
ನಾಗಮಂಗಲ (ಆ.27): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ದ ಮತದಾರರಿಗೆ ಮುಂದಿನ ಚುನಾವಣೆಗಳಲ್ಲಿ ಯಾವ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂಬ ಅರಿವಾಗುತ್ತಿದೆ ಎಂದು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ದೇವಲಾಪುರ ಹೋಬಳಿ ಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಚೆಲುವರಾಯಸ್ವಾಮಿ, ಮತದಾರರ ಆಶೀರ್ವಾದದಿಂದ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಜೆಡಿಎಸ್ ನಾಯಕರಿಂದ ಜಿಲ್ಲೆಗೆ ಸಿಕ್ಕಿರುವ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಜಿಟಿಡಿಗೆ ಕಾಂಗ್ರೆಸ್ ರತ್ನಗಂಬಳಿ : ಸೀಕ್ರೇಟ್ ಒಂದನ್ನು ಹೇಳಿ ಜೆಡಿಎಸ್ ತೊರೆಯುತ್ತಿರುವ ಗೌಡರು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೋ ಕಾರಣಕ್ಕೆ ನಾವು ಅಧಿಕ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರೂ ನಂತರ ಕೇವಲ ಐದಾರು ತಿಂಗಳಲ್ಲೆ ನಡೆದ ನಾಗಮಂಗಲ ಪುರಸಭೆ ಹಾಗು ಬೆಳ್ಳೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ತಾಲೂಕಿನ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ ಎಂದರು.
ಸಹಕಾರ ಸಂಘಗಳು ಸೇರಿದಂತೆ ಗ್ರಾಪಂ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಏನೆಂಬುದನ್ನು ವಿರೋಧಿಗಳಿಗೆ ತೋರಿಸಿದ್ದಾರೆ ಎಂದರು.