ಬೆಂಗಳೂರು ಅಭಿವೃದ್ಧಿಗೆ ಶ್ರಮಿಸುವವರಿಗಾಗಿ ನಮ್ಮ ಬೆಂಗಳೂರು ಫೌಂಡೇಶನ್ 14 ನೇ ಆವೃತ್ತಿಯ ನಮ್ಮ ಬೆಂಗಳೂರು 2024 ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಸಾರ್ವಜನಿಕರು ಸೆಪ್ಟೆಂಬರ್ 6 ರಿಂದ ಅಕ್ಟೋಬರ್ 31 ರವರೆಗೆ ನಾಮನಿರ್ದೇಶನಗಳನ್ನು ಸಲ್ಲಿಸಬಹುದು.
ಬೆಂಗಳೂರು (ಸೆ.7): ಬೆಂಗಳೂರನ್ನು ಉತ್ತಮ ನಗರವನ್ನಾಗಿಸಲು ಶ್ರಮಿಸುತ್ತಿರುವವರಿಗಾಗಿ ನಮ್ಮ ಬೆಂಗಳೂರು ಫೌಂಡೇಶನ್ ನೀಡುವ 14 ನೇ ಆವೃತ್ತಿಯ ನಮ್ಮ ಬೆಂಗಳೂರು 2024 ಪ್ರಶಸ್ತಿಗೆ ಸಾರ್ವಜನಿಕರಿಂದ ನಾಮನಿರ್ದೇಶನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಬೆಂಗಳೂರು ಫೌಂಡೇಶನ್ ಈ ವರ್ಷದ ರೈಸಿಂಗ್ ಸ್ಟಾರ್, ವರ್ಷದ ಸಾಮಾಜಿಕ ಉದ್ಯಮಿ, ವರ್ಷದ ಸರ್ಕಾರಿ ಅಧಿಕಾರಿ ಪ್ರಶಸ್ತಿ ನೀಡಲಾಗುತ್ತಿದೆ. ಮತ್ತು ಹೆಚ್ಚುವರಿಯಾಗಿ ಬೆಂಗಳೂರು ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತದೆ. ಸಾರ್ವಜನಿಕರು ಈ ಪ್ರಶಸ್ತಿಗಳಿಗಾಗಿ ತಾವು ಗುರುತಿಸಿದ ಅಸಾಧಾರಣ ಬೆಂಗಳೂರಿಗರನ್ನು ಸೆ.6ರಿಂದ ಅ. 31ರವರೆಗೆ ನಾಮನಿರ್ದೇಶನ ಮಾಡಬಹುದಾಗಿದೆ. www.nammabengaluruawards.org ಗೆ ಭೇಟಿ ನೀಡಿ.
ಈ ಬಗ್ಗೆ ಮಾತನಾಡಿರುವ ನಮ್ಮ ಬೆಂಗಳೂರು ಅವಾರ್ಡ್ಸ್‌ನ ರಾಯಭಾರಿ ಹಿರಿಯ ನಟ ರಮೇಶ್ ಅರವಿಂದ್, ನಮ್ಮ ಬೆಂಗಳೂರು ಪ್ರಶಸ್ತಿಗಳು ಸಮಾಜ ವನ್ನು ಸುಧಾರಿಸಲು ನಿಸ್ವಾರ್ಥ ಸೇವೆ ಸಲ್ಲಿಸಿದ ಅಸಾಧಾರಣ ವ್ಯಕ್ತಿ ಗಳನ್ನು ಗುರುತಿಸುವ ಪ್ರಕ್ರಿಯೆಯಾಗಿದೆ. ಈ ಪ್ರಶಸ್ತಿಯು ನಗರಕ್ಕೆ ಅರ್ಥಪೂರ್ಣ ಕೊಡುಗೆ ಗಳನ್ನು ನೀಡುವುದಕ್ಕೆ ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಮೂಕ್ರೋಲ್ಯಾಂಡ್ ಅಧ್ಯಕ್ಷ ಮತ್ತು ನಮ್ಮ ಬೆಂಗಳೂರು ಪ್ರಶಸ್ತಿಯ ತೀರ್ಪುಗಾರ ಸಮಿತಿ ಅಧ್ಯಕ ಪ್ರದೀಪ್ ಕರ್ ಮಾತನಾಡಿ, ಬೆಂಗಳೂರಿನ ನಾಗರಿಕರು ಒಗ್ಗೂಡಿ ತಮ್ಮ ನಿಜ ಜೀವನದ ನಾಯಕರನ್ನು ನಾಮನಿರ್ದೇಶನ ಮಾಡುವ ಸಮಯ ಬಂದಿದೆ. ನಮ್ಮ ಬೆಂಗಳೂರು ಪ್ರಶಸ್ತಿಯು ಸಮಾಜದಲ್ಲಿ ಬದಲಾವಣೆ ತಂದ ವ್ಯಕ್ತಿಗಳನ್ನು ಗುರುತಿಸಿ, ಗೌರವಿಸುವ ಕೆಲಸವಾಗಿದೆ' ಎಂದು ಹೇಳಿದ್ದಾರೆ.
ಇನ್ನು ಸಾರ್ವಜನಿಕರಿಂದ ನಾಮನಿರ್ದೇಶನ ಆದವರನ್ನು ಆಯ್ಕೆ ಮಾಡಲು 11 ಜನರ ತೀರ್ಪುಗಾರರ ಸಮಿತಿ ರಚಿಸಿದೆ. ಸಮಿತಿಯಲ್ಲಿ ನಟ ಹಾಗೂ ನಮ್ಮ ಬೆಂಗಳೂರು ಫೌಂಡೇಶನ್ ಪ್ರಶಸ್ತಿ ರಾಯಭಾರಿ ರಮೇಶ್ ಅರವಿಂದ್ , ಮೂಕ್ರೋಲ್ಯಾಂಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕರ್, ಎಚ್‌ಸಿಜಿ ಆಂಕೋಲಜಿ ಸರ್ಜನ್ ಡಾ.ವಿಶಾಲ್ ರಾವ್, ಎವಿಎಎಸ್ ಸಂಸ್ಥಾಪಕ ಟ್ರಸ್ಟಿ ಅನಿತಾ ರೆಡ್ಡಿ, ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್, ಬಯೋಮಿಯ ಜಲಸಂರಕ್ಷಣಾ ತಜ್ಞ ಎಸ್. ವಿಶ್ವನಾಥ್, ಅಕ್ಷರ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಅಶೋಕ್ ಕಾಮತ್, ನಾಸ್ಕಾಂ ಮಾಜಿ ಉಪಾಧ್ಯಕ್ಷ ಮತ್ತು ಸ್ವತಂತ್ರ ತಂತ್ರಜ್ಞಾನ ಸಲಹೆಗಾರ ಕೆ ಎಸ್ ವಿಶ್ವನಾಥನ್ , ಅದಮ್ಯಚೇತನ ಟ್ರಸ್ಟಿ ಐಶ್ವರ್ಯ ಅನಂತಕುಮಾರ್, ಅಪೋಲೋ ಆಸ್ಪತ್ರೆ ಪಲ್ಮನಾಲಜಿ ಮತ್ತು ಕ್ರಿಟಿಕಲ್ ಕೇಸ್ ಮುಖ್ಯಸ್ಥ ಡಾ. ರವೀಂದ್ರ ಮೆಹ್ತಾ, ನಮ್ಮ ಬೆಂಗಳೂರು ಫೌಂಡೇಷನ್ ಟ್ರಸ್ಟಿ ಸಂಜಯ್ ಪ್ರಭು ತೀರ್ಪುಗಾರರಾಗಿದ್ದಾರೆ.