ಬೆಂಗಳೂರು ಸೇರಿದಂತೆ ಆಂಧ್ರ-ತೆಲಂಗಾಣ ರಾಜ್ಯಗಳಿಗೆ ಪೂರೈಕೆ| ಹಂಪಿ ಪರಿಸರಲ್ಲಿದ್ದ ವಿದೇಶಿಯರಿಗೆ ಹೆಚ್ಚು ಪೂರೈಕೆ| ಜಿಲ್ಲೆ, ಹೊರ ರಾಜ್ಯ ದಾಟಿದ ಗಣಿ ಊರಿನ ಗಾಂಜಾ ಘಮುಲು| ಗಾಂಜಾ ದಾಸ್ತಾನು ಮೇಲೆ ಪೊಲೀಸ್ ದಾಳಿ| 11 ಲಕ್ಷ ಮೌಲ್ಯದ ಗಾಂಜಾ ವಶ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಸೆ.20): ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಗಾಂಜಾ ಬೆಳೆ ದೂರದ ಬೆಂಗಳೂರಿಗೂ ಸರಬರಾಜಾಗುತ್ತಿತ್ತು. ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಖದೀಮರು ಕದ್ದುಮುಚ್ಚಿ ಗಾಂಜಾ ಬೆಳೆಯುತ್ತಿದ್ದ ಜಿಲ್ಲೆಯ ಬೆಳೆಗಾರರ ಜತೆ ನಂಟು ಹೊಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಗಣಿ ಜಿಲ್ಲೆಯ ಗಾಂಜಾ ಘಮುಲು ರಾಜ್ಯ-ಹೊರ ರಾಜ್ಯಗಳಿಗೂ ಹರಡಿಕೊಂಡಿದೆ ಎಂದು ಗೊತ್ತಾಗಿದೆ.
ಜಿಲ್ಲೆಯಲ್ಲಿ ಗಾಂಜಾ ವಹಿವಾಟು ಮಾಫಿಯಾ ಆಗಿ ಬದಲಾಗಿಲ್ಲವಾದರೂ ಅನೇಕರು ಮಧ್ಯವರ್ತಿಗಳ ಮೂಲಕ ಗಾಂಜಾ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಗೌಪ್ಯವಾಗಿ ಸೇರುತ್ತಿತ್ತು ಎಂದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ಹೆಸರೇಳಬಯಸದ ಪೊಲೀಸ್ ಮೂಲಗಳು ಇದನ್ನು ಖಚಿತಪಡಿಸುತ್ತವೆ. ಗಾಂಜಾ ವ್ಯವಹಾರ ವಾರ್ಷಿಕ ಕೋಟ್ಯಂತರ ರು. ಮೀರುತ್ತಿತ್ತು. ಆದರೆ, ಕದ್ದುಮುಚ್ಚಿ ನಡೆಯುವ ವ್ಯವಹಾರವಾಗಿದ್ದರಿಂದ ಇದು ಹೆಚ್ಚು ಬೆಳಕಿಗೆ ಬಂದಿಲ್ಲ. ಬಂದರೂ ಪ್ರಭಾವಿಗಳ ಬಳಸಿಕೊಂಡು ಪ್ರಕರಣ ಮುಚ್ಚಿ ಹಾಕಲಾಗುತ್ತಿತ್ತು. ದುಡ್ಡಿನ ಆಸೆಗೆ ಗಾಂಜಾ ಬೆಳೆಯುವ ಅಮಾಯಕರು ಮಾತ್ರ ಸಿಕ್ಕಿ ಹಾಕಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
'ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಮತ್ತೊಂದು ಜಿಲ್ಲೆ'
ಹಂಪಿಯ ಹಿಪ್ಪಿಗಳಿಗೆ ಗಾಂಜಾ ಪೂರೈಕೆ!
ಗಾಂಜಾ ಬೆಳೆಯುವ ಪ್ರಕರಣಗಳು ಹೊಸದಲ್ಲ. ಅನೇಕ ವರ್ಷಗಳಿಂದಲೂ ಕದ್ದುಮುಚ್ಚಿ ನಡೆಯುತ್ತಿದೆ. ಈ ಹಿಂದೆ ಗಾಂಜಾ ಬೆಳೆಯುತ್ತಿದ್ದವರು ಸ್ಥಳೀಯವಾಗಿ ವ್ಯಾಪಾರ ಕುದುರಿಸಿಕೊಳ್ಳುತ್ತಿದ್ದರು. ಹಂಪಿ ಪರಿಸರದಲ್ಲಿ ಯಥೇಚ್ಛವಾಗಿ ಗಾಂಜಾ ಮಾರಾಟವಾಗುತ್ತಿತ್ತು. ಗಾಂಜಾ ಬಳಕೆದಾರರ ಪೈಕಿ ವಿದೇಶಿಗರೇ ಹೆಚ್ಚು. ಹಂಪಿ ಸುತ್ತಮುತ್ತ ಸೇರಿದಂತೆ ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡೆಯಲ್ಲಿ ವಾಸ್ತವ್ಯ ಹೂಡುತ್ತಿದ್ದ ವಿದೇಶಿಯರಿಗೆ ಜಿಲ್ಲೆಯ ವಿವಿಧೆಡೆಯಿಂದಲೇ ಗಾಂಜಾ ಪೂರೈಕೆಯಾಗುತ್ತಿತ್ತು. ವಿದೇಶಿಯರಿಗೆ ಬೇಕು-ಬೇಡಗಳನ್ನು ಪೂರೈಸಲೆಂದೇ ಸ್ಥಳೀಯವಾಗಿ ಅನೇಕರಿದ್ದರು. ಆದರೆ, ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆದ ಗಾಂಜಾ ಬೆಂಗಳೂರು ಹಾಗೂ ಆಂಧ್ರ-ತೆಲಂಗಾಣ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಬಳ್ಳಾರಿ ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿ ಜಿಲ್ಲೆಯಾಗಿರುವುದರಿಂದ ಗಾಂಜಾ ಸದ್ದಿಲ್ಲದೆ ಸಾಗಿಸುವುದು ಸುಲಭ ಎಂಬ ಕಾರಣಕ್ಕಾಗಿಯೇ ಹೊರ ರಾಜ್ಯಗಳ ಗಾಂಜಾ ಮಾಫಿಯಾ ಕೂಡ ಬಳ್ಳಾರಿಯನ್ನು ಹೆಚ್ಚು ನೆಚ್ಚಿಕೊಂಡಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಈ ವರ್ಷದಲ್ಲಿ 31 ಜನರ ಬಂಧನ
ಕಳೆದ 2019ರ ಜನವರಿಯಿಂದ ಡಿಸೆಂಬರ್ ವರೆಗೆ ಜಿಲ್ಲೆಯ ವಿವಿಧೆಡೆ ಬೆಳೆದ 58 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪೈಕಿ 26 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 13 ಪ್ರಕರಣಗಳಲ್ಲಿ 10 ಚಾಜ್‌ರ್‍ಶೀಟ್ ಆಗಿದೆ. 2020ರ ಜನವರಿಯಿಂದ ಸೆಪ್ಟೆಂಬರ್ ಮೊದಲ ವಾರದ ವರೆಗೆ 56 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 31 ಜನರ ಬಂಧನವಾಗಿದೆ. ಇದು ಪೊಲೀಸರಿಗೆ ಸಿಕ್ಕ ಲೆಕ್ಕವಷ್ಟೇ. ಆದರೆ, ಇದರ ಹತ್ತಾರುಪಟ್ಟು ಬೆಳೆದ ಗಾಂಜಾ ಸದ್ದಿಲ್ಲದೆ ಮಾರಾಟವಾಗಿದೆ. ಇಂದಿಗೂ ಮಾರಾಟವಾಗುತ್ತಿದೆ ಎಂದು ತಿಳಿದು ಬರುತ್ತದೆ.
ಗಾಂಜಾ ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳ ಒಂದೇ ವಾರದಲ್ಲಿ 16 ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಹೇಳಿದ್ದಾರೆ.
ಗಾಂಜಾ ದಾಸ್ತಾನು ಮೇಲೆ ಪೊಲೀಸ್ ದಾಳಿ: 11 ಲಕ್ಷ ಮೌಲ್ಯದ ಗಾಂಜಾ ವಶ
ಇಲ್ಲಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ . 11,19,200 ಮೌಲ್ಯದ 56 ಕೆಜಿ 170 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿವೈಎಸ್ಪಿ ವಿ. ರಘುಕುಮಾರ್, ನಗರದ ಬಿಟಿಆರ್‌ನಗರದಲ್ಲಿ ಗಾಂಜಾ ದಾಸ್ತಾನು ಮಾಡಿದ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 9.94 ಲಕ್ಷ ಮೌಲ್ಯದ 49 ಕೆಜಿ 700 ಗ್ರಾಂ. ಗಾಂಜಾ ಹಾಗೂ ಎರಡು ಮೊಬೈಲ್ ಮತ್ತು 520 ನಗದು ವಶಕ್ಕೆ ಪಡೆದು, ನಗರವಾಸಿಗಳಾದ ಹೇಮಲತಾ ಹಾಗೂ ಬಳ್ಳಾರಿ ಜಾಗೃತಿ ನಗರ ನಿವಾಸಿ ಇರ್ಫಾನ್ ಅಲಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿಯ ಎಂ.ಎಚ್. ಮಧು, ತಾಲೂಕಿನ ಧರ್ಮಸಾಗರ ಗ್ರಾಮದ ಎಂ. ಸುರೇಶ್ ಕುಮಾರ್ ಎಂಬುವರನ್ನು ವಶಕ್ಕೆ ಪಡೆದು 1 ಲಕ್ಷದ 5,200 ರು. ಮೌಲ್ಯದ 5 ಕೆಜಿ 260 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ.
ನಗರ ಠಾಣೆ ವ್ಯಾಪ್ತಿಯಲ್ಲಿ ನಗರದ ಕನಕದಾಸ ವೃತ್ತದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ನಡೆಸಿ ನಗರದ ವಾಸಿಗಳಾದ ಜೆ. ಹನುಮೇಶ್, ಜೆ. ಷಣ್ಮುಖ ಎಂಬವರನ್ನು ವಶಕ್ಕೆ ಪಡೆದು, 20 ಸಾವಿರ ಮೌಲ್ಯದ 1 ಕೆ.ಜಿ. 210 ಗ್ರಾಂ. ಗಾಂಜಾ, ಒಂದು ಬೈಕ್ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಎಸ್ಪಿ ಸೈದುಲು ಅದಾವತ್, ಹೆಚ್ಚುವರಿ ಎಸ್ಪಿ ಕೆ. ಲಾವಣ್ಯ ಮಾರ್ಗದರ್ಶನದಲ್ಲಿ ಪಿಐಗಳಾದ ಶ್ರೀನಿವಾಸ್ ಮೇಟಿ, ಪಿಎಸ್‌ಐಗಳಾದ ಬಸವರಾಜ್, ಪಿ. ಜಡಿಯಪ್ಪ, ಯಲ್ಲಪ್ಪ ಕದರಳ್ಳಿ ಹಾಗೂ ಮೂರು ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.