
ಗಂಗಾವತಿ (ಆ.23): ತಾಲೂಕಿನ ಸಮೀಪದ ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.
ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಬ್ಬಲಗುಡ್ಡ, ಹೇಮಗುಡ್ಡ, ಚಿಕ್ಕಬೆಣಕಲ್, ಹಿರೇಬೆಣಕಲ್, ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ವಾಹನಗಳ ಮೂಲಕ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಗತ್ಯವಿಲ್ಲದೆ ಅರಣ್ಯ ಪ್ರದೇಶಕ್ಕೆ ತೆರಳದಂತೆ ಹಾಗೂ ರಾತ್ರಿ ವೇಳೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಗಂಗಾವತಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಹುಲಿ ಪತ್ತೆ?
ಗಂಗಾವತಿ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಗೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ಸ್ಥಳೀಯರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಹಿಂದೆ ದುರ್ಗಾಬೆಟ್ಟ ಹಾಗೂ ವಿರೂಪಾಪುರಗಡ್ಡೆ ಭಾಗಗಳಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದವು. ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆಗಳೂ ನಡೆದಿದ್ದವು. ಇದೀಗ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯ ಇಲಾಖೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಿದೆ.
ಜನರು ಎಚ್ಚರಿಕೆಯಿಂದ ಇರುವಂತೆ ಎಚ್.ಆರ್. ಶ್ರೀನಾಥ ಮನವಿ
ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಿನ ಜಾಗರೂಕತೆ ವಹಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಗಂಗಾವತಿ ತಾಲೂಕಿನಲ್ಲಿ ಈ ಹಿಂದೆಯೂ ಚಿರತೆಗಳು ಜನರ ಮೇಲೆ ದಾಳಿ ನಡೆಸಿದ ಘಟನೆಗಳು ನಡೆದಿವೆ. ಹೀಗಾಗಿ ಹುಲಿ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಮತ್ತೊಂದು ಅಹಿತಕರ ಘಟನೆ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಹುಲಿಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ನಾಳೆ ಅರಣ್ಯ ಇಲಾಖೆ ಕಾರ್ಯಾಚರಣೆ
ಗಂಗಾವತಿ ತಾಲೂಕಿನ ಆನೆಗೊಂದಿ ಅರಣ್ಯ ಪ್ರದೇಶದ ಸರ್ವೆ ನಂ.1ರಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಹುಲಿಯ ಚಲನವಲನದ ಮೇಲೆ ನಿಗಾ ಇರಿಸಿರುವ ಅಧಿಕಾರಿಗಳು, ಆಗಸ್ಟ್ 24ರಂದು ಹುಲಿ ಸೆರೆ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಅವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ
ಹುಲಿ ಸೆರೆ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಪ್ರದೇಶದತ್ತ ತೆರಳದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ, ದನಕರುಗಳನ್ನು ಅರಣ್ಯ ಪ್ರದೇಶಕ್ಕೆ ಮೇಯಲು ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ಹುಲಿಯನ್ನು ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಜನರು ಗುಂಪು ಸೇರುವುದು ಅಥವಾ ಅರಣ್ಯ ಪ್ರದೇಶಕ್ಕೆ ತೆರಳುವುದರಿಂದ ಅಪಾಯ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ
ಹುಲಿ ಸೆರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಮಾನವ-ವನ್ಯಜೀವಿ ಸಂಘರ್ಷಕ್ಕೆ ಅವಕಾಶವಾಗದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಸ್‌ಪಿ ರಾಮ್ ಎಲ್. ಅರಸಿದ್ದಿ ಸೂಚಿಸಿದ್ದಾರೆ. ಸದ್ಯ ಆನೆಗೊಂದಿ ಅರಣ್ಯ ಪ್ರದೇಶದಲ್ಲಿ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆ.24ರ ಕಾರ್ಯಾಚರಣೆಯತ್ತ ಸ್ಥಳೀಯರ ಗಮನ ನೆಟ್ಟಿದೆ.