ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರು ಲಗ್ಗೆ ಹಾಕಿದ್ದಾರೆ. ಅದರಲ್ಲೂ ಗಿರಿ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ.ಮಂಜು, ಮಳೆಯಿಂದಾವೃತವಾದ ಗಿರಿತಪ್ಪಲಿನ ತಂಪಾದ ವಾತಾವರಣದಲ್ಲಿ ಮತ್ತೇರಿಸಿಕೊಳ್ಳುವ ತವಕದಲ್ಲಿದ್ದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಿಸಿ ಮುಟ್ಟಿಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.13): ಜಿಲ್ಲೆಯ ಪ್ರವಾಸಿತಾಣಗಳಿಗೆ ಪ್ರವಾಸಿಗರು ಲಗ್ಗೆ ಹಾಕಿದ್ದಾರೆ. ಅದರಲ್ಲೂ ಗಿರಿ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ.ಮಂಜು, ಮಳೆಯಿಂದಾವೃತವಾದ ಗಿರಿತಪ್ಪಲಿನ ತಂಪಾದ ವಾತಾವರಣದಲ್ಲಿ ಮತ್ತೇರಿಸಿಕೊಳ್ಳುವ ತವಕದಲ್ಲಿದ್ದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಿಸಿ ಮುಟ್ಟಿಸಿದರು. ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿ, ಕೇಸ್ಗಟ್ಟಲೆ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.
ಕಾರ್ಯಾಚರಣೆಗಿಳಿದ ಎಸ್ಪಿ: ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಅವರು ಶನಿವಾರ ಪ್ರವಾಸಿಗರ ವಾಹನ ತಪಾಸಣೆ ಕಾರ್ಯಾಚರಣೆಗಿಳಿದಿದ್ದರು. ಕೈಮರ ಚೆಕ್ ಪೋಸ್ಟ್ನಲ್ಲಿ ಪ್ರತಿ ವಾಹನವನ್ನು ಪರಿಶೀಲಿಸಿದ ಪೊಲಿಸ್ ಹಾಗೂ ಅಬಕಾರಿ ಸಿಬ್ಬಂದಿಗಳು ಭಾರೀ ಪ್ರಮಾಣದಲ್ಲಿ ಮದ್ಯದ ಬಾಟಲಿಗಳು, ಗುಟ್ಕಾ ಪ್ಯಾಕೆಟ್ಗಳು, ಸಿಗರೇಟು, ಬೀಡಿ, ನೀರಿನ ಬಾಟಲಿಗಳು ಎಲ್ಲವನ್ನೂ ಸೀಜ್ ಮಾಡಿದರು.ಇತ್ತೀಚೆಗೆ ಪ್ರವಾಸಕ್ಕೆ ಬಂದ ಕೆಲವು ಕಿಡಿಗೇಡಿಗಳು ಕುಡಿದು ಹುಚ್ಚಾಟ ನಡೆಸುವುದು, ಕೀಟಲೆ, ತರಲೆ ಮಾಡುವುದು, ಸ್ಥಳೀಯರಿಗೆ ಕಿರಿಕಿರಿ ಉಂಟುಮಾಡುವುದು.
ಜನಸ್ಪಂದನ ಸಭೆ: ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ವಿತರಿಸಿದ ಮಡಿಕೇರಿ ಶಾಸಕ ಮಂತರ್ ಗೌಡ
ಪ್ರವಾಸಿ ತಾಣಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಟೆಟ್ರಾ ಪ್ಯಾಕ್ಗಳು, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಆಹಾರದ ಪೊಟ್ಟಣಗಳನ್ನು ಬಿಸಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.ಕಳೆದ ವಾರ ಮುಳ್ಳಯ್ಯನಗಿರಿ, ಮೂಡಿಗೆರೆಯ ದೇವರ ಮನೆ, ತರೀಕೆರೆಯ ಲಕ್ಕವಳ್ಳಿ ಇತರೆ ಕಡೆಗಳಲ್ಲಿ ಈ ರೀತಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದ್ದರು. ಇಂದು ಸ್ವತಃ ಎಸ್ಪಿ ಅವರೇ ನೇರವಾಗಿ ವಾಹನಗಳನ್ನು ತಪಾಸಣೆ ನಡೆಸಿ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದದ್ದು ವಿಶೇಷವಾಗಿತ್ತು.
250 ಕ್ಕೂ ಹೆಚ್ಚು ಪ್ರಕರಣ: ಹಲವಾರು ವಾಹನಗಳನ್ನು ತಪಾಸಣೆಗೊಳಪಡಿಸಿ ಕೆಪಿ ಆಕ್ಟ್ ಪ್ರಕಾರ ಸುಮಾರು 250 ಕ್ಕೂ ಹೆಚ್ಚು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡರು. ಪ್ರವಾಸಿಗರು ಪರಿಪರಿಯಾಗಿ ಬೇಡಿಕೊಂಡರೂ ಮುಲಾಜಿಗೊಳಗಾಗದ ಪೊಲೀಸರು, ಮದ್ಯ ಇನ್ನಿತರೆ ಮಾದಕ ಪದಾರ್ಥಗಳನ್ನು ಹೊಂದಿದ್ದವರಿಗೆ ಬೆವರಿಳಿಸಿದರು.
ಅಬಕಾರಿ ಎಸ್ಐಗೂ ತರಾಟೆ: ವಾಹನ ತಪಾಸಣೆ ವೇಳೆ ಕಾರ್ನ ಮುಂಭಾಗದ ಡ್ಯಾಶ್ ಬೋರ್ಡ್ ಮೇಲೆ ಹ್ಯಾಟ್ ಇಟ್ಟು ಪ್ರವಾಸಕ್ಕೆ ಬಂದಿದ್ದ ಅಬಕಾರಿ ಇನ್ಸ್ಪೆಕ್ಟರ್ವೊಬ್ಬರಿಗೂ ಎಸ್ಪಿ ತರಾಟೆಗೆ ತೆಗೆದುಕೊಂಡರು ಅಲ್ಲದೆ ಅವರ ಕಾರಿನಲ್ಲಿದ್ದ ಪ್ರಾಸ್ಟಿಕ್ ಕುಡಿಯುವ ನೀರಿನ ಬಾಟಲಿಯನ್ನೂ ವಶಕ್ಕೆ ಪಡೆದರು.ಕೆಲವೇ ಗಂಟೆಗಳಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿಗಳು, ಹಲವು ಕೇಸ್ಗಷ್ಟು ಮದ್ಯದ ಬಾಟಲಿಗಳು ಸಂಗ್ರಹವಾದವು. ಎಲ್ಲವನ್ನೂ ಠಾಣೆಗೆ ಕೊಂಡೊಯ್ದು ಪ್ರಕರಣ ದಾಖಲಿಸುವಂತೆ ಎಸ್ಪಿ ಸ್ಥಳದಲ್ಲಿದ್ದ ಸಿಬ್ಬಂದಿಗಳಿಗೆ ಸೂಚಿಸಿದರು.
ಸಾಲುಗಟ್ಟಿನಿಂತ ವಾಹನಗಳು: ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ಕೈಗೊಂಡ ಹಿನ್ನೆಲೆಯಲ್ಲಿ ಗಿರಿ ಪ್ರವೇಶಿಸುವ ಎರಡೂ ಬದಿಯ ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮದ್ಯ ಮತ್ತು ಪ್ಲಾಸ್ಟಿಕ್ ತಪಾಸಣೆ ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯೊಂದಿಗೆ ಚಿಕ್ಕಮಗಳೂರು ಅಡ್ಚೆಂಚರ್ ಸ್ಪೋರ್ಟ್ಸ್ ಕ್ಲಬ್ ಸಹ ಕೈಜೋಡಿಸಿತು. ಕ್ಲಬ್ನ ಸಂಸ್ಥಾಪಕ ಅಧ್ಯಕ್ಷ ರೂಬಿನ್ ಮೋಸೆಸ್, ಹಾಲಿ ಅಧ್ಯಕ್ಷ ಕೃಷ್ಣ, ವಿನಾಯಕ್, ನಾದನ್ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೈಕ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ, ಮಗನ ಸಾವಿಗೆ ನೊಂದು ರೈಲಿಗೆ ತಲೆ ಕೊಟ್ಟ ತಾಯಿ!
ಪ್ರವಾಸಿಗರು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಕೇಕೆ: ಗಿರಿ ತಪ್ಪಲಿನ ಮಳೆ, ಮಂಜು, ಕುಳಿರ್ಗಾಳಿಯ ಅಹ್ಲಾದಕರ ವಾತಾವರಣದ ಮುಂದೆ ಟ್ರಾಫಿಕ್ ಜಾಮ್ ಸಮಸ್ಯೆ ಅನ್ನಿಸಲೇ ಇಲ್ಲ. ವಾಹನಗಳು ನಿಂತ ಕಡೆಯೇ ಕೆಳಗಿಳಿದು ಕುಣಿದು ಕುಪ್ಪಳಿಸಿದ ಪ್ರವಾಸಿಗರು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಕೇಕೆ ಹಾಕಿದರು. ಮುಂಗಾರಿನ ಮುದ ಅನುಭವಿಸಲೇ ಬೇಕೆಂಬ ಇರಾದೆಯೊಂದಿಗೆ ಬಂದಿರುವ ಪ್ರವಾಸಿಗರು ಕಷ್ಟವಾದರೂ ಪರವಾಗಿಲ್ಲ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲೇ ಬೇಕೆಂಬ ಪಣ ತೊಟ್ಟು ಬಂದಿರುವುದಾಗಿ ಹೇಳುತ್ತಾರೆ.ಕಳೆದ ಎರಡು ತಿಂಗಳಿಗೆ ಹೋಲಿಸಿದಲ್ಲಿ ನಗರ ಹಾಗೂ ಜಿಲ್ಲೆಯಲ್ಲಿ ಹೋಂಸ್ಟೇ, ಲಾಡ್ಜ್, ಹೋಟೆಲ್, ರೆಸಾರ್ಟ್, ಕ್ಯಾಂಟೀನ್ಗಳಲ್ಲಿ ವ್ಯಾಪಾರ ವಹಿವಾಟು ಚುರುಕಾಗಿದೆ. ಮುಂಗಾರು ಆರಂಭವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.