ಯಾದಗಿರಿ: ಹತ್ತಿ ಖರೀದಿಸಿ ರೈತರಿಗೆ 20 ಲಕ್ಷ ವಂಚಿಸಿ ಪರಾರಿ..!

By Kannadaprabha News  |  First Published Oct 8, 2023, 11:00 PM IST

ಯಾದಗಿರಿಯ ರಾಮಸಮುದ್ರದಲ್ಲಿ 10ಕ್ಕೂ ಅಧಿಕ ರೈತರಿಂದ ಸುಮಾರು 207 ಕ್ವಿಂಟಲ್‌ ಹತ್ತಿ ಖರೀದಿ ಮಾಡಿದ್ದ ವಿಶ್ವರಾಧ್ಯ ಟ್ರೇಡರ್ಸ್‌। ನಷ್ಟ ಭರಿಸುವಂತೆ ರೈತ ಸಂಘ ಜಿಲ್ಲಾಡಳಿತಕ್ಕೆ ಮನವಿ


ಯಾದಗಿರಿ(ಅ.08):  ಸುಮಾರು ಹತ್ತಕ್ಕೂ ಹೆಚ್ಚು ರೈತರಿಂದ 20 ಲಕ್ಷ ರು. ಮೌಲ್ಯದ 207 ಕ್ವಿಂಟಲ್ ಹತ್ತಿ ಖರೀದಿಸಿದ ಟ್ರೇಡಿಂಗ್ ಕಂಪನಿಯೊಂದು ರೈತರಿಗೆ ಹಣ ನೀಡದೆ ಪಂಗನಾಮ ಹಾಕಿದ ಬಗ್ಗೆ ಆರೋಪಿಸಿ, ಜಿಲ್ಲಾಡಳಿತ ಮೂಲಕ ನ್ಯಾಯಕ್ಕಾಗಿ ರೈತರು ಆಗ್ರಹಿಸಿದ ಘಟನೆ ನಡೆದಿದೆ.

ತಾಲೂಕಿನ ರಾಮಸಮುದ್ರ ಗ್ರಾಮದ ವಿಶ್ವರಾಧ್ಯ ಟ್ರೇಡರ್ಸ್‌ನವರು ರೈತರಿಂದ ಹತ್ತಿ ಖರೀದಿ ಮಾಡಿ, ಸುಮಾರು 20 ಲಕ್ಷಕ್ಕಿಂತ ಹೆಚ್ಚು ಹಣ ವಂಚಿಸಿ ಪರಾರಿಯಾಗಿದ್ದು, ಇವರ ವಿರುದ್ಧ ಕ್ರಮ ಜರುಗಿಸಿ ರೈತರಿಗೆ ಆಗಿರುವ ನಷ್ಟ ಭರಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದೆ.

Tap to resize

Latest Videos

undefined

ಯಾದಗಿರಿ: ಪ್ರಚೋದನಕಾರಿ ಭಾಷಣ, ಆಂದೋಲಾ ಶ್ರೀ ವಿರುದ್ಧ ಪ್ರಕರಣ ದಾಖಲು

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ, ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಮದ್ದರಕಿ, ರೈತರಿಗೆ ಹಣ ನೀಡದೆ ತಲೆಮರಿಸಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿ ಪತ್ತೆ ಹಚ್ಚಬೇಕು. ಕಳೆದ ಒಂದು ವರ್ಷದಿಂದ ಕಷ್ಟಪಟ್ಟು ಬೆಳೆದ ಹತ್ತಿ ಬೆಳೆಯ ಫಸಲನ್ನು ಮಾರಾಟ ಮಾಡಿದರೆ ಖರೀದಿ ಮಾಡಿದ ವ್ಯಕ್ತಿ ಕೂಡ ರೈತರಿಗೆ ಈ ರೀತಿ ಮೋಸ ಮಾಡಿರುವುದರಿಂದ ರೈತರು ಎರಡು ರೀತಿಯಿಂದ ಕಷ್ಟ ನಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸದರಿ ವಂಚಕ ವ್ಯಾಪಾರಿಯ ವಿರುದ್ಧ ಕಾನೂನು ಕ್ರಮ ಕೈಕೊಂಡು ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ವಿಶ್ವರಾಧ್ಯ ಟ್ರೇಡರ್ಸ್‌ ರಾಮಸಮುದ್ರ ಗ್ರಾಮದಲ್ಲಿ (ಪೆಟ್ರೋಲ್ ಪಂಪ ಹತ್ತಿರ) ಕನಿಷ್ಠ 3 ವರ್ಷಗಳಿಂದ ರೈತರಿಂದ ಹತ್ತಿ ಖರೀದಿ ಮಾಡುತ್ತಿದ್ದರು. ಇದು ಗೊತ್ತಿದ್ದ ರೈತರು ಪ್ರಥಮ ವರ್ಷ 2022ರಲ್ಲಿ ಸುಭಾಷ್ ಎನ್ನುವವರ ಹತ್ತಿರ 80 ಕ್ವಿಂಟಲ್ ಹತ್ತಿ ಖರೀದಿ ಮಾಡಿ ಯಾವುದೇ ಬಾಕಿ ಇಲ್ಲದೆ ಎಲ್ಲ ಹಣ ಕೊಟ್ಟಿರುತ್ತಾರೆ. ಇದನ್ನೆ ನಂಬಿದ ರೈತರು ಈಗ ಮೋಸ ಹೋಗಿದ್ದಾರೆ ಎಂದರು.

ಯಾದಗಿರಿ: ಶ್ರೀಗಂಧ ಕಳುವು ಮರೆಮಾಚಲು ಹೊಸ ಮರ ಕಡಿದು ತಂದಿಟ್ಟ ಖದೀಮರು..!

ಪ್ರಸ್ತುತ ವರ್ಷ ಒಟ್ಟು 10ಕ್ಕೂ ಹೆಚ್ಚು ಜನ ತಲಾ 25 ರಿಂದ 30 ಕ್ವಿಂಟಲ್ ಹತ್ತಿ ಬೆಳೆಯನ್ನು ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ಆದರೆ ಆತ ಹಣ ಕೊಡದೆ ನಾಪತ್ತೆಯಾಗಿದ್ದಾನೆ ಎಂದು ಅವರು ದೂರಿದರು. ಸಂತ್ರಸ್ತ ರೈತರ ಪೈಕಿ, ಸುಭಾಷ್, ತಿಪ್ಪಣ್ಣ, ಸೋಲಪ್ಪ, ದೊಡ್ಡಪ್ಪ, ಸಿದ್ಧಲಿಂಗಪ್ಪ, ಬಾಲಸಾಬ್‌ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರಿಂದ ಒಟ್ಟು 207.60 ಕ್ವಿಂಟಲ್ ಹತ್ತಿ ಖರೀದಿ ಮಾಡಿ, ತಿಂಗಳಲ್ಲಿ ಹಣ ಕೊಡುತ್ತೇನೆಂದು ಹೇಳಿ ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಳೆದೊಂದು ವಾರದಿಂದ ಫೋನ್‌ ಮಾಡಿದರೆ (ಮೊ: 9901982227) ಸ್ವಿಚ್ ಆಫ್ ಬರುತ್ತಿವೆ. ಇದರಿಂದ ಅನುಮಾನಗೊಂಡ ರೈತರು ಯಾದಗಿರಿಯಲ್ಲಿರುವ ಆತನ ಕುಟುಂಬಸ್ಥರ ಭೇಟಿ ಮಾಡಿ ವಿಚಾರಿಸಿದಾಗ ಅವರು ನಮಗೆ ಗೊತ್ತಿಲ್ಲ, ಮನೆಗೂ ಬಂದಿಲ್ಲ ಎಂದು ಹೇಳಿದ್ದಾರೆ.

ರೈತರಿಗೆ ನಂಬಿಸಿ ಮೋಸ, ವಂಚನೆ ಮಾಡಿದಂತೆ ಈ ಮಾರುತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರೈತ ಸೇನೆಯ ಜಿಲ್ಲಾ ಅಧ್ಯಕ್ಷ ಮಹಾವೀರ ಲಿಂಗೇರಿ, ಉಪಾಧ್ಯಕ್ಷ ನಿಂಗಪ್ಪ ಹೊನಿಗೇರಿ, ಗುರಮಠಕಲ್ ಅಧ್ಯಕ್ಷ ರವಿ ರಾಠೋಡ, ಯಾದಗಿರಿ ಹೋಬಳಿ ಅಧ್ಯಕ್ಷ ಸಾಬಣ್ಣ ಸಿಂಗಾಣಿ, ಯಾದಗಿರಿ ನಗರ ಘಟಕ ಅಧ್ಯಕ್ಷ ಶ್ರೀನಿವಾಸ ಚಾಮನಳ್ಳಿ ಇನ್ನಿತರರು ಇದ್ದರು.

click me!