ಹಿಂದು ಯುವತಿ ಸಾಕಿ, ಹಿಂದೂ ಪದ್ಧತಿಯಂತೆ ಮದ್ವೆ ಮಾಡಿಸಿದ ಮುಸ್ಲಿಂ ವ್ಯಕ್ತಿ..!

By Kannadaprabha NewsFirst Published Jul 31, 2021, 8:22 AM IST
Highlights

*  ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ನಡೆದ ಮದುವೆ
* ಸೌಹಾರ್ದತೆಗೆ ಸಾಕ್ಷಿಯಾದ ಮಹಿಬೂಬ ಮಸಳಿ
*  ಸಂಪ್ರದಾಯಬದ್ಧವಾಗಿ ವಿವಾಹ ಮಾಡಿಕೊಟ್ಟ ಮುಸ್ಲಿಂ ಮುಖಂಡ
 

ಮಡಿವಾಳ ಎಸ್‌ ಇಂಡಿ 

ಆಲಮೇಲ(ಜು.31): ಮುಸ್ಲಿಂ ಮುಖಂಡನೊಬ್ಬ ಅನಾಥ ಹಿಂದು ಯುವತಿಯನ್ನು ಕಳೆದ 10 ವರ್ಷಗಳಿಂದ ಸಾಕಿ, ನಂತರ ಅದೇ ಧರ್ಮದ ಯುವಕನೊಂದಿಗೆ ಹಿಂದು ಸಂಪ್ರದಾಯದಂತೆ ತನ್ನ ಮನೆ ಮುಂದೆಯೇ ಮದುವೆ ಮಾಡಿಸಿದ್ದಾನೆ. ಇಂತಹ ಸೌಹಾರ್ದಯುತ ಘಟನೆ ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಶುಕ್ರವಾರ ನಡೆದಿದೆ.

"

ಆಲಮೇಲ ಪಟ್ಟಣದಲ್ಲಿರುವ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಅವರು ಅದೇ ಓಣಿಯಲ್ಲಿರುವ ಪೂಜಾ ಶೇಖರ ವಡಿಗೇರಿ ಎಂಬ ಯುವತಿಯನ್ನು ಸುಮಾರು 10 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ಮಗಳಂತೆ ಸಾಕಿ, ಸಲಹುತ್ತಾ ಬಂದಿದ್ದಾರೆ. ಅಲ್ಲದೇ ಆ ಯುವತಿಗೆ ಅದೇ ಧರ್ಮದ ವರವನ್ನು ಹುಡುಕಿದ್ದಲ್ಲದೆ, ಹಿಂದೂ ಸಂಪ್ರದಾಯದಂತೆ ಜು.30 ರಂದು ಸ್ವತಃ ತಮ್ಮ ಮನೆ ಮುಂದೆಯೇ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಪ್ರದಾಯಬದ್ಧವಾಗಿ ವಿವಾಹ ಮಾಡಿಕೊಟ್ಟಿದ್ದಾರೆ.

ಅನಾಥಳಾಗಿದ್ದ ಪೂಜಾ:

ವಧು ಪೂಜಾ ವಡಿಗೇರಿ ತಂದೆ, ತಾಯಿಯನ್ನು ಕಳೆದುಕೊಂಡಿದ್ದಳು. ಹೀಗಾಗಿ ಪೂಜಾ ತನ್ನ ಅಜ್ಜಿಯೊಂದಿಗೆ ಆಲಮೇಲ ಪಟ್ಟಣದಲ್ಲಿಯೇ ವಾಸವಿದ್ದಳು. ಆದರೆ, ದುರಾದೃಷ್ಟವೆಂಬಂತೆ ಅಜ್ಜಿಯೂ ಇಹಲೋಕ ತ್ಯಜಿಸಿದ್ದಾಳೆ. ಸಂಬಂಧಿಕರು ಇಲ್ಲದೇ ಅನಾಥಳಾಗಿದ್ದಳು. ಇದನ್ನು ಗಮನಿಸಿದ ಮಹಿಬೂಬ ಮಸಳಿ ಅವರು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ. ನಂತರ ಸುಮಾರು 10 ವರ್ಷಗಳಿಂದ ಪೂಜಾಳನ್ನು ಸಾಕಿದ್ದಾರೆ. ನಂತರ ವಯಸ್ಸಿಗೆ ಬಂದಿದ್ದರಿಂದ ಅವಳಿಗೆ ಅದೇ ಜಾತಿಯ ಬಸವನಬಾಗೇವಾಡಿ ತಾಲೂಕಿನ ಸಾರವಾಡ ಗ್ರಾಮದ ಶಂಕರ ಶರಣಪ್ಪ ಕಂದರವಾಲೆ ಎಂಬ ವರನೊಂದಿಗೆ ವಿವಾಹ ಮಾಡಿಕೊಡಬೇಕು ಎಂದು ನಿಶ್ಚಯಿಸಿ, ಜು.30ರಂದು ತಮ್ಮ ಸ್ವಂತ ಮನೆಯ ಮುಂದೆಯೇ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಟ್ಟಿದ್ದಾರೆ.

ವರ್ಕ್ ಫ್ರಂ ಮದ್ವೆ ಮಂಟಪ..! ವಧುವಿಗೆ ಭಾರೀ ನಗು, ವಿಡಿಯೋ ವೈರಲ್

ಜಾತ್ರೆ, ಗಣೇಶ ವಿಸರ್ಜನೆ ವೇಳೆ ಮಸಳಿ ಮುಂದು:

ಪಟ್ಟಣದ ಮುಸ್ಲಿಂ ಮುಖಂಡರಾದ ಮಹಿಬೂಬ ಮಸಳಿ ಅವರು ಹಿಂದೂ ದೇವಾಲಯಗಳ ಜಾತ್ರೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ಅಲ್ಲದೇ ಗಣೇಶ ವಿಸರ್ಜನೆಯ ವೇಳೆ ಮಹಾಮಂಡಳಿ ಅಧ್ಯಕ್ಷರಾಗಿ ಸದಾ ಅವಿರೊಧ ಆಯ್ಕೆಯಾಗುತ್ತಾರೆ. ಎಲ್ಲಾ ಜಾತ್ರೆಗಳಲ್ಲಿ ಅನ್ನ ದಾಸೋಹ ಮಾಡುವುದು ಇವರ ಸಂಪ್ರದಾಯವಾಗಿದೆ. ಸದಾ ಹಿಂದೂ ಜನಾಂಗದ ಜೊತೆಗೆ ಮತ್ತು ಮುಸ್ಲಿಂ ಜನಾಂಗದ ಜೊತೆಗೆ ಸೌಹಾರ್ದತೆಯಿಂದ ಇರುವ ಇವರ ನಡೆ ಈ ಮದುವೆ ಮೂಲಕ ಮತಷ್ಟು ಇಷ್ಟವಾಗುವಂತೆ ಮಾಡಿದೆ. ಜತೆಗೆ ಎಲ್ಲರಿಗೂ ಮಾದರಿ ನಡೆಯಾಗಿದೆ.

ನನಗೆ ಸುಮಾರು ಹತ್ತು ವರ್ಷಗಳಿಂದ ತಮ್ಮ ಮನೆಯಲ್ಲಿ ತಮ್ಮ ಮಗಳ ಹಾಗೆ ಸಾಕಿ ನನಗೆ ಮದುವೆ ಮಾಡಿ ಕೊಡುತ್ತಿರುವ ಇವರು ನನ್ನ ಪಾಲಿಗೆ ದೇವರಿದ್ದ ಹಾಗೆ. ಹಿಂದೂ ಸಂಪ್ರದಾಯದಂತೆ ನನಗೆ ಎಲ್ಲಾ ನೀಡಿದ್ದಾರೆ. ಇವರನ್ನು ನೋಡಿದರೆ ಜಾತಿ ಬರಿ ನೆಪ ಮಾತ್ರ ಎಂದು ಮದುವೆಯಾದ ಹಿಂದು ಯುವತಿ ಪೂಜಾ ವಡಿಗೇರಿ ತಿಳಿಸಿದ್ದಾರೆ. 

ನನಗೆ ಯಾವುದೇ ಜಾತಿ, ಧರ್ಮ ಮುಖ್ಯ ಅಲ್ಲ. ಇರುವ ಜೀವನದ ಅವಧಿಯಲ್ಲಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ನನಗೆ ಆ ಮಗು ನೋಡಿ ಸಾಕಬೇಕು. ಅವಳ ಜೀವನಕ್ಕೆ ಒಂದು ದಾರಿ ಮಾಡಬೇಕು ಎನಿಸಿತು. ನನ್ನ ಮಗಳ ಜೊತೆಗೆ ಅವಳು ಒಬ್ಬಳು. ನನಗೆ ಮಗಳು ಎಂದು ಎಲ್ಲ ರೀತಿಯಲ್ಲಿ ಸಹಾಯ ಮಾಡಿದ್ದೇನೆ ಎಂದು ಆಲಮೇಲ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಹೇಳಿದ್ದಾರೆ.  
 

click me!