ಗೋಕಾಕ: ಮೂವರು ರಮೇಶ್‌ ಬೆಂಬಲಿಗರ ಆತ್ಮಹತ್ಯೆ ಯತ್ನ

By Kannadaprabha NewsFirst Published Mar 6, 2021, 8:09 AM IST
Highlights

ಆತ್ಮಹತ್ಯೆಗೆ ಯತ್ನಿಸಿದ ಮೂವರು ಅಭಿಮಾನಿಗಳು| ಟೈರ್‌ಗೆ ಬೆಂಕಿ, ಹೆದ್ದಾರಿ ತಡೆ| ಬೆಳಗಾವಿ ಜಿಲ್ಲೆಯ ಗೋಕಾಕ ನಗರ| ಪ್ರತಿಭಟನೆಯಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ - ಕಾಲೇಜುಗಳಿಗೆ ತೆರಳಲು ವಿಳಂಬ| 

ಗೋಕಾಕ(ಮಾ.06): ಸಿಡಿ ಪ್ರಕರಣವೊಂದರಲ್ಲಿ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ಕ್ಷೇತ್ರ ಗೋಕಾಕದಲ್ಲಿ ಉಂಟಾಗಿರುವ ಅವರ ಬೆಂಬಲಿಗರ ಆಕ್ರೋಶ, ಹತಾಶೆ ಇನ್ನೂ ತಣಿದಂತೆ ಕಾಣುತ್ತಿಲ್ಲ. ಶುಕ್ರವಾರ ಕೂಡ ಗೋಕಾಕ ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಮೂರ್ನಾಲ್ಕು ಪ್ರತಿಭಟನೆ ನಡೆದಿದ್ದು ಮೂವರು ಅಭಿಮಾನಿಗಳು ಆತ್ಮಹತ್ಯೆಗೂ ಯತ್ನಿಸಿರುವ ಅತಿರೇಕದ ಘಟನೆಗಳೂ ವರದಿಯಾಗಿವೆ.

ಗೋಕಾಕ ತಾಲೂಕಿನ ಉಪ್ಪಾರಹಟ್ಟಿ, ಮಾಲದಿನ್ನಿ, ಬೆಣಚಿನಮರ್ಡಿ ಗ್ರಾಮದ ರಮೇಶ ಅಭಿಮಾನಿಗಳು ಯರಗಟ್ಟಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಜಾರಕಿಹೊಳಿ ಅಭಿಮಾನಿಗಳಾದ ಕಲ್ಲಪ್ಪ ಕಿಚಡಿ, ಲಕ್ಕಪ್ಪ ಕಡಕೋಳ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದರು. ನಂತರ ಅಸ್ವಸ್ಥಗೊಂಡ ಯುವಕರನ್ನು ಆ್ಯಂಬುಲೆನ್ಸ್‌ ಮುಖಾಂತರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಸತತ ಎರಡು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡು ಸವಾರರು ತೀವ್ರ ಪರದಾಡುವಂತಾಯಿತು. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ - ಕಾಲೇಜುಗಳಿಗೆ ತೆರಳಲು ವಿಳಂಬವಾಯಿತು. ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರಿಂದ ಗೋಕಾಕ ನಗರದ ಪ್ರಮುಖ ವೃತ್ತಗಳು ಬಿಕೋ ಎನ್ನುತ್ತಿದ್ದವು.

ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋದಲ್ಲಿ ಮಚ್ಚೆ ಹುಡುಕಿದ ಆಪ್ತ ಶಾಸಕ

ಮತ್ತೊಂದು ತಂಡ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸುತ್ತಿರುವ ಸಂದರ್ಭದಲ್ಲಿ ಟೈರ್‌ಗೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಶಾಸಕರ ಬೆಂಬಲಿಗ ಗಣೇಶ ರಜಪೂತ(55) ಎಂಬಾತ ಬೆಂಕಿ ಹತ್ತಿ ಉರಿಯುತ್ತಿದ್ದಾಗಲೇ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಆತನನ್ನು ರಕ್ಷಿಸಿ ಸಮೀಪದ ಸರ್ಕಾರಿ ಆಸ್ವತ್ರೆಗೆ ದಾಖಲಿಸಿದರು.

ಇನ್ನು ಕೊಣ್ಣೂರ ಗ್ರಾಮದ ವ್ಯಾಪ್ತಿಯ ಸಾವಿರಾರು ಅಭಿಮಾನಿಗಳು ಸುಮಾರು 15 ಕಿ.ಮೀ. ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಅಂಜುಮನ್‌ ಇಸ್ಲಾಂ ಕಮೀಟಿಯ ನೂರಾರು ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
 

click me!