ಭತ್ತದ ಬೆಳೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿದ್ದು, ಇದಕ್ಕೆ ಕೊರೋನಾ ಎಫೆಕ್ಟ್ ಕಾರಣವಾಗಿದೆ.
ಉಡುಪಿ (ಸೆ.20): ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕಳೆದ ವರ್ಷಕ್ಕಿಂತಲೂ 1026 ಹೆಕ್ಟೇರ್‌ನಷ್ಟುಹೆಚ್ಚು ವಿಸ್ತೀರ್ಣದಲ್ಲಿ ಭತ್ತ ಬೆಳೆಯಲಾಗಿದೆ. ಇದು ಕೊರೋನಾ ಮಹಾಮಾರಿಯ ಪಾಸಿಟಿವ್ ಪರಿಣಾಮ!
ಕೊರೋನಾ ಹೊಡೆತಕ್ಕೆ ಎಲ್ಲ ಕ್ಷೇತ್ರಗಳಲ್ಲಿ ನೆಗೆಟಿವ್ ಪರಿಣಾಮಗಳೇ ಆಗುತಿದ್ದರೆ, ಉಡುಪಿ ಜಿಲ್ಲೆಯ ಭತ್ತ ಬಳೆಯುವ ಕ್ಷೇತ್ರದಲ್ಲಿ ಮಾತ್ರ ಪಾಸಿಟಿವ್ ಪರಿಣಾಮ ಆಗಿದೆ. ಆರ್ಥಿಕ ನಷ್ಟ, ಕಾರ್ಮಿಕರ ಕೊರತೆ, ನೀರಾವರಿ ಕೊರತೆಯಿಂದಾಗಿ ಕೃಷಿಕರು ಬತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
'ಸಾವಿರಾರು ಎಕರೆ ರೈತರ ಫಲವತ್ತಾದ ಭೂಮಿ ಸರ್ಕಾರದ ಸ್ವಾಧೀನಕ್ಕೆ'
ಕೃಷಿಕರ ಮಕ್ಕಳು ಉದ್ಯೋಗಕ್ಕಾಗಿ ಮನೆ ಬಿಟ್ಟು ಪೇಟೆ ಸೇರುತ್ತಿದ್ದಾರೆ. ಭತ್ತದ ಗದ್ದೆಗಳು ವಾಣಿಜ್ಯ ಬೆಳೆಗಳ ತೋಟಗಳಾಗುತ್ತಿವೆ ಅಥವಾ ಮನೆ ಕಟ್ಟುವ ಸೈಟುಗಳಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪ್ರತಿವರ್ಷ ಜಿಲ್ಲೆಯಲ್ಲಿ 100 - 200 ಹೆಕ್ಟೇರ್‌ಗಳಷ್ಟು ಭತ್ತ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ ಅಥವಾ ಹಡಿಲು (ಪಾಳು) ಬೀಳುತ್ತಿದೆ.
ಆದರೆ, ಈ ವರ್ಷ ಏಕಾಏಕಿ ಸುಮಾರು 1026 ಹೆಕ್ಟೇರ್‌ಗಳಷ್ಟು ಭತ್ತದ ಬೆಳೆ ಹೆಚ್ಚಾಗಿದೆ. ಕೊರೋನಾದಿಂದಾಗಿ, ಉದ್ಯೋಗಕ್ಕಾಗಿ ಹಳ್ಳಿ ಬಿಟ್ಟು ಪೇಟೆ ಸೇರಿದ್ದ ಯುವಜನರು, ಉದ್ಯೋಗ ಕಳೆದುಕೊಂಡು ಮರಳಿ ಹಳ್ಳಿಗೆ ಬಂದಿರುವ ಪರಿಣಾಮ ಕೃಷಿ ಬೆಳೆ ಹಚ್ಚಾಗಿದೆ.