Kodagu: ಮತ್ತೊಬ್ಬರ ಮೇಲೆ ದಾಳಿಗೆ ಹುಲಿ ಯತ್ನ, 5 ಸಾಕಾನೆ ಬಳಸಿ 150 ಸಿಬ್ಬಂದಿಯಿಂದ ಕಾರ್ಯಾಚರಣೆ

By Suvarna News  |  First Published Feb 14, 2023, 2:18 PM IST

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿ ನರಭಕ್ಷಕನಾಗಿ ಪರಿವರ್ತನೆ ಆಯ್ತಾ ಎನ್ನುವ ಅನುಮಾನ ಮೂಡಿದೆ. ಅದಕ್ಕೆ ಬಲವಾದ ಸಾಕ್ಷ್ಯ ಎನ್ನುವಂತೆ ಹುಲಿ ಮತ್ತೆ ಮತ್ತೆ ಮನುಷ್ಯರನ್ನು ಹುಡುಕಿ ಅಟ್ಯಾಕ್ ಮಾಡುತ್ತಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.14): ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿ ನರಭಕ್ಷಕನಾಗಿ ಪರಿವರ್ತನೆ ಆಯ್ತಾ ಎನ್ನುವ ಅನುಮಾನ ಮೂಡಿದೆ. ಅದಕ್ಕೆ ಬಲವಾದ ಸಾಕ್ಷ್ಯ ಎನ್ನುವಂತೆ ಹುಲಿ ಮತ್ತೆ ಮತ್ತೆ ಮನುಷ್ಯರನ್ನು ಹುಡುಕಿ ಅಟ್ಯಾಕ್ ಮಾಡುತ್ತಿದೆ. ಭಾನುವಾರ ಸಂಜೆ 18 ವರ್ಷದ ಯುವಕ ಚೇತನ್ ಎಂಬಾತನನ್ನು ಕೊಂದು ಬಳಿಕ ಆತನ ಒಂದು ಕಾಲನ್ನು ಸಂಪೂರ್ಣವಾಗಿ ತಿಂದು ಹಾಕಿತ್ತು. ಅಷ್ಟರಲ್ಲಿ ಜನರು ನೋಡಿ ಕೂಗಾಡಿದ್ದರಿಂದ ಯುವಕನನ್ನು ತಿನ್ನುವುದನ್ನು ಬಿಟ್ಟಿತ್ತು. ಭಾನುವಾರ ತಡರಾತ್ರಿಯೇ ಯುವಕನ ಮೃತದೇಹವನ್ನು ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೀಗಾಗಿ ತನ್ನ ಮೊಮ್ಮಗನನ್ನು ನೋಡಲು ಬಂದಿದ್ದ ವೃದ್ಧ ರಾಜು ಎಂಬಾತನನ್ನು ಎಳೆದೊಯ್ಯಲು ಯತ್ನಿಸಿತ್ತು. ಆದರೆ ತೀವ್ರ ಗಾಯಗೊಂಡ ರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸ್ಥಳದಿಂದ ರಾಜು ಅವರ ಮೃತದೇಹವನ್ನು ನಿನ್ನೆ ಸಂಜೆ ತೆರವು ಮಾಡಲಾಗಿತ್ತು. ಆದರೆ ಇಬ್ಬರನ್ನು ಕೊಂದಿದ್ದ ಹುಲಿ ಪಕ್ಕದಲ್ಲಿಯೇ ಇರುವ ತೋಟದ ಮಾಲೀಕ ರಾಜು ಎಂಬ ಮತ್ತೊಬ್ಬರ ಮೇಲೆ ಸೋಮವಾರ ತಡರಾತ್ರಿ ದಾಳಿ ಮಾಡಲು ಯತ್ನಿಸಿದೆ.

Latest Videos

undefined

ತೋಟದೊಳಗೆ ಇರುವ ತಮ್ಮ ಮನೆಯಲ್ಲಿ ರಾತ್ರಿ ಕಿಟಕಿ ಬಳಿ ರಾಜು ಅವರ ಮಲಗಿರುವ ಸಂದರ್ಭ ಹುಲಿ ಕಿಟಕಿ ಮೂಲಕ ಕಾಲು ಹಾಕಿ ರಾಜು ಅವರನ್ನು ಎಳೆದೊಯ್ಯಲು ಪ್ರಯತ್ನಿಸಿದೆ. ಹುಲಿಯನ್ನು ಕಂಡ ಕೂಡಲೇ ರಾಜು ಅವರು ಕಿರುಚಾಡಿ ಸ್ಥಳದಿಂದ ದೂರ ಸರಿದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿ ಮತ್ತೊಂದು ಬಲಿ ತಪ್ಪಿದಂತೆ ಆಗಿದೆ. ಇವೆಲ್ಲವನ್ನು ನೋಡಿದರೆ ಆ ಹುಲಿ ನರಭಕ್ಷಕ ಹುಲಿಯಾಗಿಯೇ ಪರಿವರ್ತನೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ನರಭಕ್ಷಕ ಹುಲಿಗೆ 24 ಗಂಟೆಯಲ್ಲಿ ಒಂದೇ ಕುಟುಂಬದ ಇಬ್ಬರ ಬಲಿ

ಹುಲಿಯು ರಾತ್ರಿ ದಾಳಿ ಮಾಡಲು ಯತ್ನಿಸಿದ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಷ್ಟರಲ್ಲಿ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ. ಬಳಿಕ ಜನರು ಎಚ್ಚರದಿಂದ ಇರುವಂತೆ ಸೂಚಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೋಗಿದ್ದಾರೆ. ಆದರೆ ಹುಲಿ ಬೆಳಿಗ್ಗೆಯೂ ರಾಜು ಅವರ ತೋಟದಲ್ಲಿಯೇ ಇದ್ದು ಘರ್ಜಿಸುತ್ತಿರುವುದಾಗಿ ರಾಜು ಅವರ ಪತ್ನಿ ಶೋಭಾ ಹೇಳಿದ್ದಾರೆ.

ಬೇಟೆಯಾಡಲು ಅನುಮತಿ ಕೊಡಿ: ಹುಲಿ ದಾಳಿಗೆ ಕೊಡಗಿನ ಶಾಸಕ ಬೋಪಯ್ಯ ಆಕ್ರೋಶ

ಸದ್ಯ ಅರಣ್ಯ ಇಲಾಖೆಯ 150 ಸಿಬ್ಬಂದಿ ಸ್ಥಳದಲ್ಲಿಯೇ ಇದ್ದು, ಅಭಿಮನ್ಯು ಸೇರಿದಂತೆ ಒಟ್ಟು ಐದು ಸಾಕಾನೆಗಳ ಸಹಾಯದಿಂದ ಹುಲಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 10 ಕ್ಷಿಪ್ರ ಕಾರ್ಯಪಡೆ ವಾಹನ, ರೈಫಲ್ ಸೇರಿದಂತೆ 20 ಬಗೆಯ ಆಯುಧಗಳನ್ನು ಬಳಸಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಹುಲಿ ಕಾರ್ಯಾಚರಣೆ ಒಂದು ನಾಟಕ ಎಂದು ರೈತ ಮುಖಂಡರು, ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹುಲಿ ದಾಳಿಯಿಂದಾಗಿ ಯಾರೂ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಲೈನ್ ಮನೆಯಲ್ಲಿ ಇದ್ದ ಕಾರ್ಮಿಕರೂ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ನಮ್ಮ ಬೆಳೆಗಳೆಲ್ಲವೂ ನಷ್ಟವಾಗುತ್ತಿವೆ. ಕೊಯ್ಲಿಗೆ ಬಂದಿರುವ ಕಾಫಿ ಕೊಯ್ಲು ಮಾಡಲು ಸಾಧ್ಯವಾಗದೆ ಉದುರಿ ಹೋಗುವ ಸ್ಥಿತಿ ತಲುಪುತ್ತಿದೆ. ಮತ್ತೊಂದೆಡೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗಲು ಭಯಪಡುವಂತಹ ಸ್ಥಿತಿ ಎದುರಾಗಿದೆ. ಇದಕ್ಕೆಲ್ಲಾ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ರೈತ ಮುಖಂಡ ಗಣೇಶ್ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

click me!