ಮಾರುಕಟ್ಟೆಯ ಇತಿಹಾಸದಲ್ಲಿ 15 ಕೆಜಿ ಬಾಕ್ಸ್ 2,600 ರು.ಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ದರ ಭಾರೀ ಕುಸಿತ ಕಂಡಿದೆ.
ಚಿಕ್ಕಬಳ್ಳಾಪುರ (ಆ.12): ಮಾರುಕಟ್ಟೆಯ ಇತಿಹಾಸದಲ್ಲಿ 15 ಕೆಜಿ ಬಾಕ್ಸ್ 2,600 ರು.ಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ದರ ಭಾರೀ ಕುಸಿತ ಕಂಡಿದೆ. ಇದರಿಂದಾಗಿ ಒಂದಡೆ ಟೊಮೆಟೋ ಬಳಸುವ ಗ್ರಾಹಕರಲ್ಲಿ ಸಂತಸ ಮೂಡಿದರೆ, ಮತ್ತೊಂದಡೆ ಟೊಮೆಟೋ ಬೆಳೆಗಾರರಲ್ಲಿ ತೀವ್ರ ನಿರಾಸೆಗೆ ಕಾರಣವಾಗಿದೆ. ಜಿಲ್ಲೆಯ ಟೊಮೆಟೋ ಮಾರುಕಟ್ಟೆಗಳಾದ ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ಎಪಿಎಂಸಿಗಳಲ್ಲಿ ಶುಕ್ರವಾರ 15 ಕೆ.ಜಿ. ಟೊಮೆಟೋ ಬಾಕ್ಸ್ ಕೇವಲ 350 ರಿಂದ 700 ರೂ ವರೆಗೂ ಮಾರಾಟವಾಗಿದ್ದು ಟೊಮೆಟೋ ದರ ಬರೋಬರಿ ಶೇ. 60ರಿಂದ 70ರ ವರೆಗೆ ಬೆಲೆ ಕುಸಿತ ಕಂಡಿದೆ.
ಟೊಮೆಟೋ ಅವಕ ಹೆಚ್ಚಳ: ಸತತ ಒಂದು ವಾರದಿಂದ ಟೊಮೆಟೋ ದರ ಕುಸಿಯುತ್ತಲೇ ಇಟ್ಢ. ಒಂದರೆಡು ದಿನದಲ್ಲಿ ಭಾರೀ ಕುಸಿತ ಕಂಡಿದೆ. ವಾರದ ಹಿಂದೆ 1700, 2000 ರೂ. ಅಸುಪಾಸಿನಲ್ಲಿದ್ದ 15 ಕೆ.ಜಿ. ಟೊಮೆಟೋ ಈಗ 700ಕ್ಕೆ ಕುಸಿತ ಕಂಡಿದ್ದು ಇನ್ನಷ್ಟುಬೆಲೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಜೂನ್ ಅಂತ್ಯ, ಜುಲೈ ತಿಂಗಳ ಆರಂಭದಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿತ್ತು. ಇಡೀ ದೇಶದಲ್ಲಿ ಟೊಮೆಟೋ ಬೆಲೆ ಗ್ರಾಹಕರನ್ನು ತೀವ್ರ ಚಿಂತೆಗೀಡು ಮಾಡಿತ್ತು. ಒಂದರೆಡು ತಿಂಗಳು ಬೆಲೆ ಇಳಿಕೆ ಆಗಲ್ಲ ಎಂದು ಅಂದಾಜು ಮಾಡಲಾಗಿತ್ತು. ಆದರೆ, ದೇಶವ್ಯಾಪ್ತಿ ಟೊಮೆಟೋ ಮಾರುಕಟ್ಟೆಗೆ ಪ್ರವೇಶ ಆರಂಭಗೊಂಡ ಬೆನ್ನಲ್ಲೆ ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ.
ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ: ಸಚಿವ ಎಚ್.ಕೆ.ಪಾಟೀಲ್
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 50, 60: ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿರುವ ಬೆನ್ನಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1 ಕೆ.ಜಿ. ಟೊಮೆಟೋ ದರ 40ರಿಂದ 50 ರು.ಗಳಿಗೆ ಕುಸಿದಿದೆ. ಗುಣಮಟ್ಟದ ಟೊಮೆಟೋ 60 ರು.ಗಳಿಗೆ ಮಾರಾಟವಾಗುತ್ತಿದೆ. ಅಧಿಕ ಶ್ರಾವಣ ಮುಗಿದು ಕೆಲವೇ ದಿನಗಳಲ್ಲಿ ನಿಜ ಶ್ರಾವಣ ಆರಂಭಗೊಳ್ಳಲಿದ್ದು ಶುಭ ಸಮಾರಂಭ, ಮದುವೆ,ಮುಂಜಿ, ನಾಮಕಾರಣ ಮತ್ತಿತರ ಶುಭ ಕಾರ್ಯಗಳು ಜತೆಗೆ ವೆಂಕಟೇಶ್ವರನಿಗೆ ಪ್ರಿಯವಾದ ಶ್ರಾವಣ ಶನಿವಾರಗಳು, ವರಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ಹೀಗೆ ಸಾಲು ಸಾಲು ಹಬ್ಬಗಳ ಆಗಮನ ಆಗಲಿದ್ದು ಇದೀಗ ಟೊಮೆಟೋ ದರ ಕುಸಿತ ಒಂದು ರೀತಿ ಗ್ರಾಹಕರ ಮೊಗದಲ್ಲಿ ಸಂತಸ ತರಿಸಿದೆ. ಆದರೆ ದಿಢೀರ್ ಬೆಲೆ ಏರಿಕೆಗೊಂಡು ಅದೃಷ್ಠದ ಬಾಗಿಲು ತೆರೆದು ಟೊಮೆಟೋ ಮಾರಾಟದಿಂದ ಲಕ್ಷ ಲಕ್ಷ ಹಣ ಸಂಪಾದಿಸಿದ ರೈತರಲ್ಲಿ ಸಹಜವಾಗಿಯೆ ಬೆಲೆ ಕುಸಿತ ಬೇಸರ ಮೂಡಿಸಿದೆ.
ಬಂಡೀಪುರ: ರಾಜ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಬರುವ ಪ್ರವಾಸಿಗರಿಗೆ ವಿಮೆ ಭಾಗ್ಯ!
ಬೇರೆ ರಾಜ್ಯಗಳಲ್ಲೂ ಟೊಮೆಟೋ ಬೆಳೆ ಉತ್ತಮ: ಸದ್ಯ 15 ಕೆ.ಜಿ. ಟೊಮೆಟೋ ಬಾಕ್ಸ್ ಕೇವಲ 350 ರಿಂದ 700 ರೂ. ವರೆಗೂ ಮಾರಾಟವಾಗಿದೆ. ಆಂಧ್ರ, ತೆಲಂಗಾಣ ಮತ್ತಿತರ ರಾಜ್ಯಗಳಿಂದ ಟೊಮೆಟೋ ವ್ಯಾಪಕವಾಗಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕುಸಿತ ಕಂಡಿದೆ. ಇನ್ನು ನಾಸಿಕ್ ನಿಂದಲೂ ಎರಡು ವಾರಗಳಲ್ಲಿ ಹೆಚ್ಚಿನ ಟೊಮೆಟೋ ಬರುವ ನಿರೀಕ್ಷ ಇದ್ದು ಆ ಟೊಮೆಟೋ ಬಂದಲ್ಲಿ ಬೆಲೆಯಲ್ಲಿ ಇನ್ನಷ್ಟುಇಳಿಕೆ ಕಾಣಲಿದೆ ಎಂದು ಟೊಮೆಟೋ ವರ್ತಕ ಮೋಹನ್ ಹೇಳಿದ್ದಾರೆ.