* ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರ ತೀರ್ಥಕೆರೆ ಜಲಪಾತ
* ತೀರ್ಥಕೆರೆ ಜಲಪಾತದ ಸೌಬಗು
* ಮಳೆಯಿಂದ ಧುಮ್ಮಿಕ್ಕಿ ಹರಿಯುತ್ತಿರುವ ತೀರ್ಥಕೆರೆ ಫಾಲ್ಸ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಜು.08): ಕಾಫಿನಾಡಲ್ಲಿ ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಹಿಡಿದ ಜಾಡಲ್ಲೆಲ್ಲಾ ಒಂದೊಂದು ಸುಮಧುರ ತಾಣಗಳು. ಆ ಮನಮೋಹಕ ತಾಣಗಳಲ್ಲಿ ಜಲಪಾತಗಳಿಗೆ ಸಿಂಹಪಾಲು. ಮಲೆನಾಡಲ್ಲಿ ನೀವು ದಾರಿತಪ್ಪಿ ಹೋದ್ರು ಮನಸ್ಸಿಗೆ ಮುದ ನೀಡುವ ಒಂದು ಫಾಲ್ಸ್ ಸಿಗೋದು ಫಿಕ್ಸ್. ಅದ್ರಲ್ಲೂ ಮಳೆಗಾಲದಲ್ಲಿ ಸುರಿದ ಮಳೆಯಿಂದ ಕಣ್ಣು ಹಾಯಿಸಿದಲೆಲ್ಲಾ ಜಲಪಾತಗಳದ್ದೇ ಸೊಬಗು, ವೈಭವ. ನೋಡುಗನ ಮನಸ್ಸಿನ ಭಾವನೆಗೆ ಮತ್ತಷ್ಟು ಜೀವ ತುಂಬುತ್ವೆ. ಅಂತಹಾ, ತಾಣಗಳಲ್ಲಿ ತೀರ್ಥಕೆರೆ ಜಲಪಾತವೂ ಒಂದು. ಇದನ್ನ ಪ್ರವಾಸಿಗ್ರು ನೆತ್ತಿಕಲ್ಲು ಫಾಲ್ಸ್ ಎಂದೇ ಕರೆಯುತ್ತಾರೆ.
ಮಳೆಯಿಂದ ಧುಮ್ಮಿಕ್ಕಿ ಹರಿಯುತ್ತಿರುವ ಫಾಲ್ಸ್
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತೀರ್ಥಕೆರೆ ಫಾಲ್ಸ್ ಹರಿಯುತ್ತಿದೆ. ದಟ್ಟ ಕಾನನದ ಹಸಿರು ಹಾದಿಯನ್ನು ಸೀಳಿ ಭೋರ್ಗರೆದು ಬೆಳ್ನೊರೆಯಾಗಿ ತೀರ್ಥಕೆರೆ ಫಾಲ್ಸ್ ನೆಲವನ್ನು ಸ್ಪರ್ಶಿಸುತ್ತಿದೆ.
ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ, ಕೆಲವೆಡೆ ಮರ, ಭೂ ಕುಸಿತ, ನೆರೆ ಭೀತಿಯಲ್ಲಿ ಜನರು
ಇತ್ತೀಚಿನ ದಿನಗಳಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಸಾಕಷ್ಷು ಮಂದಿ ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಇಲ್ಲಿನ ಜಲಪಾತಗಳು ಕೂಡ ಸಾಕಷ್ಷು ಪ್ರಸಿದ್ದಿ ಪಡೆದಿವೆ. ಇದರ ಸಾಲಿಗೆ ತೀರ್ಥಕೆರೆ ಜಲಪಾತವೂ ಸೇರಿಕೊಳ್ಳುತ್ತೇದೆ. ಒಮ್ಮೆ ಈ ಸ್ಥಳಕ್ಕೆ ಬಂದು ನೋಡಿದ್ರೆ ಎಷ್ಟೆ ದೂರದಿಂದ ಬಂದಿದ್ರು ಆಯಾಸವೆಲ್ಲಾ ಮಂಗಮಾಯ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸೋ ಶಕ್ತಿ ಈ ಜಲಪಾತಕ್ಕಿದೆ. ಕಪ್ಪನೆಯ ಬಂಡೆಗಳ ಮಧ್ಯೆ ಕ್ಷೀರದ ರೀತಿಯಲ್ಲಿ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನ ವರ್ಣಿಸಲು ಪದಗಳೇ ಸಾಲ್ದು. ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜಾಸ್ತಿಯಾಗ್ತಿರೋದ್ರಿಂದ ಈ ಜಲಪಾತಕ್ಕೆ ಡಬಲ್ ಜೀವ ಬಂದಿದೆ.
ಪ್ರಕೃತಿ ಸೌಂದರ್ಯದ ಸಿರಿಯನ್ನೇ ಹೊದ್ದು ಮಲಗಿರೋ ತೀರ್ಥಕೆರೆ ಜಲಪಾತ
ಅಂದಾಜು 120 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕಿ ಹರಿಯೋ ಈ ಜಲಪಾತ ಪ್ರವಾಸಿಗರ ಹಾಟ್ಸ್ಪಾಟ್. ಚಿಕ್ಕಮಗಳೂರಿನ ಪ್ರವಾಸಿಗರಿಗೆ ಚಿರಪರಿಚಿತ. ಜಲಪಾತದ ಬಗ್ಗೆ ತಿಳಿದಿರೋ ಪ್ರವಾಸಿಗ್ರು ವೀಕೆಂಡ್ಗಳಲ್ಲಿ ಬಂದು ಕುಣಿದು-ಕುಪ್ಪಳಿಸಿ ಎಂಜಾಯ್ ಮಾಡ್ತಾರೆ. ರಾಜ್ಯದ ಇತರೇ ಫಾಲ್ಸ್ಗೆ ಹೋಲಿಸಿದ್ರೆ ಈ ಫಾಲ್ಸ್ಗೆ ಪ್ರವಾಸಿಗರ ಕೊರತೆ ಇದ್ರು, ಇಲ್ಲಿ ಸೌಂದರ್ಯಕ್ಕೇನು ಬರವಿಲ್ಲ. ಶೃಂಗೇರಿಗೆ ಬಂದು ಹೊರನಾಡಿಗೆ ಹೋಗುವ ಭಕ್ತರಿಗೆ ಮಾತ್ರ ಈ ಜಲಧಾರೆ ನೋಡುವ ಭಾಗ್ಯ ದೊರೆಯುಲಿದೆ. ಜಯಪುರದಿಂದ ಹೊರನಾಡಿಗೆ ತೆರಳುವ ಮಾರ್ಗ ಮಧ್ಯೆದಲ್ಲೇ ಈ ಫಾಲ್ಸ್ ಎದುರಾಗಲಿದೆ.. ಮಳೆಗಾಲದಲ್ಲಿ ಫಾಲ್ಸ್ ಮೈತುಂಬಿ ಧುಮ್ಮಿಕ್ಕುವ ದ್ರಶ್ಯವನ್ನು ಪ್ರವಾಸಿಗರು ಕಣ್ಣು ತುಂಬಿಕೊಳ್ಳುತ್ತಾರೆ.ಅಲ್ಲದೆ ಪ್ರವಾಸಿಗರು ಎಷ್ಟೇ ಮಳೆ ಬರುತ್ತಾದ್ದರೂ ಮಳೆಯ ನಡುವೆಯೇ ಇಳಿದು ಫಾಲ್ಸ್ ಮುಂದೆ ಪೋಟೋ ತೆಗೆಯುವುದನ್ನು ಮಾತ್ರ ಮರೆಯುವುದಿಲ್ಲ.
ಒಟ್ಟಾರೆ, ದಟ್ಟ ಕಾನನದ ಮಧ್ಯೆ ಧುಮ್ಮಿಕ್ಕಿ ಹರಿಯೋ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಸರಿ, ಪ್ರಕೃತಿ ಸೌಂದರ್ಯದ ಸಿರಿಯನ್ನೇ ಹೊದ್ದು ಮಲಗಿರೋ ಈ ತೀರ್ಥಕೆರೆ ಜಲಪಾತ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಮಲೆನಾಡಲ್ಲೀಗ ಭರ್ಜರಿ ಮಳೆಯಾಗ್ತಿದ್ದು ತೀರ್ಥಕೆರೆ ಫಾಲ್ಸ್ ತನ್ನ ಸೊಬಗನ್ನ ಇಮ್ಮಡಿಗೊಳಿಸಿಕೊಂಡಿದೆ.