ಗೌರಿ-ಗಣೇಶ, ಈದ್‌ ಹಬ್ಬ ಹಿನ್ನೆಲೆ ಬೆಂಗಳೂರು ನಗರದಲ್ಲಿ ಬಿಗಿ ಭದ್ರತೆ : ಸೀಮಂತ್ ಕುಮಾರ್ ಸಿಂಗ್

Kannadaprabha News   | Kannada Prabha
Published : Aug 22, 2025, 06:55 AM IST
Bengaluru City Police commissioner Seemanth Kumar

ಸಾರಾಂಶ

ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಕಣ್ಗಾವಲು ಶುರು ಮಾಡಿದ್ದಾರೆ.

ಬೆಂಗಳೂರು : ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಕಣ್ಗಾವಲು ಶುರು ಮಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ನಿಮಿತ್ತ ಪ್ರತಿ ಠಾಣಾ ಮಟ್ಟದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಎಲ್ಲ ಸಮುದಾಯಗಳ ಮುಖಂಡರ ಜತೆ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದರು.

ನಗರದಲ್ಲಿ ಗಣೇಶೋತ್ಸವದ ಅಂಗವಾಗಿ ನಡೆಯುವ ಮೆರವಣಿಗೆ ಸಾಗುವ ಮಾರ್ಗಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಟ್ಯಾನರಿ ರಸ್ತೆಗೆ ಖುದ್ದು ನಾನೇ ತೆರಳಿ ಪರಿಶೀಲಿಸಿದ್ದೇನೆ ಎಂದು ಹೇಳಿದರು.

ಡಿಜೆ ಬಳಕೆಗೆ ಪರಿಶೀಲನೆ

ಗಣೇಶ ಪೆಂಡಾಲ್‌ಗಳಲ್ಲಿ ಡಿಜೆ ಸಂಗೀತ ಬಳಕೆ ಕುರಿತು ಅಂತಿಮ ತೀರ್ಮಾನ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚಿಸಿ ತೀರ್ಮಾನಿಸಲಾಗುತ್ತದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು.

ಇನ್ನು ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ಅಥವಾ ಪೋಸ್ಟ್ ಮಾಡುವವರ ಮೇಲೂ ನಿಗಾ ವಹಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು.

ಹಬ್ಬಗಳ ಆಚರಣೆ ವೇಳೆ ನಗರದ ವ್ಯಾಪ್ತಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸ್ಥಳೀಯ ಮಟ್ಟದಿಂದ ಪೊಲೀಸರು ಹೆಚ್ಚಿನ ಸಿದ್ಧತೆ ಮಾಡಿಕೊಂಡಿದ್ದಾರೆ. ಸೂಕ್ಷ್ಮ ಪ್ರದೇಶಗಳ ಸರಹದ್ದಿನಲ್ಲಿ ಗಸ್ತು ತಿರುಗಾಟ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಸಂಘಟಕರೇ ಹೊಣೆ

ಗಣೇಶೋತ್ಸವಗಳಲ್ಲಿ ಗಲಾಟೆಗಳು ನಡೆದರೆ ಸಂಘಟಕರನ್ನೇ ಹೊಣೆಗಾರನ್ನಾಗಿಸಲು ಪೊಲೀಸರು ಮುಂದಾಗಿದ್ದಾರೆ. ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮುನ್ನ ಸ್ಥಳೀಯ ಪೊಲೀಸರು ಸೇರಿದಂತೆ ಸಂಬಂಧ ಇಲಾಖೆಗಳಿಂದ ಪೂರ್ವಾನುಮತಿ ಪಡೆಯಬೇಕು. ಅಲ್ಲದೆ ಸರ್ಕಾರದ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ಆಯೋಜಿಸಬೇಕು. ಒಂದು ವೇಳೆ ಕೋಮು ಸಾಮರಸ್ಯ ಹಾಳುಗೇಡುವ ರೀತಿಯಲ್ಲಿ ಪ್ರಚೋದನಕಾರಿ ಘೋಷಣೆ ಕೂಗುವುದು ಸೇರಿದಂತೆ ಅಹಿತಕರ ಘಟನಗಳು ಸಂಭವಿಸಿದರೆ ಸಂಘಟಕರು ಹೊಣೆ ಹೊರಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ