Chikkamagaluru: ಮತ್ತೆ ಮೂವರ ಮೇಲೆ ಒಂಟಿ ಕೊಂಬಿನ ಆನೆ ದಾಳಿ: ಗಂಭೀರ ಗಾಯ

By Sathish Kumar KH  |  First Published Dec 26, 2022, 5:17 PM IST

ಚಿಕ್ಕಮಗಳೂರಿನಲ್ಲಿ ಮುಂದುವರೆದ ಕಾಡಾನೆ ದಾಳಿ ಹಾವಳಿ
ರಸ್ತೆ ಬದಿಯಲ್ಲಿ ಟೆಂಟ್‌ನಲ್ಲಿ ವಾಸವಿದ್ದ ದಂಪತಿ ಮೇಲೆ ದಾಳಿ 
ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಕಾರ್ಮಿಕರು
ಸ್ಥಳೀಯರಿಂದ ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಡಿ.26): ಕಾಫಿನಾಡು ಚಿಕ್ಕಮಗಳೂರಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದ ಘಟನೆ ನಡೆದು 24 ಗಂಟೆಯೂ ಆಗಿಲ್ಲ. ಇಂದು ಬೆಳಗ್ಗೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡು ವಾಸವಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಟಿ ಕೊಂಬಿನ ಆನೆಯೇ ದಾಳಿ ಮಾಡಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಚಿಕ್ಕಮಗಳೂರು ಜಿಲ್ಲೆಯಲ್ಲಿ ತರೀಕೆರೆ ತಾಲೂಕಿನಲ್ಲಿ ನಿನ್ನೆ ತಾನೇ ರಾಗಿಬಸವನಹಳ್ಳಿಯಲ್ಲಿ ಹೊಲದಲ್ಲಿ ರಾಗಿಯನ್ನು ಕಾಯಲು ಹೊಲಕ್ಕೆ ಹೋಗಿದ್ದ 65 ವರ್ಷದ ಈರಣ್ಣ ಎಂಬುವರನ್ನ ಕಾಡಾನೆ ತುಳಿದು ಕೊಂದಿತ್ತು. ಆದರೆ ಆನೆಯ ಪುಂಡಾಟಕ್ಕೆ ರೈತನು ಸಾವನ್ನಪ್ಪಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ, ಈ ಘಟನೆ ನಡೆದ ಮರುದಿನವೇ ಅಂದರೆ ಇಂದು ಪುನಃ ರಸ್ತೆಯ ಬದಿಯಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡು ವಾಸವಿದ್ದ ಮೂವರ ಮೇಲೆ ಕಾಡಾನೆ ದಾಳಿ ಮಾಡಿದೆ.

ದಂಪತಿಗಳ ಮೇಲೆ ಕಾಡಾನೆ ದಾಳಿ : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಕೂಲಿ ಕೆಲಸಕ್ಕೆಂದು ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಬಂದಿದ್ದರು. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಟೆಂಟ್ ಹಾಕಿಕೊಂಡು ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ದಂಪತಿ ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿ ಮೂವರು ಸಾವಿನಿಂದ ಪಾರಾಗಿದ್ದಾರೆ. ನಾಗವಲ್ಲಿ ಹಾಗೂ ಗಂಡುಗುಸೆ ದಂಪತಿಗೆ ತೀವ್ರ ಗಾಯವಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Chikkamagaluru: ರಾಗಿ ಫಸಲು ಕಾಯುತ್ತಾ ಗುಡಿಸಲಲ್ಲಿ ಮಲಗಿದ್ದವನನ್ನು ಬಲಿ ಪಡೆದ ಕಾಡಾನೆ

ಪ್ರಾಣಾಪಾಯದಿಂದ ಪಾರು: ಇಂದು ಬೆಳಗ್ಗಿನ ಜಾವ 4.30 ರ ಸಮಯದಲ್ಲಿ ಕಾಡಾನೆ ಕೋಗಿಲೆ, ಕೊಟ್ರಕೆರೆ ಕಡೆಯಿಂದ ಬಣಕಲ್ ಸಬ್ಲಿ ಕಡೆಗೆ ಹಾದುಹೋಗುವಾಗ ರಸ್ತೆಬದಿಯ ಗುಡಿಸಲಿನ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಆನೆ ದಾಳಿಯ ವಿಚಾರ ತಿಳಿದು ಘಟನಾ ಸ್ಥಳಕ್ಕರೆ ಆಗಮಿಸಿದ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡವರನ್ನು ಬಣಕಲ್ ಸ್ನೇಕ್ ಆರೀಫ್ ಅಂಬುಲೆನ್ಸ್ ಮೂಲಕ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗಾಯಗೊಂಡವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ. 

ಜನರು ಎಚ್ಚರದಿಂದಿರಲು ಮನವಿ: ಕಾಡಾನೆ ದಾಳಿಯ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ ಮೂಡಿಗೆರೆ ಎಸಿಎಫ್ ಡಾ. ರಾಜೇಶ್ ನಾಯಕ್ ಅವರು, ಕಾಡಾನೆ ಗಡಿಸಲಿನ ಸಮೀಪ ಹಾದು ಹೋಗಿದ್ದು, ಅಲ್ಲಿ ಮಲಗಿದ್ದ ಇಬ್ಬರಿಗೆ ಗಾಯವಾಗಿದೆ. ಇಬ್ಬರನ್ನು ಎಂ.ಜಿ.ಎಂ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು. ಆನೆ ಬೆಳಗಿನ ಜಾವ ದಾಳಿ ಮಾಡಿದ್ದು ಬೆಳಗಿನ ಜಾವ ಎದ್ದು ಹೊರಗಡೆ ಓಡಾಡುವವರು ಮತ್ತು ವಾಕಿಂಗ್ ಹೋಗುವವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. 

Chikkamagalauru Wild Elephant: ಜನರ ನಿದ್ದೆಗೆಡಿಸಿದ್ದ ಮಲೆನಾಡಿನ ನರಹಂತಕ ಕಾಡಾನೆ ಕೊನೆಗೂ ಸೆರೆ

ಸ್ಥಳೀಯರಿಂದ ಆಕ್ರೋಶ: ನಿನ್ನೆ ಬೆಳಗ್ಗಿನ ಜಾವ ತರೀಕೆರೆ ಸಮೀಪ ಹಾದಿಕರೆಯಲ್ಲಿ ರೈತರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿತ್ತು. ಆದರೆ, ಮೇಲಿಂದ ಮೇಲೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದರೂ ಆನೆ ಹಾವಳಿಗೆ ಸೂಕ್ತ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಒಂಟಿ ಕೊಂಬಿನ ಆನೆ : ಮಲೆನಾಡಿನಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಒಂಟಿಕೊಂಬಿನ ಆನೆ. ಒಂದು ಕೊಂಬು ಅರ್ಧಕ್ಕೆ ತುಂಡಾಗಿದ್ದು ನಿನ್ನೆಯೂ ಅದೇ ಆನೆ ದಾಳಿಮಾಡಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಕೊಟ್ರಕೆರೆ ಭಾಗದಲ್ಲಿ ಈ ಆನೆಯನ್ನು ಜನರು ನೋಡಿದ್ದಾರೆ. ಅದೇ ಆನೆ ಇಂದು ಬಣಕಲ್ ಕಡೆಗೆ ಸಾಗುವಾಗ ಈ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಈ ಆನೆಯೇ ಹೆಚ್ಚು ಉಪದ್ರವ ನೀಡುತ್ತಿದ್ದು ಇದನ್ನು ಹಿಡಿಯಲು ಅರಣ್ಯ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

click me!