ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಘಾರ್ಲಿ ಗ್ರಾಮದ ಮೂವರು ಮಹಿಳೆಯರ ದುರ್ಮರಣ
ಖಾನಾಪುರ(ಜ.21): ಕೃಷಿ ಕೆಲಸ ಮುಗಿಸಿ ಮನೆಗಳತ್ತ ಹೊರಟಿದ್ದ ಪಾದಚಾರಿಗಳ ಮೇಲೆ ಬೋಲೇರೋ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಕೃಷಿ ಕಾರ್ಮಿಕ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ರಾಮನಗರ ಬಳಿಯ ಬೆಳಗಾವಿ-ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಗುಂಜಿ ಹೋಬಳಿಯ ಘಾರ್ಲಿ ಗ್ರಾಮದ ದುರ್ಗಾ ಭುಜಂಗ ಕಾಳಸೇಕರ (58), ತುಳಸಿ ತಮ್ಮಣ್ಣ ಗಾವಡೆ (52) ಮತ್ತು ಪಾರ್ವತಿ ಚೂಡಪ್ಪ ಗಾವಡೆ (60) ಸಾವನ್ನಪ್ಪಿದ್ದಾರೆ. ಮಂಜುಳಾ ಚಂದ್ರಕಾಂತ ಕೋಳಸೇಕರ ಮತ್ತು ಬಿಪಿನ್ ದಳವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ.
ಪಿಕ್ನಿಕ್ ಮುಗಿಸಿ ಮರಳುತ್ತಿದ್ದ ಕಾಲೇಜು ಬಸ್ ಅಪಘಾತ, ವಿದ್ಯುತ್ ಕಂಬಕ್ಕೆ ಡಿಕ್ಕಾಯಾಗಿ ಪಲ್ಟಿ!
ಧಾರವಾಡದಿಂದ ಗೋವಾದತ್ತ ಹೊರಟಿದ್ದ ತಮಿಳುನಾಡು ರಾಜ್ಯದ ನೋಂದಣಿಯ ಬೋಲೇರೋ ವಾಹನದ ಚಾಲಕ ರಾಮನಗರ ಗ್ರಾಮದ ಬಳಿ ಅತಿವೇಗದಿಂದ ಬಂದು ರಸ್ತೆ ಬದಿ ಸಾಗುತ್ತಿದ್ದ ನಾಲ್ವರು ಮಹಿಳೆಯರಿಗೆ ಮತ್ತು ಓರ್ವ ಪುರುಷನಿಗೆ ಹಿಂದಿನಿಂದ ಗುದ್ದಿದ್ದರಿಂದ ಈ ಅವಘಡ ಸಂಭವಿಸಿದೆ. ಅಪಘಾತದ ರಭಸಕ್ಕೆ ಐವರೂ ರಸ್ತೆಯ ಅಕ್ಕಪಕ್ಕದ ಪೊದೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಮೂವರು ಮಹಿಳೆಯರ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ತ್ಯಜಿಸಿದ್ದಾರೆ.
ಅಪಘಾತದ ತೀವ್ರತೆಗೆ ಇಡೀ ಪ್ರದೇಶ ರಕ್ತಸಿಕ್ತವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಸ್ಥಳೀಯರು ಬೋಲೇರೋ ವಾಹನವನ್ನು ತಡೆದು ವಾಹನದಲ್ಲಿದ್ದ ಚಾಲಕ ಮತ್ತು ಇತರೆ ಪ್ರಯಾಣಿಕರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತರ ಶವಗಳನ್ನು ರಾಮನಗರ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಕೈಗೊಂಡರು. ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.