24 ತಾಸು ಸತತ ಕಾರ್ಯಾಚರಣೆ ಬಳಿಕ ಬೆಂಕಿ ತಹಬದಿಗೆ| ಈವರೆಗೆ ಬೆಳ್ಳಂದೂರಿನಲ್ಲಿ ನಾಲ್ಕಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡ ಬೆಂಕಿ| ಈ ಬಾರಿಯೂ ನೀರಿನಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ ಎಂದು ಆತಂಕಕ್ಕೊಳಗಾಗಿದ್ದ ಸ್ಥಳೀಯರು|
ಬೆಂಗಳೂರು(ಮಾ.06): ಬೆಳ್ಳಂದೂರು ಕೆರೆಯಂಗಳದಲ್ಲಿದ್ದ ಕಸದ ರಾಶಿಗೆ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಯನ್ನು ಸತತ 24 ತಾಸಿನ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನದ ಕಸದ ರಾಶಿಗೆ ಬೆಂಕಿ ಹಚ್ಚಲಾಗಿದ್ದು, ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಸಂಜೆ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಹರಡಿದೆ, ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಗುರುವಾರ ರಾತ್ರಿ ಬೆಂಕಿ ನಂದಿಸಿದ್ದಾರೆ. ಆದರೂ ಕಸದ ರಾಶಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆಯಾಡುತ್ತಲೇ ಇತ್ತು. ಹೀಗಾಗಿ ಶುಕ್ರವಾರದ ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ಬೆಂಕಿ ಆರಿಸಲಾಗಿದೆ.
ಲಾಕ್‌ಡೌನ್‌ನಿಂದ ಬೆಳ್ಳಂದೂರು ಕೆರೆ ನೊರೆ ಮುಕ್ತ: ಮನುಷ್ಯ ಮಾಡದ್ದನ್ನ ಕೊರೋನಾ ಮಾಡ್ತು..!
ಕೆರೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುತ್ತಲಿನ ಪ್ರದೇಶ ಹೊಗೆಮಯವಾಗಿತ್ತು. ಆರಂಭದಲ್ಲಿ ಕೆರೆ ನೀರಿನಲ್ಲಿ ಈ ಹಿಂದೆ ಕಾಣಿಸಿಕೊಂಡ ಹಾಗೆ ಈ ಬಾರಿಯೂ ನೀರಿನಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ, ಬೆಂಕಿಗೆ ಕೆರೆಯಲ್ಲಿರುವ ರಾಸಾಯನಿಕವಲ್ಲ, ಕಸದ ರಾಶಿಗೆ ಕೆಲವರು ಬೆಂಕಿ ಹಚ್ಚಿದ್ದರಿಂದ ಅಗ್ನಿ ಕಾಣಿಸಿಕೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟನೆ ನೀಡಿದ ಬಳಿಕ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಪೀಠದ ಸೂಚನೆ ಬಳಿಕ ಬಿಬಿಎಂಪಿಯು ಕೆರೆ ಮೇಲೆ ನಿಗಾ ವಹಿಸಲು ಮಾರ್ಷಲ್‌ಗಳನ್ನು ನೇಮಕ ಮಾಡಿದೆ. ಆದರೂ ಪ್ರಕರಣ ನಡೆದಿರುವುದು ಮಾರ್ಷಲ್‌ಗಳ ನಿರ್ಲಕ್ಷ್ಯತನ ತೋರುತ್ತದೆ. 2018, 2016 ಸೇರಿದಂತೆ ಈವರೆಗೆ ಬೆಳ್ಳಂದೂರಿನಲ್ಲಿ ನಾಲ್ಕಕ್ಕೂ ಹೆಚ್ಚು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಆತಂಕಕ್ಕೆ ಒಳಗಾಗುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.