* ಇದೇ ಶನಿವಾರ, ಭಾನುವಾರದಿಂದಲೇ ಕರ್ಫ್ಯೂ ಧಿಕ್ಕರಿಸೋದಾಗಿ ಘೋಷಣೆ
* ಲಾಕ್‌ಡೌನ್‌ನಿಂದಾಗಿ ಕಳೆದೆರಡು ವರ್ಷದಿಂದ ವ್ಯಾಪಾರವಿಲ್ಲ, ಸಂಕಷ್ಟದಲ್ಲಿದ್ದೇವೆ
* ಗಡಿ ಜಿಲ್ಲೆ ಎಂದು ವಾರಾಂತ್ಯದ ಕರ್ಫ್ಯೂ, ನಮಗಷ್ಟೇ ಯಾಕೆ, ಎಲ್ಲರಿಗೂ ಯಾಕಿಲ್ಲ?
ಕಲಬುರಗಿ(ಆ.27): ಜಿಲ್ಲಾಡಳಿತ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂ ಆದೇಶಕ್ಕೆ ಇಲ್ಲಿನ ವರ್ತಕ ಸಮೂಹ ಅಸಹಕಾರ ತೋರಲು ಮುಂದಾಗಿದೆ.
ಮಹಾರಾಷ್ಟ್ರ ಗಡಿಗಂಟಿಕೊಂಡಿರುವ ಜಿಲ್ಲೆ ಎಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂ ನಿಯಮವನ್ನು ತಾವ್ಯಾರೂ ಈ ವಾರದಿಂದ ಅನುಸರಿಸೋದಿಲ್ಲವೆಂದು ಘೋಷಿಸಿರುವ ಇಲ್ಲಿನ ವರ್ತಕರು, ಹೋಟೆಲ್, ಬೇಕರಿ ಉದ್ಯಮಿಗಳು, ವಸತಿ ಗೃಹಗಳ ಮಾಲೀಕರು ಇಂತಹ ಅರ್ಥವಿಲ್ಲದ ಆದೇಶಗಳಿಗೆ ತಾವು ಸಹಕಾರ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
2020ರಿಂದ ಕೋವಿಡ್ ಸೋಂಕಿನ ಸಮಸ್ಯೆ ಆರಂಭದಿಂದಲೂ ಇಂದಿನವರೆಗೂ ಸಾಕಷ್ಟು ತೊಂದರೆಗಳಲ್ಲಿ ಮುಳುಗಿದ್ದೇವೆ. ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟು ಎಲ್ಲವೂ ಸ್ಥಗಿತಗೊಂಡಿದೆ. ಹೀಗಿರುವಾಗ ಮತ್ತೆ ವೀಕೆಂಡ್ ಕರ್ಫ್ಯೂ ಎಂದು ಬಂದರೆ ಏನ್ ಮಾಡೋದು, ರಾಜಕೀಯ ಸಮಾರಂಭಗಳು, ಮದುವೆ, ಮುಂಜಿಗೆ ಯಾವುದೇ ನಿಯಮಗಳಿಲ್ಲ, ವರ್ತಕರಿಗೆ ಮಾತ್ರ ನಿಯಮಗಳನ್ನು ಅನ್ವಯಿಸೋದು ಅದೆಷ್ಟುಸರಿ? ಇಂತಹ ಸಂಗತಿಗಳನ್ನೆಲ್ಲ ಚರ್ಚಿಸಿಯೇ ತಾವೀಗ ಸರಕಾರ, ಜಿಲ್ಲಾಡಳಿತದ ಜೊತೆಗೆ ಅಸಹಕಾರಕ್ಕೆ ಮುಂದಾಗಿದ್ದೇವೆ ಎಂದು ಎಚ್ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನ್ಕರ್, ಕಾರ್ಯದರ್ಶಿ ಶರಣು ಪಪ್ಪಾ ಹೇಳಿದ್ದಾರೆ.
ಮಹಾರಾಷ್ಟ್ರಕ್ಕೆ ಹೊಂದಿರುವ ಜಿಲ್ಲೆಯ ಗಡಿಗಳನ್ನು ಸರಿಯಾಗಿ ಮುಚ್ಚಿಲ್ಲ, ರಾಜಕೀಯ ಸೇರಿದಂತೆ ಯಾವುದೇ ಸಭೆ- ಸಮಾರಂಭಗಳಿಗೆ ಮೂಗುದಾರ ಹಾಕಿಲ್ಲ, ಕೇವಲ ವರ್ತಕರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಸೂಪರ್ ಮಾರ್ಕೆಟ್‌ನಲ್ಲಿ ಇದರಿಂದ ತುಂಬಾ ತೊಂದರೆ ಉಂಟಾಗುತ್ತಿದೆ. ವೀಕಂಡ್‌ನಲ್ಲಿಯೇ ವ್ಯಾಪಾರ ಆಗೋದು. ಇದು ಗೊತ್ತಿದ್ದರೂ ನಮ್ಮನ್ನೇ ಗುರಿ ಮಾಡುತ್ತಿರೋದು ಯಾಕೆಂದು ಅವರು ಪ್ರಶ್ನಿಸಿದರು.
ಕಲಬುರಗಿಯಲ್ಲಿ ಸಂವಾದ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿವರಿಸಿದ ಅಶ್ವತ್ಥ ನಾರಾಯಣ
ಕಳೆದ 1 ತಿಂಗಳಿಂದ ಕಲಬುರಗಿಯಲ್ಲಿ ಕೊರೋನಾ ಸೋಂಕು ಆ ಪರಿಯಲ್ಲಿಲ್ಲ. ಗಡಿ ಜಿಲ್ಲೆಯಾಗಿದೆ ಎಂದು ಇಂತಹ ನಿಯಮ ಜಾರಿಗೆ ತಂದಿದ್ದಾರೆ. ಅವು ವರ್ತಕರಿಗೇ ಜಾರಿಗೆ ತರದೆ ಎಲ್ಲರಿಗೂ ತರಲಿ, ವಾರದ ದಿನಗಳಲ್ಲೇ ಇಂತಹ ಕಟ್ಟುನಿಟ್ಟು ಜಾರಿಗೆ ತರಲಿ, ಅದಕ್ಕೆ ನಾವೂ ಸಹಕರಿಸುತ್ತೇವೆ. ಅದೆಲ್ಲ ಬಿಟ್ಟು ತಮಗೆ ರಜೆ ಇದ್ದಾಗ ನಿಯಗಳನ್ನು ತರೋದು ಸರಿಯಲ್ಲ ಎಂದು ಶರಣು ಪಪ್ಪಾ, ಪ್ರಶಾಂತ ಮಾನ್ಕರ್ ತಿಳಿಸಿದ್ದಾರೆ.
ಬಟ್ಟೆ ವರ್ತಕರ ಸಂಘದ ಆನಂದ ದಂಡೋತಿ, ವೈನ್ ಮೆರ್ಚೆಂಟ್ ಸಂಘದವರು, ಜ್ಯೂವೆಲ್ಲರಿ ಸಂಘದ ಮೈಲಾಪೂರ ಮಾತನಾಡುತ್ತ ಲಾಕ್‌ಡೌನ್‌ನಿಂದಲೇ ಪೆಟ್ಟು ಬಿದ್ದಿದೆ. ಈಗ ವೀಕೆಂಡ ಕರ್ಫ್ಯೂ ಎಂದು ಹೊರಟಿದ್ದಾರೆ. ಇದೆಲ್ಲವೂ ನಮಗೆ ತುಂಬಾ ತೊಂದರೆ ನೀಡುತ್ತಿವೆ. ವ್ಯಾಪಾರ ನಡೆಸೋದೇ ಕಷ್ಟಕರವಾಗಿದೆ ಎಂದರು. ರೇಷ್ಮೆ ಬಟ್ಟೆಗಳು ಖರೀದಿದಾರರು ಇಲ್ಲದೆ ಹಾಳಾಗುತ್ತಿವೆ. ಲಕ್ಷಾಂತರ ವಹಿವಾಟು ಹಾಳಾಗಿದೆ. ಇದು ಮುಂದುವರಿದರೆ ನಾವು ಎಲ್ಲ ಬಿಟ್ಟು ಹೋಗೋ ಸ್ಥಿತಿ ಬರುತ್ತದೆ ಎಂದು ಆತಂಕ ಹೊರಹಾಕಿದರು.
ಹೋಟೆಲ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ನರಸಿಂಹ್ ಮೆಂಡನ್ ಮಾನಾಡುತ್ತ ಲಾಕ್‌ಡೌನ್‌ನಿಂದಾಗಿ ಹೋಟೆಲ್‌ಗಳೇ ಬಂದ್ ಆಗಿವೆ. ಅಳಿದುಳಿದ ಹೋಟೆಲ್‌ಗಳು ಈಗ ಬಾಗಿಲು ತೆರೆದು ಗ್ರಾಹಕರ ದಾರಿ ಕಾಯುತ್ತಿವೆ. ಈ ಹಂತದಲ್ಲೇ ಮತ್ತೆ ವಾರಾಂತ್ಯದ ಲಾಕ್‌ಡೌನ್‌ನಿಂದಾಗಿ ತತ್ತರಿಸಿವೆ. ಉಪವಾಸ ವನವಾಸ ಬಿದ್ದು ಉದ್ಯಮ ನಡೆಸೋ ಗತಿ ಬಂದಿದೆ. ಹೀಗಾದರೆ ನಾವೆಲ್ಲಿ ಹೋಗಬೇಕು? ವಾರಾಂತ್ಯದ ಕರ್ಫ್ಯೂ ನಿಯಮ ರದ್ದು ಮಾಡಿ, ಇಲ್ಲದೆ ಹೋದಲ್ಲಿ ನಾವ್ಯಾರು ಇಂತಹ ಅವೈಜ್ಞಾನಿಕ ನಿಯಮಕ್ಕೆ ಸಹಕರಿಸೋದಿಲ್ಲ ಎಂದರು.
ಪ್ಯಾಂಡಮಿಕ್ ಕಾನೂನು ಅಡಿ 374 ಕೇಸ್!
ಈಗಾಗಲೇ ಹೈ- ಕ ವಾಣಿಜ್ಯೋದ್ಯಮ ಸಂಸ್ಥೆಯ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯವರಿಗೆ ಮಾತನಾಡಿದ್ದೇವೆ. ಜಿಲ್ಲಾಡಳಿತಕ್ಕೂ ಸಮಸ್ಯೆ ಹೇಳಿದ್ದೇವೆ. ಪೊಲೀಸ್ ಅಧಿಕಾರಿಗಳೂ ತಿಳಿಸಿದ್ದೇವೆ. ಶಾಸಕರು, ಸಂಸದರಿಗೂ ಗಮನಕ್ಕೆ ತಂದಿದ್ದೇವೆ. ಆದಾಗ್ಯೂ ನಮ್ಮ ಸಂಕಷ್ಟಕ್ಕೆ ಸ್ಪಂದನೆ ದೊರಕುತ್ತಿಲ್ಲ ಎಂದು ಗೋಳಾಡಿದ ವರ್ತಕರು ಅನಿವಾರ್ಯವಾಗಿ ಅಸಹಕಾರ ಚಳವಳಿಗೆ ಮುಂದಾಗಿದ್ದಾಗಿ ಹೇಳಿದರು.
ರಾಜ್ಯದಲ್ಲೇ ಎಲ್ಲಿಯೂ ಹಾಕದಷ್ಟು ಪ್ಯಾಂಡೆಮಿಕ್ ಆಕ್ಟ್ ಕೇಸ್‌ಗಳನ್ನು ಕಲಬುರಗಿಯಲ್ಲಿ ಪೊಲೀಸರು ವರ್ತಕರ ಮೇಲೆ ಹಾಕಿದ್ದಾರೆ. 374 ಕೇಸ್ ಮಾಡಿದ್ದಾರೆ. ಈಗ ಎಲ್ಲರಿಗೂ ನೋಟೀಸ್ ನೀಡಿದ್ದಾರೆ. ಈ ಕಾಯಿದೆಯಡಿಯಲ್ಲಿ 50 ಸಾ. ರು ನಿಂದ 2 ಲಕ್ಷ ರು. ವರೆಗೆ ದಂಡವಿದೆ. 3 ತಿಂಗಳಿಂದ 3 ವರ್ಷದ ವರೆಗೂ ಜೈಲು ಶಿಕ್ಷೆ ಅವಕಾಶವಿದೆ. ವರ್ತಕರು ಇದರಿಂದಲೂ ಕಂಗಾಲಾಗಿದ್ದಾರೆ. ಮೊದಲೇ ವ್ಯಾಪಾರವಿಲ್ಲ, ಈಗ ಕೇಸ್, ದಂಡ ಎಂದು ಕ್ರಮಕ್ಕೆ ಮುಂದಾಗಿದ್ದಾರೆ. ನಾವು ಜೈಲು ಸೇರೋದೇ ಗತಿಯಾಗಿದೆ ಎಂದು ಶರಣು ಪಪ್ಪಾ , ಪ್ರಶಾಂತ ಮಾನ್ಕರ್ ವರ್ತಕರ ಗೋಳನ್ನು ವಿವರಿಸಿದರು.
ಇದೇ ಶುಕ್ರವಾರ ರಾತ್ರಿಯಿಂದ ಶುರುವಾಗುವ ವೀಕೆಂಟ್ ಕರ್ಫ್ಯೂ ನಿಯಮ ನಾವ್ಯಾರು ಪಾಲಿಸೋದಿಲ್ಲ. ಅಂಗಡಿ, ಮುಂಗಟ್ಟು ಸೂಪರ್ ಮಾರ್ಕೆಟ್ ಸೇರಿದಂತೆ ನಗರಾದ್ಯಂತ ತೆರೆದೇ ಇಡುತ್ತೇವೆ. ಈ ವಿಚಾರವಾಗಿ ಜಿಲ್ಲಾಡಳಿತ, ಪೊಲೀಸರು ಅದೇನು ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ ಎಂದು ಎಚ್ಕೆಸಿಸಿಐ ಹಾಗೂ ವರ್ತಕರು ಹೇಳಿದ್ದಾರೆ.