿತ ಸಿಗ್ನಲ್‌ ಅಳವಡಿಸುವುದು ಸೂಕ್ತ: ಟ್ರಾಫಿಕ್‌ ಸಿಗ್ನಲ್‌ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಸ್ವಯಂ ಚಾಲಿತ ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಪರಿಹಾರವಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಆಧರಿಸಿ ಸ್ವಯಂ ಪ್ರೇರಿತವಾಗಿ ಸಿಗ್ನಲ್‌ ಆನ್‌ ಆಗುವುದು ಅಥವಾ ಆಫ್‌ ಆಗುವ ತಂತ್ರಜ್ಞಾನ ಅಳವಡಿಸಬೇಕು. ಅಂತೆಯೆ ಮಧ್ಯರಾತ್ರಿಯೂ ವಾಹನ ಸಂಚಾರ ದಟ್ಟಣೆಯಿರುವ ಜಂಕ್ಷನ್‌, ಟ್ರಾಫಿಕ್‌ ಸಿಗ್ನಲ್‌ ಹೊರತುಪಡಿಸಿ, ಉಳಿದ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ರಾತ್ರಿ 11ಕ್ಕೆ ಟ್ರಾಫಿಕ್‌ ಸಿಗ್ನಲ್‌ ಆಫ್‌ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

click me!