ಪ್ರಮುಖ ಸ್ಮಾರಕ ವೀಕ್ಷಣೆ ತಪ್ಪಿದ್ದರಿಂದ ನಿರಾಸೆಯಲ್ಲಿ ಪ್ರವಾಸಿಗರು| ಎರಡು ಸಾವಿರ ಟಿಕೆಟ್ ಬಳಿಕ ಸಾಫ್ಟವೇರ್ ತನ್ನಿಂದ ತಾನೇ ಸ್ಥಗಿತ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ|
ಹೊಸಪೇಟೆ(ನ.12): ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ವೀಕ್ಷಣೆಗೆ ಲಾಕ್‌ಡೌನ್ ಸಡಿಲಿಕೆ ಬಳಿಕ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಆದರೆ, ದಿನಕ್ಕೆ ಬರೀ 2000 ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ. ಹೌದು, ಕೋವಿಡ್ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ದಿನಕ್ಕೆ 2000 ಟಿಕೆಟ್ ಮಾತ್ರ ನೀಡುತ್ತಿದೆ. ಎರಡು ಸಾವಿರ ಟಿಕೆಟ್ ಬಳಿಕ ಸಾಫ್ಟವೇರ್ ತನ್ನಿಂದ ತಾನೇ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಹಂಪಿಗೆ ಆಗಮಿಸುವ ಪ್ರವಾಸಿಗರು ಪ್ರಮುಖ ಸ್ಮಾರಕಗಳ ದರ್ಶನವಿಲ್ಲದೇ ಮರಳುವಂತಾಗಿದೆ.
ಹಂಪಿಯ ಪ್ರಮುಖ ಸ್ಮಾರಕಗಳಾದ ವಿಜಯ ವಿಠ್ಠಲ, ಕಮಲ ಮಹಲ್, ಕಲ್ಲಿನ ತೇರು, ಆನೆಲಾಯ ಸೇರಿದಂತೆ ಪ್ರಮುಖ ಸ್ಮಾರಕಗಳ ವೀಕ್ಷಣೆಗೆ ಟಿಕೆಟ್ ದೊರೆಯದೇ ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ. ಹೀಗಿದ್ದರೂ ಭಾರತೀಯ ಪುರಾತತ್ವ ಇಲಾಖೆ ನಿಯಮದಲ್ಲಿ ಸಡಿಲಿಕೆ ಮಾಡಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಪ್ರವಾಸಿ ತಾಣ ವೀಕ್ಷಣೆಗೆ ಅವಕಾಶ ನೀಡಿವೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ಮಾತ್ರ ನಿತ್ಯ 2000 ಟಿಕೆಟ್ ಮಾತ್ರ ನೀಡುತ್ತಿದೆ. ವೀಕೆಂಡ್ ಹಾಗೂ ಸಾಲು ಸಾಲು ರಜೆ ವೇಳೆ ಪ್ರವಾಸಿಗರ ದಂಡು ಹಂಪಿಗೆ ಹರಿದು ಬರುತ್ತಿದೆ. ಪ್ರವಾಸಿಗರಿಗೆ ಟಿಕೆಟ್ ದೊರೆಯದೇ ನಿರಾಸೆಯಿಂದಲೇ ಮರಳುವಂತಾಗಿದೆ.
ವೀಕೆಂಡ್: ವಿಶ್ವವಿಖ್ಯಾತ ಹಂಪಿಗೆ ಹರಿದು ಬಂದ ಪ್ರವಾಸಿಗರು..!
ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸುತ್ತಿದ್ದಾರೆ. ಇಲ್ಲಿಯ ಸ್ಮಾರಕಗಳ ಸೊಬಗು ಕಂಡು ಪುಳಕಿತರಾಗುತ್ತಿದ್ದಾರೆ. ಈ ಮಧ್ಯೆ ಪ್ರಮುಖ ಸ್ಮಾರಕಗಳ ವೀಕ್ಷಣೆಗೆ ಟಿಕೆಟ್ ದೊರೆಯದೇ ಮರಳುತ್ತಿದ್ದು, ಇದು ಪ್ರವಾಸೋದ್ಯಮದ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಸಂಬಂಧಿಸಿದ ಇಲಾಖೆ ಕ್ರಮವಹಿಸಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಸ್ಪಾಟ್ ಟಿಕೆಟ್ ನೀಡಿ
ಹಂಪಿಯಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದ್ದು, ಇದರಿಂದ ಗ್ರಾಮೀಣ ಪ್ರದೇಶದಿಂದ ಬರುವವರು ಹಾಗೂ ಆಂಡ್ರ್ಯಾಯ್ಡ್ ಮೊಬೈಲ್ ರಹಿತ ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ. ಹೀಗಾಗಿ ನಗದು ಹಣ ಸ್ವೀಕರಿಸಿ ಸ್ಪಾಟ್ ಟಿಕೆಟ್ ನೀಡಬೇಕು ಎಂದು ಪ್ರವಾಸಿಗರು ಆಗ್ರಹಿಸಿದರು.
ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ವೀಕೆಂಡ್ ವೇಳೆ ಟಿಕೆಟ್ ದೊರೆಯುತ್ತಿಲ್ಲ. ಲಾಕ್‌ಡೌನ್ ಸಡಿಲಿಕೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಟಿಕೆಟ್ ನಿಯಮದಲ್ಲಿ ಸಡಿಲಿಕೆ ಮಾಡಬೇಕು ಎಂದು ಹಂಪಿ ಪ್ರವಾಸಿ ಮಾರ್ಗದರ್ಶಿ ಎಸ್. ಶೇಖರಗೌಡ ತಿಳಿಸಿದ್ದಾರೆ.