
ಹುಬ್ಬಳ್ಳಿ(ಸೆ.27) ನಗರದ ಲ್ಯಾಮಿಂಗ್ಟನ್ ರಸ್ತೆಯ ಹೈಟೆಕ್ ಸಿಟಿ ಸೆಂಟ್ರಲ್ ಲೈಬ್ರರಿ ಸೇರಿದಂತೆ ಧಾರವಾಡ ಹಾಗೂ ಸಪ್ತಾಪುರ ಲೈಬ್ರರಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಲೈಬ್ರರಿಗಳಿಗೆ ವೈಫೈ, ಇ-ಬುಕ್, ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳು ಶೀಘ್ರ ಸೇರಲಿದ್ದು, ಓದುಗರಿಗೆ ಅನುಕೂಲವಾಗಲಿದೆ.
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯದ 26 ಸಿಟಿ ಸೆಂಟ್ರಲ್ ಲೈಬ್ರರಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಇದರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಒಟ್ಟಾರೆ 22 ಗ್ರಂಥಾಲಯಗಳ ಪೈಕಿ ಮೂರು ಗ್ರಂಥಾಲಯಗಳು ಈ ಯೋಜನೆಯಲ್ಲಿ ಸೇರಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಧಾರವಾಡದ ಗ್ರಂಥಾಲಯ ಉಪನಿರ್ದೇಶಕ ಎಂ.ಬಿ. ಕರಿಗಾರ ಅವರು, ಸೆ. 18ರಂದು ಇಲಾಖೆ ಈ ಕುರಿತು ಕೆ-ನಾಮಿಕ್ಸ್ ಟೆಕ್ನೋ ಸಾಲ್ಯೂಶನ್ಸ್ ಪ್ರೈವೇಟ್ ಲಿ.ಗೆ ಟೆಂಡರ್ ನೀಡಿದೆ. ಹುಬ್ಬಳ್ಳಿ ನಗರ ಕೇಂದ್ರ ಗ್ರಂಥಾಲಯದಲ್ಲಿ ವಿವಿಧ ವಿಭಾಗಗಳು ಸೇರಿ ಒಟ್ಟಾರೆ 50 327 ಪುಸ್ತಕಗಳಿವೆ. 10,382 ಕಾಯಂ ಸದಸ್ಯರಿದ್ದು, ಪ್ರತಿನಿತ್ಯ 1800 ರಿಂದ 2 ಸಾವಿರ ಓದುಗರು ಸೌಲಭ್ಯ ಪಡೆಯುತ್ತಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್ ನಲ್ಲಿರುವ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ 99,014 ಹಾಗೂ ಎಸ್‌ಕೆಎಸ್ ಕಾಲನಿ ಸಪ್ತಾಪುರ ಲೈಬ್ರರಿಯಲ್ಲಿ 36783 ಪುಸ್ತಕಗಳಿವೆ. ಡಿಜಿಟಲಿಕರಣದಲ್ಲಿ ಇವುಗಳ ಸಂಪೂರ್ಣ ವಿವರ ದಾಖಲಿಸಲಾಗುವುದು. ಓದುಗರಿಗೆ ಎಲ್ಲಿ ಯಾವ ಪುಸ್ತಕವಿದೆ ಎಂಬ ಮಾಹಿತಿ ತಿಳಿಯುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಏನೇನು ಬರಲಿದೆ?:
ಈ ಮೂರು ಲೈಬ್ರರಿಗೆ ತಲಾ ನಾಲ್ಕು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್‌ಗಳು, 2 ಡೆಸ್ಕ್‌ಟಾಪ್ ಹಾಗೂ ಯುಪಿಎಸ್‌ಗಳು ಸಿಗಲಿವೆ. ಇದರೊಟ್ಟಿಗೆ ಸಾವಿರಾರು ಇ ಬುಕ್‌ಗಳು ಕೂಡ ಸೇರ್ಪಡೆಯಾಗಲಿದೆ. ಹುಬ್ಬಳ್ಳಿ ಸೆಂಟ್ರಲ್ ಲೈಬ್ರರಿ ಈಗಾಗಲೆ ಹೈಟೆಕ್ ಎನಿಸಿಕೊಂಡಿದ್ದು, ಇಲ್ಲಿ ಇಂಟರ್‌ನೆಟ್ ಬ್ರೌಸಿಂಗ್ ವ್ಯವಸ್ಥೆ ಇದ್ದು, ಒಂದು ಗಂಟೆಗೆ ₹ ೫ನಂತೆ ಶುಲ್ಕ ವಿಧಿಸಿ ಸೌಲಭ್ಯ ಒದಗಿಸಲಾಗುತ್ತಿದೆ. ಇದರ ಜತೆಗೆ ವೈಫೈ ಸೌಲಭ್ಯ ಕೂಡ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.
ಮಕ್ಕಳ ಕೇಂದ್ರ ಪ್ರಯೋಜನಕ್ಕಿಲ್ಲ:
ಹುಬ್ಬಳ್ಳಿ ನಗರ ಗ್ರಂಥಾಲಯದಲ್ಲಿ 14 ವರ್ಷದೊಳಗಿನ ಪುಟಾಣಿ ಮಕ್ಕಳಿಗಾಗಿ ತೆರೆದ ಮಕ್ಕಳ ಸಮುದಾಯ ಕೇಂದ್ರ ಪ್ರಯೋಜನ ಪಡೆಯುವವರೆ ಇಲ್ಲದಂತಾಗಿದೆ. ಆರಂಭವಾದ ಮೊದಲು ಪ್ರತಿದಿನ 200 ಮಕ್ಕಳನ್ನು ಪಾಲಕರು ಕರೆತರುತ್ತಿದ್ದರು. ಆದರೆ, ಈಗ ದಿನಕ್ಕೆ ಒಂದು ಮಗು ಬಂದರೂ ಹೆಚ್ಚಾಗಿದೆ. ಇಲ್ಲಿಗೆ ನೀಡಲಾಗಿದ್ದ ಸೌಲಭ್ಯಗಳೆಲ್ಲ ಮೂಲೆ ಸೇರಿದ್ದು, ಕೇಂದ್ರದ ಆವರಣದಲ್ಲಿನ ಒಂದೆರಡು ಆಟಿಕೆ ಮಾತ್ರ ಬಳಕೆಯಲ್ಲಿದೆ. ಅದು ಬಿಟ್ಟರೆ ಲೈಬ್ರರಿಗೆ ಬರುವವರ ಮಧ್ಯಾಹ್ನದ ಊಟದ ಸ್ಥಳವಾಗಿ ಈ ಕೇಂದ್ರ ಬದಲಾಗಿದೆ.
2009 ರಲ್ಲಿ 30 ಲಕ್ಷ ವೆಚ್ಚದಲ್ಲಿ ಈ ಕೇಂದ್ರ ಆರಂಭಿಸಲಾಗಿತ್ತು. ಬೆಳಗ್ಗೆ 10 ರಿಂದ 1 ಹಾಗೂ ಮಧ್ಯಾಹ್ನ 3 ರಿಂದ 6 ರ ವರೆಗೆ ಇದು ತೆರೆದಿರುತ್ತಿತ್ತು. ಹಿಂದೆ ಶಿಕ್ಷಕರೊಬ್ಬರು ಬಿಡುವಿನ ವೇಳೆ ಬಂದು ಮಕ್ಕಳಿಗೆ ಚಿಕ್ಕಪುಟ್ಟ ಪಾಠ ಹೇಳಿಕೊಡುತ್ತಿದ್ದರು.
ಇದಲ್ಲದೆ, ಸಿದ್ದಯ್ಯ ಪುರಾಣಿಕ, ಜಿ.ಪಿ. ರಾಜರತ್ನಂ, ಕುವೆಂಪು, ಶಂಕರನಾರಾಯಣರು ಬರೆದ ಮಕ್ಕಳ ಪುಸ್ತಕ ಸೇರಿ ಸಾಮಾನ್ಯ ಜ್ಞಾನ, ಮ್ಯಾಜಿಕ್ ಪಾಟ್, ಚಂದಮಾಮಾ, ಬಾಲ ಮಂಗಳ ಸೇರಿ ಇಲ್ಲಿ ಎರಡು ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಅದಲ್ಲದೆ, ಕಂಪ್ಯೂಟರ್, ಕನ್ನಡದ ರೈಮ್ಸ್, ಟಾಮ್ ಆ್ಯಂಡ್ ಜೆರಿ ಸಿಡಿ, ಡಿವಿಡಿ, ಎಲ್‌ಸಿಡಿ, ಟಿವಿಯನ್ನೂ ನೀಡಲಾಗಿತ್ತು. ಇವ್ಯಾವವೂ ಈಗ ಬಳಕೆಯಾಗುತ್ತಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ ಸಿಟಿ ಸೆಂಟ್ರಲ್ ಲೈಬ್ರರಿಯ ಅಧೀಕ್ಷಕ ಮುತ್ತಪ್ಪ ಅವರು, ಡಿಜಟಲೀಕರಣಕ್ಕೆ ಮಹಾನಗರ ವ್ಯಾಪ್ತಿಯ ಮೂರು ಗ್ರಂಥಾಲಯಗಳು ಆಯ್ಕೆಗೊಂಡಿವೆ. ಇವುಗಳ ಟೆಂಡರ್ ಮುಗಿದಿದ್ದು, ಓದುಗರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲು ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಎಂ.ಬಿ. ಕರಿಗಾರ ಗ್ರಂಥಾಲಯ ಉಪನಿರ್ದೇಶಕರು ಧಾರವಾಡ ಮಕ್ಕಳ ಸಮುದಾಯ ಕೇಂದ್ರಕ್ಕೆ ಬಂದು ಕೇಳಿದರೆ ನಾವು ಬಾಗಿಲು ತೆರೆದು ಅವರಿಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.