ಬಿಡದಿಯ ಟೊಯೋಟಾ ಮೋಟಾರ್ಸ್‌ ಲಾಕೌಟ್‌: ಕಾರ್ಮಿಕರ ದಿಢೀರ್‌ ಪ್ರತಿಭಟನೆ

By Kannadaprabha News  |  First Published Nov 11, 2020, 7:38 AM IST

ಕಾರ್ಮಿಕ ಸಂಘದ ಪದಾಧಿಕಾರಿಯ ಅಮಾನತು ಖಂಡಿಸಿ ಹೋರಾಟ| ಕೋವಿಡ್‌ ನಿಯಮ ಉಲ್ಲಂಘನೆ ಹಿನ್ನೆಲೆ ಕಂಪನಿ ಲಾಕೌಟ್‌| ನಮ್ಮ ನೌಕರರು ಸೇರಿದಂತೆ ಎಲ್ಲ ಪಾಲುದಾರರ ಯೋಗಕ್ಷೇಮ ಕಾಯಲು ಬದ್ಧ: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌| 


ರಾಮನಗರ(ನ.11):  ಇಲ್ಲಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪನಿ(ಟಿಕೆಎಂ) ಯನ್ನು ಅನಿರ್ದಿಷ್ಟ ಅವಧಿ ತನಕ ಲಾಕೌಟ್‌ ಮಾಡಲಾಗಿದೆ. ಕಾರ್ಮಿಕ ಸಂಘದ ಪದಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿದ್ದನ್ನು ಖಂಡಿಸಿ ಮಂಗಳವಾರ 3500ಕ್ಕೂ ಅಧಿಕ ಕಾರ್ಮಿಕರು ದಿಢೀರ್‌ ಪ್ರತಿಭಟನೆ ಆರಂಭಿಸಿದ್ದರು.

ಕಾರ್ಮಿಕರು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಏಕಾಏಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಅನಿರ್ದಿಷ್ಟಅವಧಿ ತನಕ ಕಾರ್ಖಾನೆಯನ್ನು ಲಾಕೌಟ್‌ ಮಾಡಲಾಗಿದೆ. ಪ್ರತಿಭಟನೆ ಹಿಂಪಡೆಯುವ ಸಂಬಂಧ ಕಾರ್ಮಿಕರ ಸಂಘಟನೆ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪನಿಯು ಅಧಿಕೃತ ಹೇಳಿಕೆ ಪ್ರಕಟಿಸಿದೆ.

Tap to resize

Latest Videos

ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ತನ್ನ ನೌಕರರು ಸೇರಿದಂತೆ ಎಲ್ಲ ಪಾಲುದಾರರ ಯೋಗಕ್ಷೇಮ ಕಾಯಲು ಬದ್ಧವಾಗಿದೆ. ಸೌಹಾರ್ದಯುತ ಮತ್ತು ಆರೋಗ್ಯಕರ ಕೆಲಸದ ವಾತಾವರಣವನ್ನು ಕಾಪಾಡಿಕೊಳ್ಳುವ ನಮ್ಮ ಪ್ರಯತ್ನದ ನಡುವೆ ಕೆಲವರು, ಶಿಸ್ತು ಉಲ್ಲಂಘಿಘಿಸುವ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆ. ಇಂತಹವರನ್ನು ಕಂಪೆನಿಯ ಕಾನೂನು ಮತ್ತು ಸೇವಾ ನಿಯಮದಂತೆ ಅಮಾನತುಗೊಳಿಸಿ ವಿಚಾರಣೆಯಲ್ಲಿ ಇರಿಸಲಾಗಿದೆ.

ಟೊಯೋಟಾ ಕಿರ್ಲೋಸ್ಕರ್ ಘಟಕದಲ್ಲಿ ಉತ್ಪಾದನೆ ಚುರುಕು; ಮೇ ತಿಂಗಳ ಮಾರಾಟ ವಿವರ ಪ್ರಕಟ!

ಪ್ರಸ್ತುತ ಟಿಕೆಎಂ ಯೂನಿಯನ್‌ ಅಕ್ರಮವಾಗಿ ಮುಷ್ಕರವನ್ನು ನಡೆಸುತ್ತಿದ್ದು, ಗುಂಪು ಸೇರುವ ಮೂಲಕ ಕೋವಿಡ್‌-19 ಮಾರ್ಗಸೂಚಿಗಳನ್ನು ಉಲ್ಲಂಘಿಘಿಸಿ ಕಾನೂನು ಬಾಹಿರವಾಗಿ ಕಾರ್ಖಾನೆಯ ಆವರಣದಲ್ಲಿ ಉಳಿದಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕಂಪನಿಯ ಮುಂದಿನ ಆದೇಶ ಬರುವ ತನಕ ಬಿಡದಿ ಘಟಕದಲ್ಲಿ ಲಾಕೌಟ್‌ ಘೋಷಿಸಲಾಗಿದೆ. ಸಮಸ್ಯೆ ಕುರಿತು ಯೂನಿಯನ್‌ನ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಕಾರ್ಮಿ​ಕರ ಅಹೋ​ರಾತ್ರಿ ಧರ​ಣಿ

ಕಾರ್ಮಿಕ ಸಂಘದ ಪದಾಧಿಕಾರಿಯೊಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿದ್ದು, ಕೂಡಲೇ ಈ ಅಮಾನತು ಆದೇಶವನ್ನು ಹಿಂಪಡೆಯಬೇಕು, ಕಾರ್ಮಿಕರನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕೆಂದು ಆಗ್ರಹಿಸಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪನಿಯ 3500ಕ್ಕೂ ಅಧಿಕ ಕಾರ್ಮಿಕರು ಕಂಪನಿಯ ಆವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಪ್ರತಿಭಟನಾನಿರತರು, ಕಂಪನಿಯ ಆಡಳಿತ ಮಂಡಳಿಯು ಕಾರ್ಮಿಕರನ್ನು ತೀರಾ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಕ್ಷಣಕಾಲವೂ ವಿರಾಮ ನೀಡದಂತೆ ಕೆಲಸ ಮಾಡಬೇಕಾದ ಅನಿವಾರ್ಯತೆ ತಂದೊಡ್ಡಿದೆ. ಇದನ್ನು ಪ್ರಶ್ನಿಸಲು ಹೋದ ಕಾರ್ಮಿಕ ಸಂಘದ ಪದಾಧಿಕಾರಿಗಳೊಂದಿಗೆ ಕಂಪನಿಯ ಆಡಳಿತ ಮಂಡಳಿ ಅಧಿಕಾರಿಗಳು ಉಡಾಫೆಯಿಂದ ನಡೆದುಕೊಂಡಿದ್ದಾರೆ. ಅಲ್ಲದೆ ಪದಾಧಿಕಾರಿಯನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.

ಸಸ್ಪೆಂಡ್‌ ಮಾಡುವ ಕಠಿಣ ಕ್ರಮ:

ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್‌ ಚಕ್ಕೆರೆ ಮಾತನಾಡಿ, ಕೋವಿಡ್‌ ನಂತರದ ದಿನಗಳಲ್ಲಿ ಕಂಪೆನಿಯ ಆಡಳಿತ ಮಂಡಳಿ ಕೋವಿಡ್‌ ಮಾರ್ಗಸೂಚಿ ಹೆಸರಿನಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದು, ತೀರಾ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಉತ್ಪಾದನೆಗೆ ತೊಂದರೆಯಾಗದಂತೆ ಮಿಲಿ ಸೆಕೆಂಡ್‌ನಲ್ಲಿ ಕಾರ್ಮಿಕರಿಂದ ಮಿತಿ ಮೀರಿ ಕೆಲಸ ತೆಗೆದುಕೊಳ್ಳುತ್ತಿದೆ. ಮಾಡಲಾಗದಿದ್ದರೇ ನೋಟಿಸ್‌ ಕೊಡುವುದು, ಪ್ರಶ್ನಿಸುವವರನ್ನು ಕೆಲಸದಿಂದ ಅಮಾನತು ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.

ಸರ್ಕಾರ ಮಧ್ಯ ಪ್ರವೇಶಿಸಲಿ:

ಕಾರ್ಮಿಕರ ಮೇಲೆ ನಡೆಸುತ್ತಿರುವ ಶೋಷಣೆ ಕುರಿತು ಜಿಲ್ಲಾಧಿಕಾರಿ, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಗಿದೆ. ಆದರೆ ಕಂಪನಿಯು ವಾಸ್ತವ ಸ್ಥಿತಿಯನ್ನು ಮರೆಮಾಚುತ್ತಿದ್ದು, ಹೊರಗೊಂದು-ಒಳಗೊಂದು ದ್ವಿನೀತಿ ಅನುಸರಿಸುತ್ತಿದೆ. ಟಿಕೆಎಂ ಆಡಳಿತ ಮಂಡಳಿಯಿಂದ ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಆಗಬಹುದಾದ ಅಪಾಯವನ್ನು ತಡೆಯಲು ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಟಿಕೆಎಂ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಸವರಾಜ ಹವಾಲ್ದಾರ್‌, ವೀರೇಶ್‌ ಕುಮಾರ್‌, ಶ್ರೀನಿ​ವಾಸ್‌, ಪ್ರಕಾಶ್‌ ಸೇರಿದಂತೆ ಅನೇಕ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
 

click me!