ಹೊಸಪೇಟೆ: ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ..!

By Kannadaprabha News  |  First Published Aug 27, 2021, 1:18 PM IST

*  8,272 ಹೆಕ್ಟೇರ್‌ ಪ್ರದೇಶದಲ್ಲಿರುವ ಧಾಮ
* 28 ಕಿಮೀ ಸಫಾರಿಯೊಂದಿಗೆ ಪರಿಸರ ಪರಿಚಯ
* 1994ರಲ್ಲಿ ಆರಂಭಗೊಂಡ ದರೋಜಿ ಕರಡಿಧಾಮ


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಆ.27): ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿರುವ ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ ಆರಂಭಗೊಂಡಿದೆ. ಈ ಮೂಲಕ ಸಮೀಪದಿಂದಲೇ ಕರಡಿ ನೋಡುವ ಭಾಗ್ಯ ಪ್ರವಾಸಿಗರಿಗೆ ದೊರೆಯಲಿದೆ.

Tap to resize

Latest Videos

undefined

1994ರಲ್ಲೇ ದರೋಜಿ ಕರಡಿಧಾಮ ಆರಂಭಗೊಂಡಿದ್ದು ಒಟ್ಟು 8,272 ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಅಂದಾಜು 95ರಿಂದ 105 ಕರಡಿಗಳು ಧಾಮದಲ್ಲಿವೆ. ಆಗಿನ ಸಚಿವ ಎಂ.ವೈ. ಘೋರ್ಪಡೆ ಅವರು ದರೋಜಿ ಕರಡಿಧಾಮವನ್ನು ಆರಂಭಿಸುವ ಮೂಲಕ ವನ್ಯಜೀವಿ ಪ್ರೇಮ ಮೆರೆದಿದ್ದರು. ಹೀಗಾಗಿ ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳನ್ನು ಬೆಸೆಯುವ ಈ ಧಾಮ ಈ ಭಾಗದ ಜನರ ಪ್ರೀತಿಗೂ ಪಾತ್ರವಾಗಿದೆ.

ಅರಣ್ಯ ಇಲಾಖೆಯೇ ಸಫಾರಿ ವಾಹನಗಳ ವ್ಯವಸ್ಥೆ ಮಾಡಿದ್ದು, ತಲಾ ಒಬ್ಬರಿಗೆ 400 ಹಾಗೂ ಮಕ್ಕಳಿಗೆ ತಲಾ 200 ದರ ನಿಗದಿಪಡಿಸಲಾಗಿದೆ. ಒಟ್ಟು 28 ಕಿಮೀ ಸಫಾರಿಯಲ್ಲಿ ಧಾಮದಲ್ಲಿನ ಪರಿಸರವನ್ನೂ ಪರಿಚಯಿಸಲಾಗುತ್ತದೆ. ಬರೋಬ್ಬರಿ ಎರಡು ತಾಸಿನ ಸಫಾರಿ ಇದಾಗಿದೆ ಎಂಬುದು ಧಾಮದ ಅಧಿಕಾರಿಗಳ ವಿವರಣೆಯಾಗಿದೆ.

ನೈಸರ್ಗಿಕ ಪರಿಸರವನ್ನು ಉಳಿಸುವ ಹಾಗೂ ಬೆಳೆಸುವ ಮಹತ್ವ, ನೈಸರ್ಗಿಕವಾಗಿ ದೊರೆಯುವ ಹಣ್ಣು ಹಂಪಲುಗಳಿಂದ ಆಹಾರ ಪೂರೈಕೆ ಸೇರಿದಂತೆ ಜೀವವೈವಿಧ್ಯತೆಯನ್ನು ಪರಿಚಯಿಸುವ ಕಾರ್ಯ ಈ ಕರಡಿಧಾಮದ ಸಫಾರಿಯಲ್ಲಿ ಅಡಗಿದೆ.

ತಣ್ಣನೆ ಗಾಳಿ, ಜಿಟಿಜಿಟಿ ಮಳೆ: ಮೈಮರೆಸುವಂತಿದೆ ಹಂಪಿ ಸೌಂದರ್ಯ

ಇತರೆ ಪ್ರಾಣಿಗಳು:

ದರೋಜಿ ಕರಡಿಧಾಮ ಕಲ್ಲು-ಬಂಡೆಗಳಿಂದ ಆವೃತ್ತವಾದ ಬೆಟ್ಟ-ಗುಡ್ಡಗಳ ಮಧ್ಯ ಗುಹೆಗಳಿದ್ದು ಕರಡಿ, ಚಿರತೆ, ಕತ್ತೆ ಕಿರುಬ, ಕಾಡು ಹಂದಿ, ಮುಳ್ಳಹಂದಿ, ನರಿ, ಗುಳ್ಳೆನರಿ, ತೊಳ, ಚುಕ್ಕೆ ಪುನಗು, ಮುಂಗುಸಿ, ಮೊಲ ಸೇರಿದಂತೆ ನಾನಾ ಪ್ರಭೇದದ ಬಾವಲಿಗಳು, ನವಿಲು, ಕಲ್ಲುಕೋಳಿ, ಬುರ್ಲ, ಹದ್ದು, ಪಾರಿವಾಳ, ಗಿಳಿ, ಬೆಳ್ಳಕ್ಕಿ, ಗೂಬೆ, ಉಡಾ, ಆಮೆ, ಚಿಟ್ಟೆಗಳು 150ಕ್ಕೂ ಹೆಚ್ಚು ವಿವಿಧ ಪ್ರಕಾರದ ಹಕ್ಕಿಗಳು ಧಾಮದಲ್ಲಿ ನೆಲೆಸಿವೆ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಕರಡಿಧಾಮಕ್ಕೆ ಸೆಳೆಯುವ ಯೋಜನೆಯನ್ನೂ ಧಾಮದ ಅಧಿಕಾರಿಗಳು ಹಾಕಿಕೊಂಡಿದ್ದಾರೆ. ಪರಿಸರ ಪ್ರವಾಸೋದ್ಯಮ ಬೆಳೆಸುವ ಇರಾದೆ ಹೊಂದಿದ್ದು, ಇದಕ್ಕಾಗಿ ಈಗಾಗಲೇ ತಯಾರಿಯೂ ನಡೆದಿದೆ.

ಹಂಪಿ ದ ಜತೆ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕರಡಿ ಸಫಾರಿ ಆರಂಭಿಸಲಾಗಿದೆ ಎಂದು ದರೋಜಿ ಕರಡಿಧಾಮದ ವಲಯ ಅರಣ್ಯಾಧಿಕಾರಿ ಉಷಾ ತಿಳಿಸಿದ್ದಾರೆ.

ಹಂಪಿ ಪ್ರವಾಸಿಗರು ದರೋಜಿ ಕರಡಿಧಾಮಕ್ಕೆ ಭೇಟಿ ನೀಡಬೇಕು. ಕರಡಿಗಳ ವೀಕ್ಷಣೆಗೆ ಸಫಾರಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪರಿಸರ ಪ್ರವಾಸೋದ್ಯಮ ಕೂಡ ವೃದ್ಧಿಯಾಗಲಿದೆ ಎಂದು ವನ್ಯಜೀವಿ ಸಂಶೋಧಕ ಸಮದ್‌ ಕೊಟ್ಟೂರು ಹೇಳಿದ್ದಾರೆ. 
 

click me!