
ತಿಪಟೂರು: ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರು ಕನ್ನಡ ಸಾಹಿತ್ಯದ ಮೇರು ಕವಿಯಾಗಿದ್ದರೂ ಕುಪ್ಪಳಿಯ ಕವಿಶೈಲದಲ್ಲಿರುವ ಇವರ ಸಮಾಧಿಗೆ ಪುತ್ಥಳಿ ನಿರ್ಮಿಸುವಲ್ಲಿ ಸರ್ಕಾರ ಮುಂದಾಗದಿರುವುದು ತೀವ್ರ ನೋವಿನ ಸಂಗತಿ ಎಂದು ತಿಪಟೂರು ಅಕ್ಕಮಹಾದೇವಿ ಸಮಾಜ ಕಳವಳ ವ್ಯಕ್ತಪಡಿಸಿದೆ.
ತಿಪಟೂರಿನಲ್ಲಿರುವ ಅಕ್ಕಮಹಾದೇವಿ ಮಹಿಳಾ ಸಮಾಜದ ಖಜಾಂಚಿ ಮುಕ್ತ ತಿಪ್ಪೇರುದ್ರಪ್ಪ, ಉಪಾಧ್ಯಕ್ಷೆ ಶೋಭಾ ಸೇರಿ ಇತರೆ ಪದಾಧಿಕಾರಿಗಳು ಕುಪ್ಪಳ್ಳಿಯ ಕವಿಶೈಲದ ಜ್ಞಾನ ಧ್ಯಾನಪೀಠವಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಬೇಸರ ವ್ಯಕ್ತಪಡಿಸಿದ್ದಾರೆ. ಕುವೆಂಪು ಸಮಾಧಿ ಸ್ಥಳವು ಒಂದು ಪ್ರೇಕ್ಷಣೀಯ ಸ್ಥಳವಾಗಿದ್ದು, ಆದರೆ, ಇದುವರೆಗೂ ಕುವೆಂಪುರವರ ಸಮಾಧಿಗೆ ಪುತ್ಥಳಿ ನಿರ್ಮಾಣಗೊಂಡಿಲ್ಲ, ಕವಿ ಸಮಾಧಿ ಎಂದು ಬರೆದಿರುವ ಕಾರಣ ಇದು ಕವಿಗಳ ಸಮಾಧಿ ಸ್ಥಳವೆಂದು ಮಾತ್ರ ಗುರುತಿಸಬಹುದಾಗಿದೆ.
ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯದ ಮೇರು ಪರ್ವತವಾಗಿದ್ದು, ವಿಶ್ವಕ್ಕೆ ಮಾನವೀಯತೆಯನ್ನು ಸಾರಿದ ಯುಗದ ಕವಿಯಾಗಿದ್ದಾರೆ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಸಂಖ್ಯೆಯ ಪ್ರವಾಸಿಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಕವಿಗಳು, ಸಾಹಿತಿಗಳು ಬಂದು ಹೋಗುತ್ತಾರೆ. ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕವಿಗಳ ಸಮಾಧಿ ನಿರ್ಮಿಸಿ, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಅಕ್ಕಮಹಾದೇವಿ ಸಮಾಜದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.