ಗ್ರೇಟರ್‌ ಬೆಂಗ್ಳೂರು ಜಾರಿಗೆ ಅಂತಿಮ ಸಿದ್ಧತೆ : ಸೆ.2ರಿಂದಲೇ ಆಡಳಿತಾತ್ಮಕವಾಗಿ ಜಿಬಿಎ ಅಸ್ತಿತ್ವಕ್ಕೆ

Kannadaprabha News   | Kannada Prabha
Published : Aug 22, 2025, 06:15 AM IST
BBMP latest news today photo

ಸಾರಾಂಶ

ಐದು ಪಾಲಿಕೆ ಕಚೇರಿ ಕಟ್ಟಡ, ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ, ಆದಾಯ, ಪಾವತಿಯನ್ನು (ಬಾಕಿ ಬಿಲ್‌) ಹೊಸ ಪಾಲಿಕೆಗಳಿಗೆ ಹಂಚಿಕೆ ಮಾಡುವುದು ಸೇರಿದಂತೆ ಸೆ.2 ರಿಂದ ಆಡಳಿತಾತ್ಮಕವಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸುವುದಕ್ಕೆ ಅಂತಿಮ ಸಿದ್ಧತೆ ಶುರುವಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಐದು ಪಾಲಿಕೆ ಕಚೇರಿ ಕಟ್ಟಡ, ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ, ಆದಾಯ, ಪಾವತಿಯನ್ನು (ಬಾಕಿ ಬಿಲ್‌) ಹೊಸ ಪಾಲಿಕೆಗಳಿಗೆ ಹಂಚಿಕೆ ಮಾಡುವುದು ಸೇರಿದಂತೆ ಸೆ.2 ರಿಂದ ಆಡಳಿತಾತ್ಮಕವಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸುವುದಕ್ಕೆ ಅಂತಿಮ ಸಿದ್ಧತೆ ಶುರುವಾಗಿದೆ.

ಈಗಾಗಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ಐದು ನಗರಪಾಲಿಕೆ ರಚನೆಗೆ ಸಂಬಂಧಿಸಿದಂತೆ ಕರಡು ಆದೇಶ ಹೊರಡಿಸಿ ಆಕ್ಷೇಪಣೆ ಪಡೆಯಲಾಗಿದ್ದು, ಒಂದೆರಡು ದಿನದಲ್ಲಿ ಈ ಕುರಿತು ಅಂತಿಮ ಅಧಿಸೂಚನೆ ರಾಜ್ಯ ಸರ್ಕಾರ ಹೊರಡಿಸಲಿದೆ.

ಹೀಗಾಗಿ, 1947 ರಿಂದ 53 ಮೇಯರ್‌ಗಳು ಕುಳಿತು ಬೆಂಗಳೂರಿನ ಆಡಳಿತ ನಡೆಸುತ್ತಿದ್ದ ಕೊಠಡಿ ಇದೀಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸಮಿತಿಯ ಅಧ್ಯಕ್ಷರಾದ ಮುಖ್ಯಮಂತ್ರಿಯ ಕಚೇರಿಯಾಗಿ ಹೈಟೆಕ್‌ ರೂಪ ನೀಡುವ ಕಾಮಗಾರಿ ಶುರುವಾಗಿದೆ.

ಅದರೊಂದಿಗೆ ಸಮಿತಿಯ ಉಪಾಧ್ಯಕ್ಷರಾದ ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಉಪ ಮೇಯರ್‌ ಕಚೇರಿ ನವೀಕರಣಗೊಳ್ಳಲಿದೆ. ಯಥಾ ಪ್ರಕಾರ ಮುಖ್ಯ ಆಯುಕ್ತರು ತಮ್ಮ ಕಚೇರಿಯಲ್ಲಿ ಮುಂದುವರಿಯಲಿದ್ದಾರೆ. ಬಿಬಿಎಂಪಿಯ ಮುಖ್ಯ ಕಚೇರಿಯು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಸಭಾ ಕೊಠಡಿ, ಕಂದಾಯ, ಹವಾಮಾನ ಕ್ರಿಯೋಜನೆ, ಆಡಳಿತ ವಿಭಾಗ ವಿಶೇಷ ಆಯುಕ್ತರ ಕಚೇರಿಗೆ ಮೀಸಲಿಡಲಾಗುತ್ತದೆ. ಇನ್ನೂ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಅನೆಕ್ಸ್‌ 2 ಕಟ್ಟಡವನ್ನು ಬಿಎಂಟಿಎಫ್‌, ಲೆಕ್ಕಪತ್ರ ವಿಭಾಗ, ಕಾನೂನು ಕೋಶ ಸೇರಿದಂತೆ ಮೊದಲಾದ ಕಚೇರಿಗಳಿಗೆ ಮೀಸಲಿಡಲಾಗುತ್ತದೆ.

ಉಳಿದಂತೆ ಅನೆಕ್ಸ್‌ 3 ಕಟ್ಟಡವನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಡಳಿತಕ್ಕೆ ವಹಿಸಲಾಗುತ್ತದೆ. ಎಂ.ಜಿ.ರಸ್ತೆಯ 12 ಮಹಡಿಯಲ್ಲಿ ಯುಟಿಲಿಟಿ ಕಟ್ಟಡದಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಗೆ ಕಾರ್ಯಾಚರಣೆ ಶುರು ಮಾಡಲಿದೆ. ಗೋವಿಂದರಾಜನಗರದ ಕನಕ ಭವನದಲ್ಲಿ ಬೆಂಗಳೂರು ಪಶ್ಚಿಮ ಪಾಲಿಕೆ ಇರಲಿದೆ. ಯಲಹಂಕದ ಶಕ್ತಿ ಸೌಧದಲ್ಲಿ ಬೆಂಗಳೂರು ಉತ್ತರ ಪಾಲಿಕೆಯ ಕಚೇರಿ ಇರಲಿದೆ.

ಸೆ.2ಕ್ಕೆ ಬೆಂ.ದಕ್ಷಿಣ ಪಾಲಿಕೆ ಕಟ್ಟಡಕ್ಕೆ ಶಂಕು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಚೇರಿಯಲ್ಲಿ ತಾತ್ಕಾಲಿಕವಾಗಿ ಜಯನಗರದ ಜಂಟಿ ಆಯುಕ್ತರ ಕಟ್ಟಡದಲ್ಲಿ ಮುಂದುವರಿಸುವುದಕ್ಕೆ ನಿರ್ಧರಿಸಲಾಗಿದೆ. ಹೊಸ ಕಟ್ಟಡವನ್ನು ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿರುವ ನಿವೇಶದಲ್ಲಿ ಸೆ.2ಕ್ಕೆ ಶಂಕುಸ್ಥಾಪನೆ ಮಾಡುವುದಾಗಿ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ವಲಯ ಸಂಖ್ಯೆ 10ಕ್ಕೆ ಏರಿಕೆ

ಬಿಬಿಎಂಪಿಯ ವ್ಯಾಪ್ತಿಯಲ್ಲಿ 8 ವಲಯಗಳ ಮೂಲಕ ಅಡಳಿತ ನಡೆಸಲಾಗುತ್ತಿತ್ತು. ಐದು ಪಾಲಿಕೆ ಸ್ಥಾಪನೆ ಬಳಿಕ ಪ್ರತಿ ಪಾಲಿಕೆಗೆ 2ವಲಯದಂತೆ ವಿಂಗಡಣೆ ಮಾಡಿಕೊಳ್ಳವುದಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ ವಲಯ ಸಂಖ್ಯೆ 10ಕ್ಕೆ ಏರಿಕೆಯಾಗಲಿವೆ.

ಪಂಚ ಪಾಲಿಕೆಗೆ ಸಿಬ್ಬಂದಿ ಹಂಚಿಕೆ ನಕ್ಷೆ ರೆಡಿ ಬಿಬಿಎಂಪಿಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕಾಯಂ ಮತ್ತು ಗುತ್ತಿಗೆ ಅಧಿಕಾರಿ ಸಿಬ್ಬಂದಿ ವಿಭಾಗವಾರು ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಯಾವ ಅಧಿಕಾರಿ ಯಾವ ನಗರ ಪಾಲಿಕೆಯಡಿ ಸೆ.2 ರಿಂದ ಕಾರ್ಯ ನಿರ್ವಹಿಸಬೇಕಾಗಲಿದೆ ಎಂಬುದರ ಬಗ್ಗೆ ರೂಪರೇಷೆ ತಯಾರಿಸಿಕೊಳ್ಳಲಾಗಿದೆ.

ಇನ್ನೂ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸಿರುವ ಆಸ್ತಿ ತೆರಿಗೆ ಮೊತ್ತದಲ್ಲಿ ಇದೀಗ ಗುರುತಿಸಲಾಗಿರುವ ಐದು ನಗರ ಪಾಲಿಕೆಗಳಲ್ಲಿ ಯಾವ ಪಾಲಿಕೆಯಿಂದ ಎಷ್ಟು ಸಂಗ್ರಹವಾಗಿದ್ದು, ಬಾಕಿ ವಸೂಲಿ ಮೊತ್ತದ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.

ಬಾಕಿ ಬಿಲ್‌ ಪಾವತಿ ಹೊಣೆ ನಗರಪಾಲಿಕೆಗಳಿಗೆ

ಬಿಬಿಎಂಪಿಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 1,800 ರಿಂದ 2 ಸಾವಿರ ಕೋಟಿ ರು. ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಬೇಕಾದ ಹೊಣೆಗಾರಿಕೆ ಬಿಬಿಎಂಪಿಯ ಮೇಲಿದೆ. ಇದೀಗ ಹೊಸ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದರೆ ಆ ಮೊತ್ತ ಪಾವತಿ ಹೊಣೆ ಯಾರದ್ದು, ಎಂಬುದರ ಬಗ್ಗೆ ಈಗಾಗಲೇ ಸರ್ಕಾರ ಮತ್ತು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಆಯಾ ಪಾಲಿಕೆಗಳ ಆದಾಯವನ್ನು ಆಯಾ ಪಾಲಿಕೆಗಳಿಗೆ ಹಂಚಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯ ಬಾಕಿ ಬಿಲ್‌ ಮೊತ್ತ ಪಾವತಿಸುವ ಹೊಣೆಗಾರಿಕೆಯನ್ನೂ ಸಂಬಂಧಿಸಿದ ಪಾಲಿಕೆಗೆ ವಹಿಸುವುದಕ್ಕೆ ನಿರ್ಧಸಲಾಗಿದೆ. ಈ ಎಲ್ಲದರ ಕುರಿತು ಗುರುವಾರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿ ಆಧರಿಸಿ ರಾಜ್ಯ ಸರ್ಕಾರವು ಆಗಸ್ಟ್‌ ಕೊನೆ ವಾರದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕುರಿತು ಅಂತಿಮ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಜಿಬಿಎ ಹೆಸರಲ್ಲಿ ಹೊಸ ಬ್ಯಾಂಕ್‌ ಖಾತೆ

ಐದು ಪಾಲಿಕೆ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಹೆಸರಿನಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಹೊಸ ಬ್ಯಾಂಕ್‌ ಖಾತೆ ತೆರೆಯುವುದಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆಗಸ್ಟ್‌ ವೇತನ, ಖರ್ಚು ವೆಚ್ಚ ಅಗತ್ಯವಿರುವ ಹಣ ಬಿಟ್ಟು ಉಳಿದ ಎಲ್ಲಾ ಹಣವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುವುದಕ್ಕೆ ಸೂಚಿಸಲಾಗಿದೆ.

ಮೇಯರ್‌ ಕಚೇರಿ ತೆರವು ಕಾರ್ಯ ಶುರು

ಬೆಂಗಳೂರಿನಲ್ಲಿ ಸ್ಥಳ ಆಡಳಿತ ಶುರುವಾದ ಬಳಿಕ ಆಯ್ಕೆಯಾದ 53 ಮೇಯರ್‌ ಫೋಟೋ, ಹೆಸರು ಸೇರಿದಂತೆ ಎಲ್ಲವನ್ನೂ ತೆರವುಗೊಳಿಸುವ ಕಾರ್ಯ ಆರಂಭಗೊಂಡಿದೆ. ಆ ಎಲ್ಲಾ ಮೇಯರ್‌ ಅವರ ಭಾವಚಿತ್ರ, ಅಧಿಕಾರಾವಧಿ, ಪ್ರಮುಖ ಕೊಡುಗೆಯ ಮಾಹಿತಿಯನ್ನು ಡಿಜಿಟಲೀಕರಣ ಮಾಡಿ ಮ್ಯೂಜಿಯಂ ಸ್ಥಾಪಿಸಿ ಅಲ್ಲಿ ಪ್ರದರ್ಶನ ಮಾಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ